

ಬೆಂಗಳೂರು: ‘ಲವ್ ಮಾಕ್ಟೇಲ್ 2’ ನಂತರ ಮುಂದೇನು ಎಂಬ ಪ್ರಶ್ನೆ ಬರುವುದಕ್ಕೂ ಸಮಯ ಕೊಡದೆ, ಇನ್ನೊಂದು ಹೊಸ ಚಿತ್ರಕ್ಕೆ ನಾಯಕಿಯಾಗಿದ್ದಾರೆ ರಾಚೆಲ್ ಡೇವಿಡ್. ‘ಕಂಟ್ರಿಮೇಡ್’ ಎಂಬ ಚಿತ್ರದಲ್ಲಿ ರಾಚೆಲ್ ನಾಯಕಿಯಾಗಿ ನಟಿಸುತ್ತಿದ್ದು, ಚಿತ್ರದ ಮುಹೂರ್ತ ಸಹ ಸದ್ದಿಲ್ಲದೆ ಮುಗಿದಿದೆ. ‘ಕಂಟ್ರಿಮೇಡ್’ನಲ್ಲಿ ತಮ್ಮ ಪಾತ್ರದ ಕುರಿತು ಮಾತನಾಡುವ ರಾಚೆಲ್, ‘ಕೋಲ್ಕತ್ತಾದಿಂದ ಉತ್ತರ ಕರ್ನಾಟಕಕ್ಕೆ ಬರುವ ಪಾತ್ರ ನನ್ನದು. ‘ಲವ್ ಮಾಕ್ಟೇಲ್ 2’ ನಂತರ ಒಂದೊಳ್ಳೆಯ ಚಿತ್ರ ಮತ್ತು ಪಾತ್ರಕ್ಕಾಗಿ ಎದುರು ನೋಡುತ್ತಿದ್ದಾಗ, ಸಿಕ್ಕಿದ್ದು ‘ಕಂಟ್ರಿಮೇಡ್’. ಬಹಳ ಚಾಲೆಂಜಿಂಗ್ ಆದ ಪಾತ್ರ ಇಲ್ಲಿದೆ’ ಎನ್ನುತ್ತಾರೆ ಅವರು.
‘ಗಂಟು ಮೂಟೆ’ ಮತ್ತು ‘ಟಾಮ್ ಆಂಡ್ ಜೆರ್ರಿ’ ಚಿತ್ರಗಳಲ್ಲಿ ನಾಯಕನಾಗಿದ್ದ ನಿಶ್ಚಿತ್ ಕೊರೋಡಿ ಈ ಚಿತ್ರದ ಹೀರೋ. ಈ ಬಾರಿ ಮಾಸ್ ಅವತಾರದಲ್ಲಿ ಪ್ರೇಕ್ಷಕರ ಎದುರು ಕಾಣಿಸಿಕೊಳ್ಳುವುದಕ್ಕೆ ತಯಾರಿ ನಡೆಸಿದ್ದಾರೆ. ಊರು ಬಿಟ್ಟು ಕೊಲ್ಕತ್ತಾ ಸೇರಿಕೊಳ್ಳುವ ನಾಯಕ ಪುನಃ ಇಲ್ಲಿಗೆ ಬಂದಾಗ ಏನೆಲ್ಲ ನಡೆಯುತ್ತದೆ ಎನ್ನುವುದು ಚಿತ್ರದ ಕಥೆಯಂತೆ.
ಈ ಕಥೆಯ ಬಗ್ಗೆ ಇನ್ನಷ್ಟು ವಿವರವಾಗಿ ಹೇಳುವ ನಿರ್ದೇಶಕ ರಾಘವ ಸೂರ್ಯ, ‘ಒಬ್ಬ ಯುವಕ ಮತ್ತು ಗನ್ವೊಂದರ ಸುತ್ತ ಸುತ್ತುವ ಕಥೆ ಇದು. ಕಂಟ್ರಿಮೇಡ್ ಎಂದರೆ ಮೊದಲಿಗೆ ನೆನಪಿಗೆ ಬರುವುದು ಕೊಲ್ಕತ್ತಾ. ಏಕೆಂದರೆ, ಕಂಟ್ರಿಮೇಡ್ ಪಿಸ್ತೂಲುಗಳಿಗೆ ಕೊಲ್ಕತ್ತಾ ಬಹಳ ಜನಪ್ರಿಯ. ಅಲ್ಲಿ ಪಿಸ್ತೂಲುಗಳನ್ನು ಮಾಡುವ ವ್ಯವಸ್ಥಿತ ಜಾಲವೇ ಇದೆ. ಕೊಲ್ಕತ್ತಾದ ಪಿಸ್ತೂಲಿಗೂ, ಉತ್ತರ ಕರ್ನಾಟಕದ ನಾಯಕನಿಗೂ ಏನು ಸಂಬಂಧ ಎಂಬುದು ಚಿತ್ರಮಂದಿರಗಳಲ್ಲೇ ನೋಡಿ. ಇದೊಂದು ಆಕ್ಷನ್ ಸಿನಿಮಾ’ ಎನ್ನುತ್ತಾರೆ ಅವರು. ‘ಗೊಂಬೆ ಪಿಕ್ಚರ್ಸ್’ ಬ್ಯಾನರ್ನಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.