

ಬೆಂಗಳೂರು: ರಾಜಶ್ರೀ ಪೊನ್ನಪ್ಪ ಐದು ವರ್ಷಗಳ ಬಳಿಕ ಮತ್ತೆ ಕನ್ನಡಕ್ಕೆ ವಾಪಸ್ಸಾಗಿದ್ದಾರೆ. 2017ರಲ್ಲಿ ‘ಹ್ಯಾಪಿ ನ್ಯೂ ಇಯರ್’ ಚಿತ್ರದ ಬಳಿಕ ಪರಭಾಷೆಗಳತ್ತ ಗಮನ ಹರಿಸಿದ್ದ ಅವರು, ಈಗ ‘ಅಬ್ಬರ’ ಮೂಲಕ ಮತ್ತೆ ಕನ್ನಡಕ್ಕೆ ರೀಎಂಟ್ರಿ ಕೊಟ್ಟಿದ್ದಾರೆ.
ಈ ಕುರಿತು ‘ವಿಜಯವಾಣಿ’ ಜತೆ ಮಾತಿಗಿಳಿದ ಅವರು, ‘ಚಿರು ಅವರ ಜತೆ ಕೊನೆಯ ಸಿನಿಮಾ ಮಾಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಆ ಬಳಿಕ ನಿರ್ದೇಶಕ ರಾಮ್ ನಾರಾಯಣ್, ಪ್ರಜ್ವಲ್ ದೇವರಾಜ್ ನಾಯಕನಾಗಿರುವ ‘ಅಬ್ಬರ’ ಚಿತ್ರಕ್ಕೆ ಕರೆ ಮಾಡಿದರು. ಆಡಿಷನ್ಸ್ ಮುಗಿದ ಬಳಿಕ ನಟ ರವಿಶಂಕರ್ ಅವರಿಗೆ ಜೋಡಿಯಾಗಿ ಆಯ್ಕೆಯಾಗಿದ್ದೀರಾ ಎಂದರು. ನನಗೆ ಶಾಕ್ ಆಯಿತು. ಹಾಗಂತ ರವಿಶಂಕರ್ ಸಾರ್ ಜತೆ ನಟಿಸಬಾರದು ಅಂತಲ್ಲ. ಆದರೆ, ಸಡನ್ ಆಗಿ ಹಾಗೆ ಹೇಳಿದ್ದು ಆಶ್ಚರ್ಯವಾಯಿತು. ಆ ನಂತರ, ‘ತಮಾಷೆಗಾಗಿ ಹೇಳಿದ್ದು’ ಎಂದರು. ಹೀಗೆ ಪ್ರಾರಂಭವಾದ ಸಿನಿಮಾ, ತಮಾಷೆ ಮಾಡುತ್ತಲೇ ಪೂರ್ಣಗೊಂಡಿತು’ ಎನ್ನುತ್ತಾರೆ ರಾಜಶ್ರೀ ಪೊನ್ನಪ್ಪ.
ಮೊದಲಿಂದಲೂ ಗ್ಲಾಮರಸ್ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿರುವ ರಾಜಶ್ರೀ, ‘ಅಬ್ಬರ’ ಚಿತ್ರದಲ್ಲಿ ಮೊದಲ ಬಾರಿಗೆ ಸಾಂಪ್ರದಾಯಿಕ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ‘ತಂದೆ-ತಾಯಿ, ಕುಟುಂಬಕ್ಕಾಗಿ ಏನು ಬೇಕಾದರೂ ಮಾಡುವಂತಹ, ಯಾವಾಗಲೂ ದೇವಸ್ಥಾನ, ಪೂಜೆ ಎನ್ನುವ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ನಾನು ವೈಯಕ್ತಿಕವಾಗಿ ಟ್ರೆಡಿಷನಲ್, ಮಾಡರ್ನ್ ಎಲ್ಲದರ ಮಿಶ್ರಣ. ಶ್ಲೋಕ, ಮಂತ್ರ, ನೈವೇದ್ಯ ಎಲ್ಲವನ್ನೂ ಮಾಡುತ್ತೇನೆ. ಪಾರ್ಟಿನೂ ಮಾಡುತ್ತೇನೆ. ಆದರೆ, ನನ್ನನ್ನು ನೋಡಿದರೆ ಗ್ಲಾಮರಸ್ ಅಂದುಕೊಳ್ಳುತ್ತಾರೆ’ ಎನ್ನುತ್ತಾರೆ.
ಮೂವರು ನಾಯಕಿಯರಿರುವ ಕಾರಣ ಶೂಟಿಂಗ್ ಸಮಯದಲ್ಲಿ ಜಗಳ ಅಥವಾ ವೈಮನಸ್ಸು ಇತ್ತಾ ಎಂದರೆ, ‘ನನ್ನ ಪಾಲಿಗೆ ಏನು ಬರಬೇಕೋ ಅದು ನನಗೆ ಬಂದೇ ಬರುತ್ತದೆ. ಯಾರೂ ಮತ್ತೊಬ್ಬರ ಅವಕಾಶವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ನನಗೆ ಯಾವುದೇ ಭಯವಿಲ್ಲ. ಇಬ್ಬರಲ್ಲ ಹತ್ತು ಜನ ನಾಯಕಿಯರಿದ್ದರೂ, ನಾನು ನನ್ನ ಪಾಡಿಗೆ ಬಂದು ಕೆಲಸ ಮಾಡುತ್ತೇನೆ. ಈ ಚಿತ್ರದಲ್ಲಿ ಮೂವರು ನಾಯಕಿಯರ ನಡುವೆ ಸ್ಪರ್ಧೆ ಇರಲಿಲ್ಲ, ಬದಲಾಗಿ ಒಬ್ಬರಿಗೊಬ್ಬರು ಸಹಾಯ ಮಾಡುತ್ತಿದ್ದೆವು’ ಎಂದು ‘ಅಬ್ಬರ’ ಚಿತ್ರದಲ್ಲಿ ನಟಿಸಿರುವ ನಿಮಿಕಾ ರತ್ನಾಕರ್ ಮತ್ತು ಲೇಖಾ ಚಂದ್ರ ಕುರಿತು ಹೇಳುತ್ತಾರೆ ರಾಜಶ್ರೀ.