

ಬೆಂಗಳೂರು: ಸಹೋದರತೆಯ ಬಾಂಧವ್ಯವನ್ನು ಗಟ್ಟಿಗೊಳಿಸುವ ರಕ್ಷಾಬಂಧನ ಇತ್ತೀಚೆಗಷ್ಟೇ ಮುಗಿದಿದೆ. ಈ ಹಬ್ಬದ ಕುರಿತಾಗಿಯೇ, ರಾಧಿಕಾ ನಾರಾಯಣ್ ಮತ್ತು ತಂಡ ಒಂದು ಕಿರುಚಿತ್ರವನ್ನು ಮಾಡಿದೆ. ಅಂದಹಾಗೆ, ಇಡೀ ದೇಶಕ್ಕೆ ಈ ವಿಡಿಯೋ ತಲುಪಬೇಕೆಂಬ ಉದ್ದೇಶದಿಂದ ಹಿಂದಿಯಲ್ಲಿ ಮಾಡಿದ್ದು, ಅದಕ್ಕೆ ‘ರಿಶ್ತೋಂಕಿ ಪೆಹಚಾನ್’ ಎಂಬ ಶೀರ್ಷಿಕೆ ಇಡಲಾಗಿದೆ.
ನಗರ ಪ್ರದೇಶದಲ್ಲಿನ ಫ್ಯಾಷನೇಟ್ ಯುವತಿ ಮತ್ತು ಆಕೆಯ ಅಪಾರ್ಟ್ ಮೆಂಟ್ನ ಸೆಕ್ಯುರಿಟಿ ಗಾರ್ಡ್ ನಡುವಿನ ದಿನನಿತ್ಯದ ಕಥೆಯನ್ನು ಕೇವಲ 2 ನಿಮಿಷ 42 ಸೆಕೆಂಡ್ನಲ್ಲಿ ತೋರಿಸಲಾಗಿದೆ. ಇಲ್ಲಿ ಕಾಯಕ ನಿಷ್ಠೆಯ ಜತೆಗೆ ಕಾಳಜಿಯ ಕರುಣೆಯೂ ಕಾಣಿಸುತ್ತದೆ. ಒಡಹುಟ್ಟಿದವರಷ್ಟೇ ಅಣ್ಣ-ತಮ್ಮಂದಿರಲ್ಲ, ಅದರ ಆಚೆಗೂ ಭಾವನೆಗಳಿವೆ, ನಮ್ಮ ಬಗ್ಗೆ ಕಾಳಜಿ ವಹಿಸುವವರಲ್ಲಿಯೂ ಸಹೋದರತ್ವ ಇದೆ ಎಂಬುದನ್ನು ಈ ಕಿರುಚಿತ್ರದಲ್ಲಿ ಕಾಣಬಹುದಾಗಿದೆ.
ರಾಧಿಕಾ ನಾರಾಯಣ್ ಮತ್ತು ಪ್ರಕಾಶ್ ತುಮ್ಮಿನಾಡ್ ಈ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಅಪ್ಪು ಗೌಡ ನಿರ್ದೇಶನ ಮಾಡಿರುವ ಕಿರುಚಿತ್ರಕ್ಕೆ, ಗೋಕುಲ್ ಅಭಿಷೇಕ್ ಅವರ ಸಂಗೀತವಿದೆ.
ಒಂದೇ ದಿನದಲ್ಲಿ ಈ ಕಿರುಚಿತ್ರವನ್ನು ಚಿತ್ರೀಕರಿಸಲಾಗಿದೆ. ನಾಲ್ಕು ತಿಂಗಳ ಬಳಿಕ ಕ್ಯಾಮರಾ ಮುಂದೆ ಬಂದಿದ್ದು, ಖುಷಿ ಎನಿಸುತ್ತಿದೆ. ಒಡಹುಟ್ಟಿದವರಷ್ಟೇ ಅಣ್ಣ-ತಮ್ಮಂದಿರಲ್ಲ, ನಮ್ಮ ನಡುವೆಯೇ ಆ ಥರದ ಜನ ಇರುತ್ತಾರೆ ಎಂಬುದನ್ನು ಇಲ್ಲಿ ಹೇಳಲಾಗಿದೆ. | ರಾಧಿಕಾ ನಾರಾಯಣ್ ನಟಿ