Su From So Review; ಸುಪ್ರೀಮ್​ ನಗು ಫ್ರಮ್​​ ಸೋಮಚ್​ ಕಾಮಿಡಿ!

FotoJet
Published on

ಚಿತ್ರ: ಸು ಫ್ರಮ್​​ ಸೋ

ನಿರ್ದೇಶನ: ಜೆಪಿ ತುಮಿನಾಡ್​

ತಾರಾಗಣ: ಶನೀಲ್​ ಗೌತಮ್​, ರಾಜ್​ ಬಿ. ಶೆಟ್ಟಿ, ಜೆಪಿ ತುಮಿನಾಡ್​, ದೀಪಕ್​ ರೈ ಪಾಣಾಜೆ, ಪ್ರಕಾಶ್​ ತುಮಿನಾಡ್​, ಮೈಮ್​ ರಾಮದಾಸ್​, ಸಂಧ್ಯಾ ಅರೆಕೆರೆ ಮತ್ತಿತರರು

| ಹರ್ಷವರ್ಧನ್​ ಬ್ಯಾಡನೂರು

ಸಿನಿಮಾಗಳಲ್ಲಿ ಮದ್ಯಪಾನ, ಧೂಮಪಾನ, ಮಾದಕ ವಸ್ತು ಹಾಗೂ ಹೆಲ್ಮೆಟ್​ ಧರಿಸುವ ಬಗ್ಗೆ ಎಚ್ಚರಿಕೆ ನೀಡುವಂತೆಯೇ, "ಸು ಫ್ರಮ್​ ಸೋ' ಅರ್ಥಾತ್​ "ಸುಲೋಚನ ಫ್ರಮ್​ ಸೋಮೇಶ್ವರ' ಚಿತ್ರದಾದ್ಯಂತ ಎಚ್ಚರ ಎಚ್ಚರ ಎಚ್ಚರ... ಕಣ್ಣಲ್ಲಿ ನೀರು ಬರುತ್ತೆ... ಸುಸ್ತಾಗಿಬಿಡುತ್ತೀರಿ... ಹೊಟ್ಟೆ ನೋವಾದರೂ ಆಶ್ಚರ್ಯವಿಲ್ಲ... ಅಂತಲೂ ಎಚ್ಚರಿಕೆ ನೀಡಿದರೆ ಉತ್ತಮ. ಏಕೆಂದರೆ ಜೆಪಿ ತುಮಿನಾಡ್​ ತಮ್ಮ ಚೊಚ್ಚಲ ನಿರ್ದೇಶನದಲ್ಲೇ ಅಂತಹ ಒಂದು ಹಾಸ್ಯದ ರಸದೌತಣ ಉಣಬಡಿಸಿದ್ದಾರೆ.

ಅದು ಮಾರ್ಲೂರು. ಕಾಂಟ್ರಾಕ್ಟರ್​ ರವಿ ಅಣ್ಣ (ಶನೀಲ್​ ಗೌತಮ್​) ಊರಿನ ಅಘೋಷಿತ ಲೀಡರ್​. ಊರಿನಲ್ಲಿ ತಿಥಿ, ಮದುವೆ ಅಥವಾ ಏನೇ ಕಾರ್ಯಕ್ರಮ ನಡೆದರೂ ಅದರ ಮುಂದಾಳತ್ವ ಆತನದು. ಆತ ರೆಡಿ ಇಲ್ಲದಿದ್ದರೂ ಆತನ ಹಿಂಬಾಲಕ ಸತೀಶಣ್ಣ (ದೀಪಕ್​ ರೈ) ಬಿಡುವುದಿಲ್ಲ. ಆದರೆ, ಮಾರ್ಲೂರಿನ ನಿವೃತ್ತ ಬ್ಯಾಂಕ್​ ಮ್ಯಾನೇಜರ್​ ಯದು ಅಣ್ಣನಿಗೆ (ಮೈಮ್​ ರಾಮದಾಸ್​) ತಾನು ಅಲ್ಲಿನ ಲೀಡರ್​ ಆಗಬೇಕು ಎಂಬಾಸೆ. ಅದರ ನಡುವೆಯೇ ಊರಿನಲ್ಲಿ ಮದುವೆಯ ಸಂಭ್ರಮ ಮನೆ ಮಾಡಿರುತ್ತದೆ. ಅದೇ ಸಮಯದಲ್ಲಿ ಅಜ್ಜಿಯೊಬ್ಬರು ವಿಧಿವಶರಾಗುತ್ತಾರೆ. ಅದೆರಡರ ನಡುವೆಯೇ ಪೇಂಟರ್​ ಅಶೋಕನಿಗೆ (ಜೆಪಿ ತುಮಿನಾಡ್​) ದೆವ್ವ ಮೆಟ್ಟಿಕೊಳ್ಳುತ್ತದೆ. ಅದು ಸೋಮೇಶ್ವರದ ಸುಲೋಚನ ಆತ್ಮ ಅಂತ ಊರಿನವರಿಗೆ ತಿಳಿಯುತ್ತದೆ. ಅಶೋಕನಿಗೆ ಹಿಡಿದ ದೆವ್ವವನ್ನು ಬಿಡಿಸಲು ಊರಿನವರೆಲ್ಲ ಒಂದಾಗುತ್ತಾರೆ? ತಮ್ಮ ಕೆಲಸದಲ್ಲಿ ಯಶಸ್ವಿ ಆಗುತ್ತಾರಾ? ಎಂಬುದೇ "ಸು ಫ್ರಮ್​​ ಸೋ'. ಆದರೆ ಚಿತ್ರದಲ್ಲಿ ಅದಕ್ಕೂ ಮೀರಿದ ಅಂಶಗಳಿವೆ, ಸಂದೇಶವಿದೆ. ಕರಾವಳಿಯ ಗ್ರಾಮೀಣ ಪ್ರದೇಶದಲ್ಲಿ ಒಂಟಿ ಮಹಿಳೆಯರು ಎದುರಿಸುವ ಸಮಸ್ಯೆಗಳು, ಜನರ ಮೂಢನಂಬಿಕೆ, ಆಚರಣೆಗಳ ಜತೆಗೆ ಗೆಳೆತನ, ಸಾಹಸ, ಸಸ್ಪೆನ್ಸ್​, ಪ್ರೀತಿ... ಎಲ್ಲಕ್ಕಿಂತ ಮಿಗಿಲಾಗಿ ಹೊಟ್ಟೆ ಹುಣ್ಣಾಗುವಷ್ಟು ನಗಿಸುವ ಹಾಸ್ಯವಿದೆ.

ಈ ಚಿತ್ರಕ್ಕೆ ಕಥೆಯೇ ಹೀರೋ. ಜತೆಗೆ ಎಲ್ಲ ಪಾತ್ರಗಳು ಸಹ. ಅದರಲ್ಲೂ ಶಾನಿಲ್​ ಗೌತಮ್​ ನಟನೆ, ಮ್ಯಾನರಿಸಂ, ಆ್ಯಕ್ಷನ್​ ಗಮನ ಸೆಳೆಯುತ್ತದೆ. ರಾಜ್​ ಬಿ. ಶೆಟ್ಟಿ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ. ದೀಪಕ್​ ರೈ ಪಾಣಾಜೆ, ಪ್ರಕಾಶ್​ ತುಮಿನಾಡ್​, ಮೈಮ್​ ರಾಮದಾಸ್​ ಸೇರಿ ಎಲ್ಲ ಪಾತ್ರಗಳೂ ಪ್ರೇಕ್ಷಕರಿಗೆ ಕಚಗುಳಿ ಇಡುತ್ತವೆ. ನಿರ್ದೇಶಕ ಜೆಪಿ ತುಮಿನಾಡ್​ ಪ್ರೇಕ್ಷಕರನ್ನು ನಗಿಸುತ್ತಲೇ ಭಾವುಕರನ್ನಾಗಿಸುವ ಜತೆಗೆ ಗಂಭೀರವಾಗಿ ಯೋಚಿಸುವಂತೆ ಮಾಡುವಲ್ಲಿ ಗೆದ್ದಿದ್ದಾರೆ. ನಿರ್ದೇಶಕನಾಗಿ ಬ್ಯಾಟಿಂಗ್​ಗೆ ಇಳಿದು ಮೊದಲ ಬಾಲ್​ ಸಿಕ್ಸರ್​ ಸಿಡಿಸಿ, ಸೆಂಚುರಿಯತ್ತ ಸಾಗಿದ್ದಾರೆ. ನಟನೆಯಲ್ಲೂ ಪ್ರೇಕ್ಷಕರನ್ನು ಕ್ಲೀನ್​ ಬೌಲ್ಡ್​ ಮಾಡಿದ್ದಾರೆ. ಕಥೆಗೆ ತಕ್ಕಂತೆಯೇ ಸುಮೇಧ್​ ಸಂಗೀತ ಮೂಡಿಬಂದಿದ್ದು, ಚಿತ್ರವನ್ನು ಸರಾಗವಾಗಿ ನೋಡಿಸಿಕೊಂಡು ಹೋಗುತ್ತದೆ.

ಸ್ಟಾರ್​: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net