ಕುವೈತ್​ ಬೆನ್ನಲ್ಲೇ ಬೀಸ್ಟ್​ ಚಿತ್ರಕ್ಕೆ ತಮಿಳುನಾಡಲ್ಲೂ ಎದುರಾಯ್ತು ಸಂಕಷ್ಟ: ಬ್ಯಾನ್​ ಆಗುತ್ತಾ ವಿಜಯ್​ ಸಿನಿಮಾ?

Beast - Final
Published on

ಚೆನ್ನೈ: ಕಾಲಿವುಡ್​ ಸೂಪರ್​​ಸ್ಟಾರ್​ ವಿಜಯ್​ ಅವರ ಮುಂದಿನ ಚಿತ್ರ ಬೀಸ್ಟ್​ ಏಪ್ರಿಲ್​ 13ಕ್ಕೆ ದೇಶಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಆದರೆ, ಬಿಡುಗಡೆಗೂ ಮುನ್ನವೇ ಬೀಸ್ಟ್​ ಚಿತ್ರ ವಿವಾದದ ಸುಳಿಗೆ ಸಿಲುಕಿಕೊಂಡಿದೆ.

ಈಗಾಗಲೇ ಬೀಸ್ಟ್​ ಚಿತ್ರಕ್ಕೆ ಕುವೈತ್​ ನಿಷೇಧ ಹೇರಿದೆ. ಚಿತ್ರದಲ್ಲಿ ಇಸ್ಲಾಮಿಕ್ ಭಯೋತ್ಪಾದನೆಯ ದೃಶ್ಯಗಳನ್ನು ತೋರಿಸಲಾಗಿದೆ, ಇದು ಕುವೈತ್ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಈ ಚಿತ್ರವನ್ನು ನಿಷೇಧಿಸಲು ನಿರ್ಧರಿಸಿದೆ. ಇದರಿಂದ ಚಿತ್ರತಂಡದ ಗಳಿಕೆಯ ಮೇಲೆ ಪರಿಣಾಮ ಬೀರಲಿದೆ.

ಇದರ ಬೆನ್ನಲ್ಲೇ ತಮಿಳುನಾಡಿನಲ್ಲೂ ಚಿತ್ರವನ್ನು ಬ್ಯಾನ್​ ಮಾಡಬೇಕೆಂಬ ಕೂಗು ಕೇಳಿಬರುತ್ತಿದೆ. ತಮಿಳುನಾಡಿನ ಮುಸ್ಲಿಂ ಲೀಗ್​ ಅಧ್ಯಕ್ಷ ಮುಸ್ತಾಫ ಬೀಸ್ಟ್​ ಸಿನಿಮಾ ಬ್ಯಾನ್​ ಮಾಡುವಂತೆ ಆಗ್ರಹಿಸಿದ್ದಾರೆ. ರಾಜ್ಯದ ಗೃಹ ಇಲಾಖೆಗೆ ಮುಸ್ತಾಫ ಪತ್ರ ಬರೆದು ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ.

ಚಿತ್ರದ ಕಥೆಯ ಕುರಿತು ಮಾತನಾಡುವುದಾದರೆ, ನಟ ವಿಜಯ್ ಬೀಸ್ಟ್‌ನಲ್ಲಿ ವಿಜಯವೀರ ರಾಘವನ್ ಎಂಬ ರಾ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನ ಮಾಡಿದ್ದು, ಅನಿರುದ್ಧ ರವಿಚಂದರ್​ ಸಂಗೀತ ನೀಡಿದ್ದಾರೆ. ವಿಜಯ್​ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಸಾಥ್​ ನೀಡಿದ್ದಾರೆ. ಕಲಾನಿಧಿ ಮಾರನ್​ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net