

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಜ್ ಬಿ. ಶೆಟ್ಟಿ, ಚೈತ್ರಾ ಜೆ. ಆಚಾರ್ ಅಭಿನಯದ "ಟೋಬಿ' ಕಳೆದ ಶುಕ್ರವಾರ (ಆ. 25) ರಾಜ್ಯಾದ್ಯಂತ ಬಿಡುಗಡೆಯಾಗಿದೆ. 150 ಥಿಯೇಟರ್ಗಳಲ್ಲಿ ಹಾಗೂ 60 ಮಲ್ಟಿಪ್ಲೆಕ್ಸ್ ಸೇರಿ 210 ತೆರೆಗಳಲ್ಲಿ ರಿಲೀಸ್ ಆಗಿದೆ. ಮೊದಲ ದಿನ 3 ಕೋಟಿ ರೂ., ಎರಡನೇ 2 ಕೋಟಿ ರೂ. ಗಳಿಸಿರುವ ಚಿತ್ರ, ಆ ಮೂಲಕ ಎರಡು ದಿನಗಳಲ್ಲಿ ಐದು ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿಕೊಂಡಿದೆ. ಇನ್ನು ಭಾನುವಾರ 4 ಕೋಟಿ ರೂ. ಕಲೆಕ್ಷನ್ ಮಾಡಿಕೊಳ್ಳುವ ನಿರೀಕ್ಷೆಯಿದ್ದು, ಮೊದಲ ವಾರಾಂತ್ಯಕ್ಕೆ ಚಿತ್ರದ ಒಟ್ಟು ಗಳಿಕೆ 10 ಕೋಟಿ ರೂ. ದಾಟಲಿದೆ ಎನ್ನಲಾಗಿದೆ.
ಬಸಿಲ್ ಚೊಚ್ಚಲ ನಿರ್ದೇಶನದಲ್ಲಿಯೇ ಗೆಲುವಿನ ನಗು ಬೀರಿದ್ದಾರೆ. ಜತೆಗೆ ಮೂಕ "ಟೋಬಿ'ಯ ಪಾತ್ರದಲ್ಲಿ ಮಿಂಚಿರುವ ರಾಜ್ ಬಿ. ಶೆಟ್ಟಿ ಅಭಿನಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲ. ಚಿತ್ರದ ಪ್ರಮುಖ ತಾರಾಗಣದಲ್ಲಿದ್ದ ಚೈತ್ರಾ ಜೆ. ಆಚಾರ್, ಗೋಪಾಲಕೃಷ್ಣ ದೇಶಪಾಂಡೆ, ದೀಪಕ್ ಶೆಟ್ಟಿ, ಸಂಯುಕ್ತಾ ಹೊರನಾಡು ನಟನೆಯ ಬಗ್ಗೆಯೂ ಎಲ್ಲೆಡೆ ಉತ್ತಮ ಮಾತುಗಳು ಕೇಳಿಬರುತ್ತಿವೆ.
ಮಿಧುನ್ ಮುಕುಂದನ್ ಚಿತ್ರಕ್ಕೆ ಪೂರಕವಾದ ಸಂಗೀತ ನೀಡಿದ್ದಾರೆ ಹಾಗೂ ಕ್ಯಾಮರಾ ಹಿಂದೆ ಪ್ರವಿಣ್ ಶ್ರಿಯಾನ್ ಅಚ್ಚುಕಟ್ಟಾದ ಕೆಲಸ ಮಾಡಿ ಗಮನ ಸೆಳೆದಿದ್ದಾರೆಂದು ಹೇಳಲಾಗುತ್ತಿದೆ. ಭಾನುವಾರದವರೆಗೆ (ಆ.27) ಚಿತ್ರತಂಡ ಬೆಂಗಳೂರಿನಲ್ಲಿ ಥಿಯೇಟರ್ಗಳಿಗೆ ಭೇಟಿ ನೀಡಿ ಪ್ರೇಕ್ಷಕರೊಂದಿಗೆ ಸಿನಿಮಾ ವೀಕ್ಷಿಸಿತ್ತು. ಇದೀಗ ಸೋಮವಾರದಿಂದ "ಟೋಬಿ' ಚಿತ್ರತಂಡ ಮಂಡ್ಯ, ಮೈಸೂರು, ತುಮಕೂರು ಸೇರಿ ರಾಜ್ಯದ ಹಲವೆಡೆ ಪ್ರವಾಸ ಕೈಗೊಂಡಿದೆ. ಚಿತ್ರಮಂದಿರಗಳಿಗೆ ಭೇಟಿ ನೀಡಿ, ಅಭಿಮಾನಿಗಳ ಜತೆ ಸಿನಿಮಾ ನೋಡುತ್ತಿದೆ.