ಮುಂದುವರಿದಿದೆ ಅಣ್ಣಾತ್ತೆ; 20 ದಿನಗಳಿಂದ ಹೈದರಾಬಾದ್​ನಲ್ಲಿ ಸತತ ಚಿತ್ರೀಕರಣ

Rajanikanth - Final
Published on

ಲಾಕ್​ಡೌನ್ ಮತ್ತು ಜನತಾ ಕರ್ಫ್ಯೂವಿನಿಂದ ಬಹುತೇಕ ಎಲ್ಲ ರಾಜ್ಯಗಳಲ್ಲೂ ಸಿನಿಮಾ ಮತ್ತು ಧಾರಾವಾಹಿಗಳ ಚಿತ್ರೀಕರಣ ನಿಲ್ಲಿಸಲಾಗಿದೆ. ಇನ್ನು ಕೆಲವರು ಸ್ವಯಂಪ್ರೇರಿತರಾಗಿ ಚಿತ್ರೀಕರಣ ನಿಲ್ಲಿಸಿದ್ದಾರೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಕರೊನಾ ಕೇಸ್​ಗಳ ಸಂಖ್ಯೆ ಇಳಿಮುಖವಾಗಿರುವುದರಿಂದ ಮತ್ತು ಅಲ್ಲಿ ಚಿತ್ರೀಕರಣ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿರುವುದರಿಂದ, ರಜನಿಕಾಂತ್ ಅಭಿನಯದ ‘ಅಣ್ಣಾತ್ತೆ’ ಚಿತ್ರದ ಚಿತ್ರೀಕರಣ ಅವ್ಯಾಹತವಾಗಿ ಮುಂದುವರೆದಿದೆ.

ಕಳೆದ ವರ್ಷದ ಆರಂಭದಲ್ಲೇ ‘ಅಣ್ಣಾತ್ತೆ’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿತ್ತು. ಲಾಕ್​ಡೌನ್​ನಿಂದ ಹಲವು ತಿಂಗಳುಗಳ ಕಾಲ ಬ್ರೇಕ್ ನೀಡಲಾಗಿತ್ತು. ಈ ವರ್ಷದ ಆರಂಭದಲ್ಲಿ ಮತ್ತೆ ಪ್ರಾರಂಭವಾದರೂ, ಚಿತ್ರತಂಡದಲ್ಲಿ ಏಳೆಂಟು ಜನರಿಗೆ ಕರೊನಾ ಪಾಸಿಟಿವ್ ಆದ ಕಾರಣ ಚಿತ್ರೀಕರಣ ಮತ್ತೆ ನಿಲ್ಲಿಸಲಾಗಿತ್ತು. ಏಪ್ರಿಲ್ ಎರಡನೇ ವಾರದಿಂದ ಚಿತ್ರೀಕರಣ ಮತ್ತೆ ಹೈದರಾಬಾದ್​ನಲ್ಲಿ ಮುಂದುವರೆದಿದ್ದು, ಈಗಾಗಲೇ ಬಹುತೇಕ ಮುಗಿದಿದೆ.

ರಜನಿಕಾಂತ್, ನಯನತಾರಾ ಸೇರಿದಂತೆ ಬಹುತೇಕ ನಟ-ನಟಿಯರು ಅಭಿನಯಿಸಿರುವ ಪ್ರಮುಖ ದೃಶ್ಯಗಳನ್ನು ಈಗಾಗಲೇ ಶೂಟ್ ಮಾಡಲಾಗಿದ್ದು, ಮುಂದಿನ 10-15 ದಿನಗಳಲ್ಲಿ ಮುಗಿಸುವುದಕ್ಕೆ ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಅದರಂತೆ, ಸತತವಾಗಿ ಚಿತ್ರೀಕರಣ ನಡೆಸುತ್ತಿದೆ.

ಇನ್ನು, ಈ ಬಾರಿ ಚಿತ್ರತಂಡದವರಿಗೆ, ಅದರಲ್ಲೂ ರಜನಿಕಾಂತ್ ಅವರಿಗೆ ಯಾವುದೇ ಸಮಸ್ಯೆ ಉಂಟಾಗಬಾರದು ಎಂಬ ಕಾರಣಕ್ಕೆ ಮೇಕಪ್ ಮ್ಯಾನ್ ಒಬ್ಬರನ್ನು ಹೊರತುಪಡಿಸಿ, ಮಿಕ್ಕಂತೆ ಯಾರನ್ನೂ ಅವರ ಹತ್ತಿರ ಬಿಡಲಾಗುತ್ತಿಲ್ಲವಂತೆ. ನಿರ್ದೇಶಕರು ಸಹ ಐದಡಿ ದೂರ ನಿಂತು ದೃಶ್ಯಗಳನ್ನು ವಿವರಿಸುತ್ತಿದ್ದಾರಂತೆ. ಹೀಗೆ ಎಲ್ಲರೂ ನಿಯಮಗಳನ್ನು ಅನುಸರಿ ಸುತ್ತಿರುವುದರಿಂದ, ಚಿತ್ರೀಕರಣ ಪ್ರಾರಂಭವಾಗಿ 20 ದಿನಗಳಾದರೂ ಯಾವುದೇ ಸಮಸ್ಯೆ ಎದುರಾಗಿಲ್ಲ ಎಂದು ಹೇಳಲಾಗುತ್ತಿದೆ. ಅಂದ ಹಾಗೆ, ಈ ಚಿತ್ರವು ದೀಪಾವಳಿಗೆ ಚಿತ್ರ ಬಿಡುಗಡೆ ಆಗುವ ಸಾಧ್ಯತೆ ಇದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net