

ಚೆನ್ನೈ: ಸಕಲಕಲಾವಲ್ಲಭ ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಬಹುಬೇಡಿಕೆಯ ಬಹುಭಾಷಾ ನಟಿ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ನಟನೆ, ಡಾನ್ಸ್, ಗ್ಲಾಮರ್ ಮತ್ತು ಗಾಯನದ ಮೂಲಕ ಶ್ರುತಿ ತುಂಬಾ ಮನೆ ಮಾತಾಗಿದ್ದಾರೆ. ಇನ್ನು ವೈಯಕ್ತಿಕ ವಿಚಾರದಿಂದಲೂ ಶ್ರುತಿ ಸುದ್ದಿಯಾಗಿದ್ದಾರೆ. ಎರಡು ವರ್ಷ ಡೇಟಿಂಗ್ ಮಾಡಿ ಬಾಯ್ಪ್ರೆಂಡ್ ಮೈಕಲ್ ಕೊರ್ಸಲೆ ಜತೆ ಬ್ರೇಕಪ್ ಮಾಡಿಕೊಂಡಿದ್ದರು. ಇದೀಗ ಮತ್ತೆ ಪ್ರೀತಿಯ ಬಲೆಯಲ್ಲಿ ಬಿದ್ದಿರುವ ಶ್ರುತಿ, ಶಂತನು ಹಜಾರಿಕಾ ಜತೆ ಡೇಟಿಂಗ್ ಮಾಡುತ್ತಿದ್ದಾರೆ. ಇದೀಗ ತಮ್ಮ ಬಾಯ್ಫ್ರೆಂಡ್ ಫೋಟೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ಶ್ರುತಿ ಭಾರೀ ಸುದ್ದಿಯಾಗಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಶ್ರುತಿ ಅವರು ಬಾಯ್ಫ್ರೆಂಡ್ ಶಂತನು ಅವರ ಚಿಕ್ಕ ವಯಸ್ಸಿನ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಶಂತನು ಮಗುವಾಗಿದ್ದಾಗ ತೆಗೆದಿರುವ ಬೆತ್ತಲೆ ಫೋಟೋ ಇದಾಗಿದೆ. ಶಂತನು ಫೋಟೋ ಜತೆಗೆ ಚಿಕ್ಕ ವಯಸ್ಸಿನಲ್ಲಿ ತೆಗೆದಿರುವ ತಮ್ಮ ಫೋಟೋವನ್ನು ಕೊಲ್ಯಾಜ್ ಮಾಡಿ ಇನ್ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದಾರೆ. ಫೋಟೋ ಕುರಿತು ಮೇಡ್ ಫಾರ್ ಈಚ್ ಅದರ್ ಅಂತಲೂ ಶ್ರುತಿ ಬರೆದುಕೊಂಡಿದ್ದು, ಫೋಟೋ ವೈರಲ್ ಆಗಿದೆ.
ಶಂತನುಗೂ ಮುಂಚೆ ಶ್ರುತಿ ಮೈಕಲ್ ಕೊರ್ಸಲೆ ಜತೆ ಎರಡು ವರ್ಷ ಪರಸ್ಪರ ಡೇಟಿಂಗ್ ನಡೆಸಿದ್ದರು. ಶ್ರುತಿ ಮತ್ತು ಮೈಕಲ್ 2016ರಲ್ಲಿ ತಮ್ಮ ಸಂಬಂಧವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. ಅಲ್ಲದೆ, ಹಾಗಾಗ ಶ್ರುತಿ ಹಾಸನ್ ಲಾಸ್ ಏಂಜಲೀಸ್ಗೆ ಹೋಗಿ ಬರುತ್ತಿದ್ದರು. ಮೈಕಲ್ ಕೂಡ ಶ್ರುತಿ ಗುಂಗಿನಲ್ಲಿ ಪದೇ ಪದೆ ಭಾರತಕ್ಕೆ ಬಂದು ಹೋಗುತ್ತಿದ್ದರು. ಆದರೆ, 2019ರ ಏಪ್ರಿಲ್ನಲ್ಲಿ ತಮ್ಮ ಸಂಬಂಧಕ್ಕೆ ಇಬ್ಬರು ಕೊನೆಯಾಡಿದ್ದರು.
ಇದಾದ ಬಳಿಕ ಶ್ರುತಿ ಕೆಲ ಕಾಲ ಖಿನ್ನತೆಗೆ ಜಾರಿದ್ದರು. ಬಳಿಕ ಖಿನ್ನತೆಯಿಂದ ಗುಣವಾದ ಶ್ರುತಿ ಸಿನಿಮಾ ಕೆಲಸಗಳಲ್ಲಿ ಬಿಜಿಯಾದರೂ. ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಸಾಲು ಸಾಲು ಚಿತ್ರಗಳಲ್ಲಿ ನಟಿಸುವ ಮೂಲಕ ಮತ್ತಷ್ಟು ಖ್ಯಾತಿಯನ್ನು ಗಿಟ್ಟಿಸಿಕೊಂಡರು. ಇದರ ನಡುವೆ ಶಂತನು ಪರಿಚಯವಾಗಿ, ಇಬ್ಬರ ಪರಿಚಯ ಪ್ರೀತಿಗೆ ತಿರುಗಿ, ಇದೀಗ ಪ್ರಣಯ ಪಕ್ಷಿಗಳಂತೆ ಹಾರಾಡುತ್ತಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಶ್ರುತಿ ಕೊನೆಯದಾಗಿ ವಕೀಲ್ ಸಾಬ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಟನೆಯ ಸಲಾರ್ ಚಿತ್ರದಲ್ಲಿ ಶ್ರುತಿ ನಾಯಕಿಯಾಗಿದ್ದಾರೆ. ಚಿತ್ರವೂ 2022ರ ಏಪ್ರಿಲ್ನಲ್ಲಿ ಬಿಡುಗಡೆಯಾಗಲಿದೆ. (ಏಜೆನ್ಸೀಸ್)