ರಾಗಿಣಿ ‘ಸಿಂಧೂರಿ’: ಮತ್ತೊಂದು ಮಹಿಳಾ ಪ್ರಧಾನ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿ

rohini
Published on

ಬೆಂಗಳೂರು: ನಟಿ ರಾಗಿಣಿ ದ್ವಿವೇದಿ ಈಗಾಗಲೇ ‘ರಾಗಿಣಿ ಐಪಿಎಸ್’, ‘ವೀರ ರಣಚಂಡಿ’, ‘ದ ಟೆರೆರಿಸ್ಟ್’ ಸೇರಿ ಕೆಲ ಮಹಿಳಾ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಈ ಸಾಲಿಗೆ ಮತ್ತೊಂದು ಸಿನಿಮಾ ಸೇರ್ಪಡೆಯಾಗುತ್ತಿದೆ. ಹೆಸರು ‘ಸಿಂಧೂರಿ’. ಇದೊಂದು ಕಾಲ್ಪನಿಕ ಮರ್ಡರ್ ಮಿಸ್ಟ್ರಿ ಚಿತ್ರವಾಗಿದ್ದು, ‘ಶಂಭೋ ಶಿವಶಂಕರ’ ಖ್ಯಾತಿಯ ಶಂಕರ್ ಕೋನಮಾನಹಳ್ಳಿ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ರಾಗಿಣಿ- ಶಂಕರ್ ಕಾಂಬಿನೇಷನ್‌ನಲ್ಲಿ ‘ಬಿಂಗೋ’ ಎಂಬ ಇನ್ನೊಂದು ಸಿನಿಮಾ ತೆರೆಗೆ ಬರಲು ಸಿದ್ಧವಾಗಿದ್ದು, ಅದರ ಬೆನ್ನಲ್ಲೇ ಮತ್ತೊಂದು ಸಿನಿಮಾ ಸೆಟ್ಟೇರಿದೆ. ನಟ ಧರ್ಮ ಕೀರ್ತಿರಾಜ್ ‘ಸಿಂಧೂರಿ’ಯಲ್ಲಿ ನಟಿಸುತ್ತಿದ್ದು, ಇತ್ತೀಚೆಗಷ್ಟೇ ಬನಶಂಕರಿ ದೇವಸ್ಥಾನದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿತು. ಶಂಕರ್ ಕೋನಮಾನಹಳ್ಳಿ, ‘ಚಿತ್ರದ ಶೀರ್ಷಿಕೆ ಕೇಳಿಯೇ ಕೆಲವರು ರೋಹಿಣಿ ಸಿಂಧೂರಿ ಹಾಗೂ ಡಿ.ಕೆ.ರವಿ ಕಥೆಯಾ ಎಂದು ಕೇಳಿದರು. ಅಲ್ಲ ಇದೊಂದು ಕಾಲ್ಪನಿಕ ಅಂಶದ ಸುತ್ತು ಸುತ್ತುವ ಮರ್ಡರ್ ಮಿಸ್ಟ್ರಿ ಕಥೆ. ಮೇ 10ರಿಂದ ಚಿತ್ರೀಕರಣ ಆರಂಭವಾಗಲಿದ್ದು, 45 ದಿನಗಳಲ್ಲಿ ಒಂದೇ ಹಂತದಲ್ಲಿ ಶೂಟಿಂಗ್ ನಡೆಸಲಾಗುವುದು. ‘ಬಿಂಗೋ’ ಚಿತ್ರೀಕರಣ ಸಮಯದಲ್ಲಿ ಈ ಕಥೆಯ ಒಂದೆಳೆಯನ್ನು ರಾಗಿಣಿಗೆ ಹೇಳಿದ್ದೆ. ಅವರು ಮೆಚ್ಚಿದರು. ಅಲ್ಲಿಂದ ಈ ಜರ್ನಿ ಆರಂಭವಾಯಿತು’ ಎಂದು ಮಾಹಿತಿ ನೀಡುತ್ತಾರೆ. ನಾಯಕಿ ರಾಗಿಣಿ ದ್ವಿವೇದಿ, ‘ಮಹಿಳಾ ಪ್ರಧಾನ ಸಿನಿಮಾ ಮಾಡುವುದು ಸವಾಲಿನ ಕೆಲಸ. ಈ ಚಿತ್ರದ ಕಥೆ ಅಸಾಧಾರಣವಾಗಿದೆ ಅಂತಲ್ಲ, ವಿಭಿನ್ನವಾಗಿದೆ ಎನ್ನಬಹುದು. ಹೆಸರಲ್ಲೇ ಕೆಂಪು ಬಣ್ಣವಿದ್ದು, ಉಗ್ರವಾಗಿದೆ. ದುರ್ಗೆಯ ಶಕ್ತಿ, ಸರಸ್ವತಿಯ ಬುದ್ಧಿ, ಲಕ್ಷ್ಮಿಯ ಸಮೃದ್ಧಿ ಇದೆ’ ಎಂದರು. ಉಳಿದಂತೆ ರಾಕೇಶ್ ತಿಲಕ್ ಛಾಯಾಗ್ರಹಣ, ಹಿತನ್ ಹಾಸನ್ ಸಂಗೀತ, ಹರೀಶ್ ಸಂಭಾಷಣೆ ಚಿತ್ರಕ್ಕಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net