

ಬೆಂಗಳೂರು: ರಚಿತಾ ರಾಮ್ ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಗುರುವಾರ ಆ ಚಿತ್ರಗಳ ಪಟ್ಟಿಗೆ ಇನ್ನೊಂದು ಹೊಸ ಚಿತ್ರ ಸೇರ್ಪಡೆಯಾಗಿದೆ. ಇದೇ ಮೊದಲ ಬಾರಿಗೆ ಅವರು ಅಜೇಯ್ ರಾವ್ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಗುರು ದೇಶಪಾಂಡೆ ಈ ಚಿತ್ರವನ್ನು ನಿರ್ವಿುಸುತ್ತಿದ್ದಾರೆ. ಅಜೇಯ್ ರಾವ್ ಸಿನಿಮಾಗಳೆಂದರೆ ಕೃಷ್ಣ ಎಂಬ ಹೆಸರಿನಿಂದ ಶುರುವಾಗುವುದು ವಾಡಿಕೆ. ಈ ಚಿತ್ರ ಸಹ ಕೃಷ್ಣ ಎಂಬ ಹೆಸರಿನಿಂದ ಪ್ರಾರಂಭವಾಗುತ್ತದಾ ಎಂಬ ಪ್ರಶ್ನೆ ಇತ್ತು. ಆದರೆ, ಚಿತ್ರಕ್ಕೆ ‘ರಚ್ಚು ಐ ಲವ್ ಯೂ’ ಎಂಬ ಹೆಸರನ್ನು ಇಡಲಾಗಿದೆ.
ವಿಶೇಷವೆಂದರೆ, ಈ ಚಿತ್ರಕ್ಕೆ ನಿರ್ದೇಶಕ ಶಶಾಂಕ್ ಅವರು ಕಥೆ ಬರೆದಿರುವುದು. ಅಜೇಯ್ ರಾವ್ ಅಭಿನಯದಲ್ಲಿ ಶಶಾಂಕ್ ಇದುವರೆಗೂ ಮೂರು ಚಿತ್ರಗಳನ್ನು ನಿರ್ದೇಶಿಸಿದ್ದು, ಈ ಬಾರಿ ಅಜೇಯ್ಗೆ ತಕ್ಕ ಒಂದು ಕಥೆಯನ್ನು ಮಾತ್ರ ನೀಡಿದ್ದಾರೆ. ಮಿಕ್ಕಂತೆ ಅದಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ ಶಂಕರ್ ರಾಜ್. ಶಂಕರ್ ಈ ಹಿಂದೆ ಗುರು ದೇಶಪಾಂಡೆ ನಿರ್ದೇಶನದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿದ್ದು, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ‘ಐ ಲವ್ ರಚ್ಚು’ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸುತ್ತಿದ್ದಾರೆ.