

ಲಾಕ್ಡೌನ್ ಸಮಯದಲ್ಲಿ ನಾನು ನೋಡಿದ ಮತ್ತು ಬಹಳ ಇಷ್ಟಪಟ್ಟ ಚಿತ್ರ, 2018ರಲ್ಲಿ ಬಂದ ಅರೆಬಿಕ್ ಸಿನಿಮಾ ‘ಕೇಪರ್ನಮ್. ಅಲ್ಲಿನ ಬೈರತ್ ಸ್ಟ್ರೀಟ್ನ ಹುಡುಗನ ಕಥೆ ಇದು. ಮನೆಯಲ್ಲಿನ ಒಂದಷ್ಟು ಮುನಿಸು, ಅಸಂತೋಷ, ತಿರಸ್ಕಾರಕ್ಕೊಳಪಟ್ಟು ಮನೆಯಿಂದ ಓಡಿ ಬರುವ 12ರ ಪೋರನ ಕಥೆ ‘ಕೇಪರ್ನಮ್. ಹಾಗೆ ಓಡಿ ಬಂದ ಬಾಲಕ ಹೇಗೆ ಬದುಕು ಕಟ್ಟಿಕೊಳ್ಳುತ್ತಾನೆ? ಎಂಬುದೇ ಸಿನಿಮಾ. ಗುರುತು ಪರಿಚಯ ಇಲ್ಲದ ಊರಲ್ಲಿ, ಇಥಿಯೋಪಿಯನ್ ಮಹಿಳೆಯೊಬ್ಬಳ ಮನೆಯಲ್ಲಿ ಕೆಲಸಕ್ಕೆ ಸೇರಿ ಆಕೆಯ ಸ್ನೇಹವನ್ನೂ ಗಿಟ್ಟಿಸಿಕೊಳ್ಳುತ್ತಾನೆ. ಮೆಲೋಡ್ರಾಮಾ ಶೈಲಿಯಲ್ಲಿ ಸಾಗುವ ಈ ಸಿನಿಮಾ, ನಿಧಾನಕ್ಕೆ ಭಾವುಕತೆಯ ಬಿಗಿ ಹಿಡಿತಕ್ಕೆ ಸಿಲುಕಿಸುತ್ತದೆ. ಪುಟ್ಟ ಪೋರನ ತಳಮಳ, ಆತನ ಹೋರಾಟ ಎಲ್ಲವೂ ಸಿನಿಮಾದಲ್ಲಿ ಗೋಚರವಾಗುತ್ತ ಸಾಗುತ್ತದೆ. ಚಿಕ್ಕ ಬಾಲಕನ ಆ ಪಯಣವೇ ರೋಚಕ ಅನುಭವ ನೀಡುತ್ತದೆ. ಚಿತ್ರದ ಪ್ರತಿ ದೃಶ್ಯ ಹೊಸ ಲೋಕಕ್ಕೆ ಕರೆದೊಯ್ಯುತ್ತದೆ. ಒಟ್ಟಾರೆ ಸಿನಿಮಾದಲ್ಲಿ ಭಾವನೆಗಳಿಗೆ ಇರುವ ತಾಕತ್ತು ಎಷ್ಟು? ಅದರಿಂದ ಏನೆಲ್ಲ ಸಾಧ್ಯ ಎಂಬುದನ್ನು ನಿರ್ದೇಶಕರು ಸಿನಿಮಾದಲ್ಲಿ ಪೇಂಟಿಂಗ್ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ನದೀನ್ ಲದ್ಕಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ, ಕಾನ್ ಸಿನಿಮೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಮಾಸ್ಟರ್ ಜೈನ್ ಅಲ್ ರಫಿಯಾ ಪಾತ್ರ ಇಡೀ ಸಿನಿಮಾದ ಹೈಲೈಟ್. ಆಸ್ಕರ್ ಪ್ರಶಸ್ತಿಗೂ ಈ ಸಿನಿಮಾ ನಾಮಿನೇಟ್ ಆಗಿತ್ತು. ವಿಶೇಷ ಏನೆಂದರೆ, ಅತಿ ಹೆಚ್ಚು ಗಳಿಕೆ ಮಾಡಿದ ಅರೆಬಿಕ್ ಸಿನಿಮಾ ಎಂಬ ಹೆಗ್ಗಳಿಕೆಗೂ ಈ ಸಿನಿಮಾ ಪಾತ್ರವಾಗಿದೆ.
| ರಾಧಿಕಾ ನಾರಾಯಣ್
ಖ್ಯಾತ ನಿರ್ದೇಶಕ ಪಿ.ಶೇಷಾದ್ರಿ ಅವರ ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ‘ಬೇರು’ ವೀಕ್ಷಿಸಿದೆ.ನಮ್ಮ ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ಕಂಡುಬರುವ ಭ್ರಷ್ಟಾಚಾರ, ಲಂಚಗುಳಿತನ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಶ್ರೀಸಾಮಾನ್ಯರ ಬವಣೆಗಳು ನೈಜವಾಗಿ ಮೂಡಿಬಂದಿದೆ. ಗೊರವಯ್ಯನ ಮನೆ ಶಿಥಿಲಾವಸ್ಥೆ ತಲುಪಲು ಕಾರಣವಾಗಿರುವ ಮರದ ಬೇರು, ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿರುವ ಭ್ರಷ್ಟಾಚಾರದ ಸಂಕೇತವಾಗಿದೆ. ಹಿರಿಯ ಕಲಾವಿದರಾದ ವೆಂಕಟರಾವ್, ದತ್ತಣ್ಣ ಸುಚೇಂದ್ರ ಪ್ರಸಾದ್ ಸೊಗಸಾಗಿ ಅಭಿನಯಿಸಿದ್ದಾರೆ.
| ಶಶಿಧರ್ ಹೊಳ್ಳ
2012ರಲ್ಲಿ ತೆರೆಕಂಡ ‘ಆಗೋ’ ಚಲನಚಿತ್ರವು ಅತ್ಯಂತ ಕುತೂಹಲ ಕೆರಳಿಸುವ ಅತ್ಯುತ್ತಮ ಚಿತ್ರವಾಗಿದೆ. 1979ರಲ್ಲಿ ನಡೆದಿದ್ದ ಇರಾನ್ ಒತ್ತೆಯಾಳು ಬಿಕ್ಕಟ್ಟು ಪ್ರಕರಣ ಆಧರಿಸಿದ ಬೆನ್ ಅಫ್ಲೆಕ್ಸ್ ಅಭಿನಯದ ಈ ಚಿತ್ರವು ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡಿದೆ. ತೆಹರಾನ್ನಲ್ಲಿ ಅಪಹರಣ ಕ್ಕೀಡಾಗಿದ್ದ ಆರು ಅಮೆರಿಕ ರಾಜತಾಂತ್ರಿಕ ಅಧಿಕಾರಿಗಳನ್ನು ಬಿಡುಗಡೆ ಮಾಡುವುದಕ್ಕಾಗಿ ನಡೆಸಿದ ಕಾರ್ಯಾಚರಣೆಯನ್ನು ಆಧರಿಸಿ ಈ ಚಿತ್ರ ಮಾಡಲಾಗಿದೆ. ಸಿನಿಮಾ ನಿರ್ಮಾಣ ಸಂಸ್ಥೆಯ ಸಿಬ್ಬಂದಿಯ ವೇಷದಲ್ಲಿ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿ ಒತ್ತೆಯಾಳುಗಳನ್ನು ಮರಳಿ ಅಮೆರಿಕಕ್ಕೆ ಕರೆತರುವಲ್ಲಿ ಯಶಸ್ವಿಯಾಗುವುದೇ ಈ ಚಿತ್ರದ ಸಾರಾಂಶ. ಬಹಳ ರೋಮಾಂಚನಕಾರಿಯಾಗಿ ಮೂಡಿಬಂದ ಈ ಚಲನಚಿತ್ರವು ಸಿನಿಪ್ರಿಯರಿಗೆ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.
| ಸಂದೀಪ್ ಶರ್ಮ