

ಬಾಲಿವುಡ್‌ನಲ್ಲಿ ಮಿಂಚಿರುವ ಹಲವು ನಟಿಯರು ಡೈರಕ್ಟರ್ ಕ್ಯಾಪ್ ಧರಿಸಿದ್ದಾರೆ. ಇತ್ತೀಚೆಗಷ್ಟೇ ಕಂಗನಾ ರಣಾವತ್ ನಿರ್ದೇಶನದ ‘ಎಮರ್ಜೆನ್ಸಿ’ ರಿಲೀಸ್ ಆಗಿತ್ತು. ಈ ಹಿಂದೆ ಹೇಮಾ ಮಾಲಿನಿ, ನಂದಿತಾ ದಾಸ್, ಪೂಜಾ ಭಟ್, ಕೊಂಕಣ್ ಸೇನ್ ಶರ್ಮಾ ಸೇರಿ ಹಲವು ನಟಿಯರು ನಿರ್ದೇಶಕಿಯರಾಗಿ ಗಮನ ಸೆಳೆದಿದ್ದಾರೆ. ಇದೀಗ ಮಹಿಳಾ ದಿನಾಚರಣೆಯ ಹೊತ್ತಿನಲ್ಲಿಯೇ ಮತ್ತೊಬ್ಬ ನಟಿ ಡೈರೆಕ್ಟರ್ ಕ್ಯಾಪ್ ಧರಿಸುತ್ತಿದ್ದಾರೆ. ಹೌದು, ಹಿಂದಿಯ ‘ಪ್ಯಾಡ್‌ಮ್ಯಾನ್’, ‘ಅಂಧಾದುನ್’ ಜತೆಗೆ ಮರಾಠಿ, ಇಂಗ್ಲೀಷ್, ತೆಲುಗು, ತಮಿಳು ಸೇರಿ 30ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ರಾಧಿಕಾ ಆಪ್ಟೆ, ಆ್ಯಕ್ಷನ್-ಫ್ಯಾಂಟಸಿ ಸಿನಿಮಾ ಮೂಲಕ ನಿರ್ದೇಶಕಿಯಾಗುತ್ತಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಅವರು, ಅದರ ಬೆನ್ನಲ್ಲೇ ಮತ್ತೊಂದು ಹೊಸ ಜವಾಬ್ದಾರಿ ನಿರ್ವಹಿಸಲು ಮುಂದಾಗಿದ್ದಾರೆ. ಈ ಚಿತ್ರಕ್ಕೆ ‘ಕೋಟ್ಯ’ ಎಂದು ಹೆಸರಿಡಲಾಗಿದೆ. ಇದು ಹಿಂದಿ ಹಾಗೂ ಮರಾಠಿ ಎರಡು ಭಾಷೆಗಳಲ್ಲಿ ಮೂಡಿಬರಲಿದೆಯಂತೆ. ಕಬ್ಬು ಕಡಿಯುವ ವಲಸೆ ಕಾರ್ಮಿಕಳೊಬ್ಬಳು ವೈದ್ಯಕೀಯ ಚಿಕಿತ್ಸೆಯಿಂದ ಅಸಾಧಾರಣ ಶಕ್ತಿ ಪಡೆಯುತ್ತಾಳೆ. ಇದರಿಂದ ಆಕೆ ಮುಂದೆ ಹೇಗೆ ತನ್ನ ಕುಟುಂಬವನ್ನು ಸಾಲದಿಂದ ಮುಕ್ತಗೊಳಿಸುತ್ತಾಳೆ ಎಂಬುದು ಚಿತ್ರದ ಒನ್‌ಲೈನ್. ಈ ಮಹಿಳಾ ಪ್ರಧಾನ ಚಿತ್ರವನ್ನು ನಿರ್ದೇಶಕ ವಿಕ್ರಮಾದಿತ್ಯ ಮೋಟ್ವಾನೆ ನಿರ್ಮಿಸುತ್ತಿದ್ದಾರೆ. -ಏಜೆನ್ಸೀಸ್