‘ಲವ್ ಮಾಕ್ಟೇಲ್’ಗಿಂಥ ಸಖತ್ತಾಗಿದೆ ... ಹಾಗಂತ ರಘು ದೀಕ್ಷಿತ್ ಹೇಳಿದ್ಯಾಕೆ?

Love Mocktail 2 - Final
Published on

‘ಡಾರ್ಲಿಂಗ್’ ಕೃಷ್ಣ ನಿರ್ದೇಶನದ ‘ಲವ್ ಮಾಕ್ಟೇಲ್’ ಈ ವರ್ಷದ ೆಬ್ರವರಿಯಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತಿತ್ತು. ಅಷ್ಟರಲ್ಲಿ ಲಾಕ್‌ಡೌನ್ ಬಂದು, ಚಿತ್ರದ ಪ್ರದರ್ಶನ ರದ್ದಾಯಿತು. ಆ ನಂತರ ಚಿತ್ರವನ್ನು ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಮಾಡಲಾಯ್ತು. ಅಲ್ಲೂ ಜನರಿಂದ ಒಳ್ಳೆಯ ಮೆಚ್ಚುಗೆ ಪಡೆಯಿತು.

ತಮ್ಮ ಮೊದಲ ನಿರ್ದೇಶನದ ಚಿತ್ರದ ಬಗ್ಗೆ ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆ ವ್ಯಕ್ತವಾಗುತ್ತಿರುವುದನ್ನು ಕಂಡ ಕೃಷ್ಣ, ಚಿತ್ರದ ಸೀಕ್ವೆಲ್ ಮಾಡುವುದಕ್ಕೆ ಯೋಚಿಸಿದ್ದು ಆಗಲೇ. ಕೆಲವು ತಿಂಗಳುಗಳ ಹಿಂದೆ, ತಮ್ಮಲ್ಲಿದ್ದ ಐಡಿಯಾಗಳನ್ನು ಬರೆಯುವುದಕ್ಕೆ ಪ್ರಾರಂಭಿಸಿದ ಕೃಷ್ಣ, ಇದೀಗ ‘ಲವ್ ಮಾಕ್ಟೇಲ್ 2’ ಚಿತ್ರದ ಕಥೆಯನ್ನು ಪೂರ್ತಿಗೊಳಿಸಿದ್ದಾರೆ. ಲಾಕ್‌ಡೌನ್ ಮುಗಿದ ನಂತರ ಚಿತ್ರೀಕರಣವನ್ನು ಪ್ರಾರಂಭಿಸುವುದಕ್ಕೆ ಅವರು ತಯಾರಿ ನಡೆಸುತ್ತಿದ್ದಾರೆ.

ಈ ಮಧ್ಯೆ, ಚಿತ್ರದ ಕಥೆಯನ್ನು ಅವರು ಸಂಗೀತ ನಿರ್ದೇಶಕ ರಘು ದೀಕ್ಷಿತ್‌ಗೆ ಹೇಳಿದ್ದು, ಕಥೆ ಕೇಳಿ ರಘು ಸಹ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, ‘ಕೊನೆಗೂ ‘ಲವ್ ಮಾಕ್ಟೇಲ್ 2’ನ ಕಥೆ ಕೇಳಿದೆ. ಕಥೆ ಕೇಳಿ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದೀನಿ. ಮೊದಲ ಭಾಗಕ್ಕಿಂತ ಬಹಳ ಚೆನ್ನಾಗಿ ಮೂಡಿಬಂದಿದೆ. ಸಖತ್ ಎಕ್ಸಐಟ್ ಆಗಿದ್ದೀನಿ’ ಎಂದು ಕೃಷ್ಣ ಮತ್ತು ಮಿಲನಾ ನಾಗರಾಜ್ ಜತೆಗಿರುವ ಒಂದು ಫೋಟೋ ಹಂಚಿಕೊಂಡಿದ್ದಾರೆ ರಘು ದೀಕ್ಷಿತ್.

ಇನ್ನು ‘ಲವ್ ಮಾಕ್ಟೇಲ್’ ಚಿತ್ರದ ಸೀಕ್ವೆಲ್ ಬಗ್ಗೆ ರಹಸ್ಯವನ್ನು ಕಾಪಾಡಿಕೊಂಡಿರುವ ಕೃಷ್ಣ, ಸದ್ಯಕ್ಕೆ ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಚಿತ್ರೀಕರಣ ಚಟುವಟಿಕೆಗಳು ಪ್ರಾರಂಭವಾಗುತ್ತಿದ್ದಂತೆ, ಚಿತ್ರದ ಬಗ್ಗೆ ಇನ್ನಷ್ಟು ವಿಷಯಗಳನ್ನು ತಿಳಿಸುತ್ತಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net