

ಬೆಂಗಳೂರು: ಜಗ್ಗೇಶ್ ಅಭಿನಯದ 'ರಾಘವೇಂದ್ರ ಸ್ಟೋರ್ಸ್' ಚಿತ್ರದ ಕೆಲಸಗಳು ಕಳೆದ ವರ್ಷವೇ ಮುಗಿದಿತ್ತು. ಆದರೆ, ಚಿತ್ರದ ಬಿಡುಗಡೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿತ್ತು. ಈಗ ಚಿತ್ರದ ಬಿಡುಗಡೆಯ ದಿನಾಂಕ ಹೊರಬಿದ್ದಿದ್ದು, ಏ. 28ರಿಂದ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಶುಕ್ರವಾರ, ಜಗ್ಗೇಶ್ ತಮ್ಮ 60ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ 'ರಾಘವೇಂದ್ರ ಸ್ಟೋರ್ಸ್' ಚಿತ್ರತಂಡದವರು ಜಗ್ಗೇಶ್ಗೆ ಶುಭ ಕೋರುವ ಟೀಸರ್ ಬಿಡುಗಡೆ ಮಾಡುವುದರ ಜತೆಗೆ, ಬಿಡುಗಡೆಯ ದಿನಾಂಕವನ್ನೂ ಘೋಷಿಸಿದ್ದಾರೆ.
ಎಲ್ಲ ಅಂದುಕೊಂಡಂತೆ ಆಗಿದ್ದರೆ, ಕಳೆದ ವರ್ಷ ಆಗಸ್ಟ್ 05ರಂದು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಚಿತ್ರ ಬಿಡುಗಡೆಯಾಗಬೇಕಿತ್ತು. ಚಿತ್ರತಂಡದವರು ಬಿಡುಗಡೆ ದಿನಾಂಕವನ್ನೂ ಘೋಷಿಸಿದ್ದರು. ಆದರೆ, ಆ ಸಂದರ್ಭದಲ್ಲಿ 'ತೋತಾಪುರಿ' ಬಿಡುಗಡೆಯಾದ್ದರಿಂದ, 'ರಾಘವೇಂದ್ರ ಸ್ಟೋರ್ಸ್' ಚಿತ್ರವನ್ನು ಮುಂದೂಡಲಾಗಿತ್ತು.
ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ತಯಾರಾಗಿರುವ 'ರಾಘವೇಂದ್ರ ಸ್ಟೋರ್ಸ್'ನಲ್ಲಿ ಜಗ್ಗೇಶ್, ಶ್ವೇತಾ ಶ್ರೀವಾತ್ಸವ್ ಮುಂತಾದವರಿದ್ದು, ಸಂತೋಷ್ ಆನಂದರಾಮ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.