ಪುನೀತ್​ರನ್ನು ಪವರ್​ಸ್ಟಾರ್ ಎಂದು ಕರೆಯುವುದ್ದೇಕೆ? 2014ರಲ್ಲಿ ಅಪ್ಪು ಆಡಿದ ಈ ಮಾತು ಕಣ್ಣೀರು ತರಿಸುತ್ತೆ​

puneeth rajkumar (2)
Published on

ಬೆಂಗಳೂರು: ಕನ್ನಡ ಚಿತ್ರರಂಗ ಧ್ರುವತಾರೆ ಪುನೀತ್​ ರಾಜ್​ಕುಮಾರ್​ ಇಂದು ನಮ್ಮ ನಡುವೆ ಇಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಮೊನ್ನೆಯಷ್ಟೇ ಹಾಡಿ ನಲಿದಿದ್ದ ಅಪ್ಪ ನಿನ್ನೆ ದಿಢೀರನೇ ಮೃತಪಟ್ಟಿದ್ದು, ಇಡೀ ರಾಜ್ಯಕ್ಕೆ ಬಹು ದೊಡ್ಡ ಆಘಾತವಾಗಿದೆ. 46ನೇ ವಯಸ್ಸಿನಲ್ಲಿ ಅಪ್ಪು ಅಕಾಲಿಕವಾಗಿ ಮರಣ ಹೊಂದಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

ಪುನೀತ್​ ಮೃತಪಟ್ಟ ಸುದ್ದಿ ಕೇಳಿ ಇಡೀ ಭಾರತೀಯ ಚಿತ್ರರಂಗವೇ ಕಂಬನಿ ಮಿಡಿಯುತ್ತಿದೆ. ಟ್ವಿಟರ್​ನಲ್ಲಿ ಸಂತಾಪಗಳ ಸುರಿಮಳೆಯೇ ಹರಿದುಬರುತ್ತಿದೆ. ದಿಗ್ಗಜ ನಟ ರಾಜಕುಮಾರ್​ ಮತ್ತು ಪಾರ್ವತಮ್ಮ ರಾಜ್​ಕುಮಾರ್​ ಅವರ ಕಿರಿಯ ಮಗನಾಗಿರುವ ಪುನೀತ್​ ರಾಜ್​ಕುಮಾರ್​, ಅಭಿಮಾನಿಗಳ ಮನದಲ್ಲಿ ಪವರ್​ ಸ್ಟಾರ್​ ಎಂದೇ ಚಿರಪರಿಚಿತರು. ಕೇವಲ ತೆರೆಯ ಮೇಲಿನ ಸ್ಟಾರ್​ಡಮ್​ ಮಾತ್ರವಲ್ಲದೇ ವ್ಯಕ್ತಿತ್ವದಿಂದಲೂ ಪುನೀತ್​ ಬಹುದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಪುನೀತ್​ರನ್ನು ಅಭಿಮಾನಿಗಳು ಪವರ್​ ಸ್ಟಾರ್​ ಎಂದು ಕರೆಯಲು ಅವರ ವಿನಯವಂತಿಕೆ ಮಾತ್ರ ಕಾರಣವಲ್ಲ, ಅವರು ಪ್ರತಿಯೊಬ್ಬರನ್ನು ಗೌರವಿಸುವ ರೀತಿಯು ಬಹು ಮುಖ್ಯ ಕಾರಣವಾಗಿದೆ. ತಮ್ಮ ಎದುರಿಗೆ ಸಿಕ್ಕ ಪ್ರತಿ ವ್ಯಕ್ತಿಯನ್ನು ನಗುತ್ತಾ ಪ್ರೀತಿಯಿಂದಲೇ ಮಾತನಾಡಿಸುವ ಪುನೀತ್​, ಎಂದೂ ಯಾರಿಗೂ ರೇಗಿದವರಲ್ಲ. ತಮ್ಮನ್ನು ಹುಡುಕಿಕೊಂಡು ಮನೆಗೆ ಬರುವ ಅಭಿಮಾನಿಗಳಿಗೆ ಪುನೀತ್​ ಎಂದೂ ನಿರಾಸೆ ಮಾಡಿದವರಲ್ಲ.

ಬಾಕ್ಸ್​ ಆಫೀಸ್​ ರೆಕಾರ್ಡ್​ ವಿಚಾರ ಬಂದರೆ ಪುನೀತ್​ ರಾಜ್​ಕುಮಾರ್​ ಇತಿಹಾಸ ಸೃಷ್ಟಿಸಿದ್ದಾರೆ. ಒಟ್ಟು 49 ಸಿನಿಮಾಗಳಲ್ಲಿ 40 ಚಿತ್ರ 100 ದಿನ ಪೂರೈಸಿವೆ. ಪುನೀತ್​ ಚಿತ್ರಗಳು ಶೇಕಡ 90 ರಷ್ಟು ಗೆಲುವು ಕಂಡಿವೆ. ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಪಾದನೆ ಪಡೆಯುವ ನಟರಲ್ಲಿ ಪುನೀತ್​ ಒಬ್ಬರಾಗಿದ್ದರು. 29 ಚಿತ್ರಗಳಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ.

ಪುನೀತ್​ ಅವರ ಯಶಸ್ಸಿನ ಪ್ರಯಾಣದಲ್ಲಿ ಅಭಿಮಾನಿಗಳ ಪಾತ್ರ ತುಂಬಾ ಮುಖ್ಯವಾಗಿದೆ. 2014ರಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪುನೀತ್​, ಪವರ್​ ಸ್ಟಾರ್​ ಎಂಬ ಬಿರುದು ನನಗೆ ಅಭಿಮಾನಿಗಳು ಕೊಟ್ಟಿದ್ದು. ಅಭಿಮಾನಿಗಳೇ ನನ್ನ ಪವರ್​ ಎಂದು ಹೇಳಿಕೊಂಡಿದ್ದರು. ಇಂದಿಗೆ ಈ ಮಾತು ನೆನೆಪಿಸಿಕೊಂಡರೆ ನಿಜಕ್ಕೂ ಅಭಿಮಾನಿಗಳ ಕಣ್ಣಲ್ಲಿ ನೀರು ತುಂಬಿಕೊಳ್ಳುವುದು ಖಂಡಿತ.

ಚಲನಚಿತ್ರ ಮಾತ್ರವಲ್ಲದೇ ಪುನೀತ್​, ಕಿರುತೆರೆಯಲ್ಲೂ ಛಾಪು ಮೂಡಿಸಿದ್ದಾರೆ. ಕನ್ನಡ ಕೋಟ್ಯಧಿಪತಿ ರಿಯಾಲಿಟಿ ಶೋ ಮೂಲಕ ಕನ್ನಡದ ಪ್ರತಿ ಮನೆ ಮಂದಿಯ ಹೃದಯ ಗೆದ್ದರು. ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿರುವ ಪುನೀತ್​, ಕೇವಲ ನಟನಾಗಿ ಮಾತ್ರವಲ್ಲದೆ ಸಮಾಜಮುಖಿ ಕೆಲಸಗಳಿಂದಲೂ ತುಂಬಾ ಮನೆ ಮಾತನಾದ್ದರು. ಇದೀಗ ಅಕಾಲಿಕ ಮರಣದಿಂದಾಗಿ ಅವರನ್ನು ಪ್ರೀತಿಸುವವರನ್ನು ಅನಾಥರನ್ನಾಗಿ ಮಾಡಿ ಹೋಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net