

‘ಪಾಪಿ ಕಲಿಗಾಲ ಕೆಟ್ಟೋಯ್ತಯ್ಯೋ, ಮನೆಮನೆಗೂ ಕಂಪ್ಯೂಟರ್ ದೇವ್ರಾಯ್ತಯ್ಯಾ ...’ ಎಂಬ ಶಿವರಾಜಕುಮಾರ್ ಅಭಿನಯದ ‘ಅಸುರ’ ಚಿತ್ರದ ಹಾಡಿಗೆ ಕೊರಿಯೋಗ್ರಾಫ್ ಮಾಡಿದವರು ನೃತ್ಯ ನಿರ್ದೇಶಕ ರಾಘವ ಲಾರೆನ್ಸ್. ಬರೀ ನೃತ್ಯ ನಿರ್ದೇಶನ ಮಾಡುವುದಷ್ಟೇ ಅಲ್ಲ, ಆ ಹಾಡಿಗೆ ಅವರೇ ಹೆಜ್ಜೆ ಸಹ ಹಾಕಿದ್ದರು. ಹೀಗೆ ನೃತ್ಯ ನಿರ್ದೇಶಕರಾಗಿದ್ದ ರಾಘವ, ನಂತರದ ದಿನಗಳಲ್ಲಿ ನಟ-ನಿರ್ದೇಶಕ ಎಲ್ಲವೂ ಆದರು.
ಈಗ ಕರೊನಾದಿಂದ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವುದಕ್ಕೆ ಅವರು ದೊಡ್ಡ ಮಟ್ಟದಲ್ಲಿ ಸಹಾಯಹಸ್ತ ಚಾಚಿದ್ದಾರೆ. ಕರೊನಾ ರಿಲೀಫ್ ಫಂಡ್‌ಗೆ ಮೂರು ಕೋಟಿ ದೇಣಿಗೆ ಎತ್ತಿಟ್ಟಿದ್ದಾರೆ. ಪಿಎಂ ಕೇರ್ಸ್ ಫಂಡ್‌ಗೆ 50 ಲಕ್ಷ, ತಮಿಳು ನಾಡು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ, ಫೆಫ್ಸಿ ಒಕ್ಕೂಟಕ್ಕೆ 50 ಲಕ್ಷ, ಡ್ಯಾನ್ಸರ್ಸ್ಸ ಯೂನಿಯನ್‌ಗೆ 50 ಲಕ್ಷ, 25 ಲಕ್ಷ ಅಂಗವಿಕಲರಿಗೆ ಮತ್ತು 75 ಲಕ್ಷ ಹಣವನ್ನು ತಮ್ಮ ಹುಟ್ಟೂರಾದ ರಾಯಪುರಂನ ದಿನಗೂಲಿ ನೌಕರರಿಗೆ ಅವರು ಕೊಡುತ್ತಿದ್ದಾರೆ.
ಈ ಕುರಿತು ಅವರು ಟ್ವಿಟರ್‌ನಲ್ಲಿ ಅಧಿಕೃತವಾಗಿ ಹೇಳಿಕೆ ನೀಡಿದ್ದು, ‘ಚಂದ್ರಮುಖಿ 2’ ಚಿತ್ರಕ್ಕೆ ಸಿಕ್ಕ ಅಡ್ವಾನ್ಸ್ ಹಣವನ್ನು ಸಹ ಅವರು ಅಗತ್ಯವಿರುವವರಿಗೆ ಧನಸಹಾಯ ಮಾಡುತ್ತಿದ್ದಾರೆ.