

ಬೆಂಗಳೂರು: ‘ಲವ್ ಮಾಕ್ಟೇಲ್ 2’ನ ರಾಶೆಲ್ ಡೇವಿಡ್ ಇತ್ತೀಚಿನ ದಿನಗಳಲ್ಲಿ ಒಂದರಹಿಂದೊಂದು ಚಿತ್ರಗಳಲ್ಲಿ ಬಿಜಿಯಾಗುತ್ತಿದ್ದಾರೆ. ‘ಲವ್ ಮಾಕ್ಟೇಲ್ 2’ ನಂತರ ‘ಕಂಟ್ರಿಮೇಡ್’ ಎಂಬ ಚಿತ್ರಕ್ಕೆ ಅವರು ನಾಯಕಿಯಾದರು. ‘ಭುವನಂ ಗಗನಂ’ ಚಿತ್ರತಂಡಕ್ಕೂ ಸೇರಿಕೊಂಡರು. ಈಗ ದೀಪಕ್ ಮಧುವನಹಳ್ಳಿ ನಿರ್ದೇಶನದ ಹೊಸ ಚಿತ್ರಕ್ಕೂ ರಾಶೆಲ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
‘ಭಾಗ್ಯರಾಜ್’, ‘ಕಳ್ಬೆಟ್ಟದ ದರೋಡೆಕೋರರು’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ದೀಪಕ್, ಇತ್ತೀಚೆಗೆ ಹೊಸ ಚಿತ್ರವೊಂದನ್ನು ಶುರು ಮಾಡಿದ್ದರು. ‘ರಾಮ ರಾಮಾ ರೇ’ ಖ್ಯಾತಿಯ ಸತ್ಯಪ್ರಕಾಶ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ವಿುಸುತ್ತಿರುವ ಈ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆದಿತ್ತು. ಆದರೆ, ಈ ಚಿತ್ರದಲ್ಲಿ ಯಾರೆಲ್ಲ ನಟಿಸುತ್ತಾರೆ ಎಂಬ ವಿಷಯ ಬಹಿರಂಗವಾಗಿರಲಿಲ್ಲ. ಅದೀಗ ಬಯಲಾಗಿದೆ. ಮಿಲಿಂದ್ ಮತ್ತು ರಾಶೆಲ್ ನಾಯಕ-ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿಲಿಂದ್ ಇದಕ್ಕೂ ಮುನ್ನ ‘ವೀಕೆಂಡ್’ ಎಂಬ ಚಿತ್ರದಲ್ಲಿ ನಟಿಸಿದ್ದು, ಈ ಹೊಸ ಚಿತ್ರದಲ್ಲಿ ಪೂರ್ಣಪ್ರಮಾಣದ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಚಿತ್ರವು ಸತ್ಯ ಪಿಕ್ಚರ್ಸ್ ಹಾಗೂ ಮಯೂರ ಪಿಕ್ಚರ್ಸ್ ನಡಿ ನಿರ್ವಣವಾಗುತ್ತಿದ್ದು, ಅನೂಪ್ ಸೀಳಿನ್ ಸಂಗೀತ ಹಾಗೂ ಲವಿತ್ ಅವರ ಛಾಯಾಗ್ರಹಣವಿದೆ. ಈ ತಿಂಗಳ ಕೊನೆಗೆ ಚಿತ್ರೀಕರಣ ಪ್ರಾರಂಭವಾಲಿದ್ದು, ಅವಿನಾಶ್, ಸಾಧು ಕೋಕಿಲ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.