

ಚೆನ್ನೈ: ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಪತ್ನಿ ಪೊನಿ ವರ್ಮಾ ಜತೆಯಲ್ಲಿ 11ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಇದೇ ವೇಳೆ ತಾರಾ ದಂಪತಿ ತಮ್ಮ ಮಗನ ಕೋರಿಕೆಯನ್ನು ಸಹ ಈಡೇರಿಸಿದ್ದಾರೆ.
ಇಬ್ಬರ ಮದುವೆ ನೋಡಬೇಕೆಂಬ ಮಗ ವೇದಾಂತ್ ಆಸೆಯನ್ನು ನೆರವೇರಿಸಿರುವ ಪ್ರಕಾಶ್ ರಾಜ್, ಮತ್ತೊಮ್ಮೆ ಪೊನಿ ವರ್ಮಾರನ್ನು ಮರುಮದುವೆ ಆಗಿದ್ದಾರೆ. ಆಗಸ್ಟ್ 24ರ ರಾತ್ರಿ ಇಬ್ಬರ ಮರುಮದುವೆ ಮಗನ ಮುಂದೆಯೇ ಸರಳವಾಗಿ ನಡೆದಿದೆ. ಇದನ್ನು ನೋಡಿ ಮಗ ವೇದಾಂತ್ ತುಂಬಾ ಖುಷಿಯಾಗಿದ್ದಾಗಿ ಪ್ರಕಾಶ್ ರಾಜ್ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಕಾಶ್ ರಾಜ್, ಇಂದು ರಾತ್ರಿ ನಾವಿಬ್ಬರು ಮತ್ತೆ ಮದುವೆಯಾದೆವು. ನಮ್ಮ ಮದುವೆಯಲ್ಲಿ ಸಾಕ್ಷಿಯಾಗಬೇಕೆಂದು ನನ್ನ ಮಗ ವೇದಾಂತ್ ಬಯಸಿದ್ದರಿಂದ ಆತನ ಬಯಕೆ ತೀರಿಸಲು ಮತ್ತೆ ಮದುವೆ ಆದೆವು. ಇದೊಂದು ಆನಂದ ತುಂಬಿದ ಕೌಟುಂಬಿಕ ಕ್ಷಣಗಳಾಗಿತ್ತು ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರಕಾಶ್ ರಾಜ್ ಅವರು ಮಂಡಿಯೂರಿ ಪೊನಿ ವರ್ಮಾ ಅವರಿಗೆ ಉಂಗುರ ತೊಡಿಸಿದರು. ಉಂಗುರ ಬದಲಾಯಿಸಿಕೊಂಡ ಬಳಿಕ ಇಬ್ಬರು ಮಗನ ಮುಂದೆಯೇ ಪರಸ್ಪರ ಚುಂಬಿಸಿದರು.
ಕೌಟುಂಬಿಕ ಕ್ಷಣದಲ್ಲಿ ವೇದಾಂತ್ ಮಾತ್ರವಲ್ಲದೆ, ಪ್ರಕಾಶ್ ರಾಜ್ ಅವರ ಮೊದಲ ಪತ್ನಿ ಲಲಿತಾ ಕುಮಾರಿ ಮಕ್ಕಳಾದ ಮೇಘನಾ ಮತ್ತು ಪೂಜಾ ಕೂಡ ಉಪಸ್ಥಿತರಿದ್ದರು. 2009ರಲ್ಲಿ ಇಬ್ಬರು ಡಿವೋರ್ಸ್ ಆಗಿದ್ದಾರೆ.
ಅದ್ಭುತ ಸ್ನೇಹಿತೆಯಾದ್ದಕ್ಕಾಗಿ, ನನ್ನ ಜೀವನದಲ್ಲಿ ಒಬ್ಬ ಪ್ರೇಮಿ ಮತ್ತು ಉತ್ತಮ ಸಹ ಪ್ರಯಾಣಿಕಳಾಗಿರುವ ಪ್ರೀತಿಯ ಹೆಂಡತಿ ಧನ್ಯವಾದಗಳು ಎಂದು ವಿವಾಹ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಪೊನಿ ವರ್ಮಾ ಬಗ್ಗೆ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ. ಇದರ ಜತೆಗೆ ಆರಂಭದಲ್ಲಿ ಇಬ್ಬರು ಮದುವೆ ಆದ ಫೋಟೋವನ್ನು ಸಹ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯ ಪ್ರಕಾಶ್ ರಾಜ್ ಅವರು ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಒರ್ಚಾ ಸಿನಿಮಾದ ಚಿತ್ರೀಕರಣಕ್ಕಾಗಿ ಮಧ್ಯ ಪ್ರದೇಶದಲ್ಲಿ ಬೀಡುಬಿಟ್ಟಿದ್ದಾರೆ. (ಏಜೆನ್ಸೀಸ್)