ಕೂಲಿ ಮೂಲಕ ಕಾಲಿವುಡ್‌ಗೆ ಕಾಲಿಟ್ಟ ರಚಿತಾ: ಟ್ರೇಲರ್ ನಲ್ಲಿ ಕಂಡ ಬುಲ್​ ಬುಲ್​ ತಾರೆ

rachitah 2
Published on

ಬೆಂಗಳೂರು: ಲೋಕೇಶ್ ಕನಗರಾಜ್ ನಿರ್ದೇಶನದ ಹಾಗೂ ರಜಿನಿಕಾಂತ್ ಅಭಿನಯದ ‘ಕೂಲಿ’ ಚಿತ್ರವು ಸೆಟ್ಟೇರಿದಾಗಿನಿಂದಲೂ ಸದ್ದು ಮಾಡುತ್ತಲೇ ಬಂದಿದೆ. ಈ ಚಿತ್ರದಲ್ಲಿ ತಮಿಳು ಸೇರಿ ಕನ್ನಡ, ತೆಲುಗು, ಹಿಂದಿ, ಮಲಯಾಳಂ ಚಿತ್ರರಂಗದ ಕಲಾವಿದರು ನಟಿಸುತ್ತಿದ್ದಾರೆ ಎನ್ನುವುದು ವಿಶೇಷ. ಇನ್ನು ಕನ್ನಡದ ಉಪೇಂದ್ರ ‘ಕೂಲಿ’ಯಲ್ಲಿ ಕಾಲೀಶನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಅವರ ಪಾತ್ರದ ಸ್ಟ್‌ಲುಕ್ ಕೂಡ ಬಿಡುಗಡೆಯಾಗಿತ್ತು. ಆ ನಡುವೆ ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ಕೂಡ ‘ಕೂಲಿ’ಯಲ್ಲಿ ಅಭಿನಯಿಸಿದ್ದಾರೆ ಎಂಬ ಸುದ್ದಿ ಹರಡಿತ್ತಾದರೂ, ಎಲ್ಲಿಯೂ ಅಧಿಕೃತವಾಗಿರಲಿಲ್ಲ. ಸ್ವತಃ ನಟಿಗೆ ಈ ಪ್ರಶ್ನೆ ಎದುರಾದಾಗಲೂ ಅವರು ಗುಟ್ಟು ರಟ್ಟುಮಾಡಿರಲಿಲ್ಲ. ಇದೀಗ ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಗಿದ್ದು, ಅದರಲ್ಲಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಈ ಮೂಲಕ ‘ಕೂಲಿ’ಯಲ್ಲಿ ಇರುವುದು ಖಚಿತವಾಗಿದ್ದು, ಬಹುನಿರೀಕ್ಷಿತ ಚಿತ್ರದ ಮೂಲಕವೇ ’ಬುಲ್ ಬುಲ್’ ನಟಿ ಕಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಮೂರು ನಿಮಿಷ ಇರುವ ಟ್ರೇಲರ್‌ನಲ್ಲಿ ರಚಿತಾ, ಫೈಲ್ ಹಿಡಿದುಕೊಂಡು ಕತ್ತಲಲ್ಲಿ ನಡೆದುಕೊಂಡು ಹೋಗುತ್ತಿದ್ದು, ಸರಳವಾದ ಉಡುಗೆಯಲ್ಲಿದ್ದಾರೆ. ಆದರೆ, ಅವರ ಪಾತ್ರದ ಏನು ಎಂಬುದು ಗೊತ್ತಾಗಬೇಕಷ್ಟೇ.ಇನ್ನು ಟ್ರೇಲರ್‌ನಲ್ಲಿ ಚಿತ್ರದ ಎಲ್ಲ ಪಾತ್ರಗಳನ್ನು ತೋರಿಸಲಾಗಿದ್ದು, ರಜಿನಿಕಾಂತ್ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಇದೇ 14ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಇನ್ನು 2021ರಲ್ಲಿ ತೆರೆಕಂಡಿದ್ದ ಸೂಪರ್ ಮಚ್ಚಿ ಚಿತ್ರದ ಮೂಲಕ ನಟಿರಚಿತಾ ರಾಮ್ ತೆಲುಗು ಚಿತ್ರರಂಗಕ್ಕೆ ಪರಿಚಯವಾಗಿದ್ದರು. ಇದೀಗ ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಬಹು ನಿರೀಕ್ಷಿತ ಚಿತ್ರದ ಮೂಲಕ ನಟಿ ತಮಿಳಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ಸದ್ಯ ಕನ್ನಡದಲ್ಲೂ ಬಹುಬೇಡಿಕೆ ನಟಿಯಾಗಿರುವ ರಚಿತಾ ರಾಮ್ ಸ್ಯಾಂಡಲ್ವುಡ್ ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಲವ್ ಮಿ ಆರ್ ಹೇಟ್ ಮಿ, ಆಯೋಗ್ಯ 2, ಕಲ್ಟ್​ ಹಾಗೂ ರಾಚಯ್ಯ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ಕಲ್ಟ್ ಚಿತ್ರಕ್ಕೆ ರಚಿತಾ ಬರೋಬ್ಬರಿ 1 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂಬ ಮಾತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net