

ಬೆಂಗಳೂರು: ಸಾಲುಸಾಲು ಸಿನಿಮಾ ಒಪ್ಪಿಕೊಂಡಿದ್ದ ಹಿನ್ನೆಲೆಯಲ್ಲಿ ಡೇಟ್ಸ್ ಸಮಸ್ಯೆಯಿಂದ ‘ಕಸ್ತೂರಿ ಮಹಲ್’ ಚಿತ್ರದಿಂದ ರಚಿತಾ ರಾಮ್ ಹೊರಬಂದಿದ್ದರು. ಆದರೆ, ಯಾಕೋ ಏನೋ ರಚಿತಾ ಅವರನ್ನು ಕಸ್ತೂರಿ ಮಾತ್ರ ಕೈ ಬಿಡುವಂತೆ ಕಾಣಿಸುತ್ತಿಲ್ಲ. ಹಾಗಂತ ಅವರು ಮತ್ತೆ ‘ಕಸ್ತೂರಿ ಮಹಲ್’ ತಂಡ ಸೇರಿಕೊಂಡರಾ ಎಂಬ ಪ್ರಶ್ನೆ ಬರಬಹುದು. ಹಾಗೇನು ಆಗಿಲ್ಲ. ಬದಲಿಗೆ ‘ಪಂಕಜ ಕಸ್ತೂರಿ’ ಎಂಬ ಇನ್ನೊಂದು ಹೊಸ ಚಿತ್ರದಲ್ಲಿ ರಚಿತಾ ನಟಿಸುತ್ತಿದ್ದಾರೆ.
ಕಾಲಿವುಡ್ನಲ್ಲಿ ತಯಾರಾಗಿದ್ದ ನಯನತಾರಾ ಮತ್ತು ಯೋಗಿ ಬಾಬು ನಟಿಸಿದ್ದ ‘ಕೊಲಮಾವು ಕೋಕಿಲ’ ಚಿತ್ರವು ಕನ್ನಡಕ್ಕೆ ರೀಮೇಕ್ ಆಗುತ್ತಿದೆ ಮತ್ತು ರಚಿತಾ ರಾಮ್ ಅದರಲ್ಲಿ ನಟಿಸುತ್ತಿದ್ದಾರೆ ಎಂಬುದು ಹಳೆಯ ಸುದ್ದಿ. ಈಗ ಅದೇ ಚಿತ್ರಕ್ಕೆ ‘ಪಂಕಜ ಕಸ್ತೂರಿ’ ಎಂಬ ಹೆಸರಿಡಲಾಗಿದ್ದು, ಮುಂದಿನ ಕೆಲವು ದಿನಗಳಲ್ಲಿ ಚಿತ್ರದ ಚಿತ್ರೀಕರಣಪೂರ್ವ ಕೆಲಸಗಳು ಶುರುವಾಗಲಿವೆ. ಈ ಹಿಂದೆ ರಚಿತಾ ರಾಮ್ ನಿರ್ವಿುಸಿದ್ದ ‘ವೃಷಭಪ್ರಿಯ’ ಕಿರುಚಿತ್ರಕ್ಕೆ ಮಯೂರ ರಾಘವೇಂದ್ರ ನಿರ್ದೇಶನ ಮಾಡಿದ್ದರು. ಅದಾದ ಬಳಿಕ ‘ಕನ್ನಡ್ ಗೊತ್ತಿಲ್ಲ’ ಅನ್ನೋ ಪೂರ್ಣಪ್ರಮಾಣದ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದರು. ಇದೀಗ ‘ಪಂಕಜ ಕಸ್ತೂರಿ’ ಚಿತ್ರವನ್ನು ಅವರು ನಿರ್ದೇಶಿಸುತ್ತಿದ್ದಾರೆ. ತಮ್ಮ ಹೊಸ ಚಿತ್ರದ ಕುರಿತು ಮಾತನಾಡುವ ಮಯೂರ, ‘ದೀಪಾವಳಿ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಿದ್ದೇವೆ. ಸದ್ಯ ರಚಿತಾ ಅವರ ಖಾತೆಯಲ್ಲಿ ಹಲವು ಸಿನಿಮಾಗಳಿರುವುದರಿಂದ ಜನವರಿಯಲ್ಲಿ ನಮ್ಮ ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಪಾತ್ರವರ್ಗದ ಆಯ್ಕೆಯೂ ನಡೆಯುತ್ತಿದೆ. ಇನ್ನೊಂದು ತಿಂಗಳಲ್ಲಿ ಎಲ್ಲವೂ ಅಧಿಕೃತವಾಗಲಿದೆ’ ಎಂದು ಮಾಹಿತಿ ನೀಡುತ್ತಾರೆ. ತಾಂತ್ರಿಕ ವರ್ಗದ ಆಯ್ಕೆಯೂ ನಡೆಯುತ್ತಿದ್ದು, ಗಿರಿಧರ್ ದಿವಾನ್ ‘ಪಂಕಜ ಕಸ್ತೂರಿ’ಯ ಛಾಯಾಗ್ರಾಹಕರಾಗಿ ಕೆಲಸ ಮಾಡಲಿದ್ದಾರೆ. ಇನ್ನುಳಿದಂತೆ ಇಬ್ಬರು ಸಂಗೀತ ನಿರ್ದೇಶಕರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿ ದ್ದಾರೆ ಎಂಬುದು ನಿರ್ದೇಶಕರ ಮಾತು.