

ಮುಂಬೈ: ನಾನು ಅನೇಕ ನಿರ್ದೇಶಕರ ಜತೆ ಮಲಗಿದ್ದಕ್ಕೆ ನಟಿ ಸೋನಾಕ್ಷಿ ಸಿನ್ಹಾಗೆ ಬಾಲಿವುಡ್ನಲ್ಲಿ ಅನೇಕ ಅವಕಾಶಗಳು ದೊರೆತವು ಎಂದು ಬಿಗ್ಬಾಸ್ ಸ್ಟಾರ್ ಪೂಜಾ ಮಿಶ್ರಾ ಸ್ಫೋಟಕ ಹೇಳಿಕೆ ನೀಡಿದ್ದು, ಸೋನಾಕ್ಷಿ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಸೋನಾಕ್ಷಿ ಅವರ ತಂದೆ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದ ಶತ್ರುಘ್ನ ಸಿನ್ಹಾ ಮತ್ತು ಅವರ ಕುಟುಂಬ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿರುವ ಪೂಜಾ ಮಿಶ್ರಾ, ಸ್ಟಾರ್ ಕುಟುಂಬ ನನ್ನ ಜೀವನವನ್ನು ಹಾಳು ಮಾಡಿತು, ಸಂಸದನ ಮಗಳ ಸಿನಿಮಾ ಅವಕಾಶಗಳಿಗಾಗಿ ನನ್ನನ್ನು ನಿರ್ದೇಶಕರು ಮತ್ತು ನಿರ್ಮಾಪಕರ ಜತೆ ಮಲಗುವಂತೆ ಮಾಡಿದರು ಎಂದು ದೂರಿದ್ದಾರೆ.
2007 ರಿಂದ 2014 ರವರೆಗೆ ಶತ್ರುಘ್ನ ಸಿನ್ಹಾ ಮತ್ತು ಅವರ ಕುಟುಂಬ ಲೋಖಂಡ್ವಾಲಾದಲ್ಲಿನ ನಾನಿದ್ದ ಅಪಾರ್ಟ್‌ಮೆಂಟ್‌ನ ಮೇಲಿನ ಫ್ಲ್ಯಾಟ್ನಲ್ಲಿ ವಾಸಿಸುತ್ತಿದ್ದರು. ಈ ವೇಳೆ ನನ್ನ ಮೇಲೆ ಮಾಟಮಂತ್ರ ಪ್ರಯೋಗ ಮಾಡಿ, ನನ್ನನ್ನು ಕೈವಶ ಮಾಡಿಕೊಂಡರು. ಇದಾದ ಬಳಿಕ ನನ್ನ ಬದುಕೇ ನರಕವಾಯಿತು. ಇದೇ ಸಂದರ್ಭದಲ್ಲಿ ಸೋನಾಕ್ಷಿ ಸಿನ್ಹಾ ಫ್ಯಾಶನ್ ಡಿಸೈನರ್ ಆಗಲು ತಯಾರಿ ನಡೆಸುತ್ತಿದ್ದರು. ಆಕೆಗೆ ಸಿನಿಮಾಗಳಲ್ಲಿ ಅವಕಾಶ ಮಾಡಿಕೊಡಲು ನನ್ನನ್ನು ನಿರ್ದೇಶಕರು ಹಾಗೂ ನಿರ್ಮಾಪಕರೊಂದಿಗೆ ಮಲಗಲು ಹೇಳುತ್ತಿದ್ದರು ಎಂದು ಪೂಜಾ ಮಿಶ್ರಾ ಆರೋಪಿಸಿದ್ದಾರೆ.
ಆದರೆ, ಪೂಜಾ ಮಿಶ್ರಾ ಅವರ ಆರೋಪವನ್ನು ಶತ್ರುಘ್ನ ಸಿನ್ಹಾ ಅವರ ಪುತ್ರ ಲವ್ ಸಿನ್ಹಾ ಅವರು ನಿರಾಕರಿಸಿದ್ದಾರೆ. ಪೂಜಾಗೆ ಈಗ ಮನೋವೈದ್ಯರ ಅಗತ್ಯವಿದೆ. ನನ್ನ ಕುಟುಂಬದ ವಿರುದ್ಧ ಹೊರಿಸಲಾದ ಆರೋಪಗಳು ಆಕೆಯ ಮಾನಸಿಕ ಸ್ಥಿತಿ ಎಷ್ಟರಮಟ್ಟಿಗೆ ಹದಗೆಡುತ್ತಿದೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದಿದ್ದಾರೆ. ಆದರೂ ಈ ವಿಚಾರ ಸದ್ಯ ಬಾಲಿವುಡ್ ಅಂಗಳದಲ್ಲಿ ಬಿರುಗಾಳಿ ಎಬ್ಬಿಸಿದೆ. (ಏಜೆನ್ಸೀಸ್)