ರಚಿತಾ-ಚಿರು ಏಪ್ರಿಲ್ ಶುರು

Rachita
Published on

ಬೆಂಗಳೂರು: ನಟ ಚಿರಂಜೀವಿ ಸರ್ಜಾ ಮತ್ತು ನಟಿ ರಚಿತಾ ರಾಮ್ ಅವರಿಗೆ ಈಗ ‘ಏಪ್ರಿಲ್’ ಶುರುವಾಗಿದೆ. ‘ಇದೇನಿದು.. ಜನವರಿಯಲ್ಲಿ ಇವರಿಗಷ್ಟೇ ಹೇಗೆ ಏಪ್ರಿಲ್?!’ ಎಂದು ಆಶ್ಚರ್ಯವಾಗದೆ ಇರದು. ಆದರೆ ಇಲ್ಲಿ ಹೇಳುತ್ತಿರುವುದು ಚಿರು ಮತ್ತು ರಚಿತಾ ಮೊದಲ ಬಾರಿಗೆ ಜತೆಯಾಗಿ ಅಭಿನಯಿಸುತ್ತಿರುವ ‘ಏಪ್ರಿಲ್’ ಚಿತ್ರದ ಕುರಿತು. ಸೋಮವಾರದಿಂದಲೇ ಈ ಚಿತ್ರದ ಶೂಟಿಂಗ್ ಆರಂಭವಾಗಲಿರುವುದರಿಂದ ಅವರಿಗೀಗ ‘ಏಪ್ರಿಲ್’ ಶುರುವಾಗಿದೆ.

‘ಇದೊಂದು ಆಕ್ಷನ್, ಥ್ರಿಲ್ಲರ್, ಸಸ್ಪೆನ್ಸ್ ಸಿನಿಮಾ. ಚಿರು-ರಚಿತಾ ಈ ಹಿಂದಿನ ಚಿತ್ರಗಳಿಗಿಂತ ವಿಭಿನ್ನವಾಗಿ ‘ಏಪ್ರಿಲ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಾವುದರಲ್ಲೂ ಬೇರೆಯವರ ಸಹಾಯ ಪಡೆಯದ, ಸ್ವತಂತ್ರವಾಗಿ ಬದುಕುವ ಹುಡುಗಿ ಆಗಿ ರಚಿತಾ ಕಾಣಿಸಿಕೊಂಡಿದ್ದಾರೆ. ಇವರು ಸಮಸ್ಯೆಗೆ ಸಿಲುಕಿದಾಗ ನಾಯಕ ಬೆಂಬಲಕ್ಕೆ ನಿಂತು ಸಮಸ್ಯೆ ಹೇಗೆ ಬಗೆಹರಿಸುತ್ತಾನೆ’ ಎಂಬುದೇ ಚಿತ್ರಕಥೆ ಎನ್ನುವ ನಿರ್ದೇಶಕ ಸತ್ಯ ರಾಯಲ, ಚಿರು ಪಾತ್ರದ ಬಗ್ಗೆ ಮಾಹಿತಿ ಬಿಟ್ಟುಕೊಡುವುದಿಲ್ಲ.

ಇತ್ತೀಚೆಗಷ್ಟೇ ಚಿತ್ರತಂಡ ನಟ ಚಿರಂಜೀವಿ ಸರ್ಜಾ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಮಿಸ್ಸಿಂಗ್ ಎಂದು ಬಾಲಕಿಯ ಫೋಟೋ ಹಿಡಿದು ರಚಿತಾ ನಿಂತಿದ್ದರೆ, ರಚಿತಾ ಮಿಸ್ಸಿಂಗ್ ಎಂದು ಅವರ ಚಿತ್ರ ಒಳಗೊಂಡ ಫೋಟೋ ಹಿಡಿದು ಚಿರು ನಿಂತಿದ್ದಾರೆ. ಹೀಗಾಗಿ ಚಿತ್ರದ ಫಸ್ಟ್​ಲುಕ್ ಪೋಸ್ಟರ್ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರಕ್ಕೆ ‘8 ಎಂಎಂ’ ಖ್ಯಾತಿಯ ನಿರ್ವಪಕ ನಾರಾಯಣ ಬಾಬು ಬಂಡವಾಳ ಹೂಡಿದ್ದು, ಆರ್. ಗಿರೀಶ್ ಗೌಡ ಛಾಯಾಗ್ರಹಣ, ಸಚಿನ್ ಬಸ್ರೂರು ಸಂಗೀತ ನೀಡಿದ್ದಾರೆ. ರಚಿತಾ ರಾಮ್ ಸದ್ಯ ರಮೇಶ್ ಅರವಿಂದ ನಟನೆಯ ‘100’, ಜೋಗಿ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’, ಧನಂಜಯ್ ಜತೆ ‘ಡಾಲಿ’ ಚಿತ್ರ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ಬಿಜಿ ಆಗಿದ್ದಾರೆ. ನಟ ಚಿರಂಜೀವಿ ಸರ್ಜಾ ಕೂಡ ‘ರಣಂ’, ‘ಕ್ಷತ್ರಿಯ’ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಅಭಿನಯದ ‘ಖಾಕಿ’ ಚಿತ್ರ ಜ. 24ರಂದು ಬಿಡುಗಡೆ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net