ಕರೊನಾದಿಂದ ಬಳಲುತ್ತಿದ್ದ ಕಿರಾತಕ ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರದೀಪ್ ರಾಜ್ ನಿಧನ

Pradeep Raj
Published on

ಬೆಂಗಳೂರು: ಕೆಲ ದಿನಗಳ ಹಿಂದೆ ಕರೊನಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದ ಕಿರಾತಕ ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರದೀಪ್ ರಾಜ್, ಚಿಕಿತ್ಸೆಗೆ ಸ್ಪಂದಿಸದೇ ಇಂದು (ಜ.20) ಬೆಳಗಿನ ಜಾವ ಮೂರು ಗಂಟೆಗೆ ಪಾಂಡಿಚೇರಿಯ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಪ್ರದೀಪ್​ ರಾಜ್​ ಅವರಿಗೆ 46 ವರ್ಷ ವಯಸ್ಸಾಗಿತ್ತು. ಕರೊನಾ ಸೋಂಕು ಮಾತ್ರವಲ್ಲದೆ, ಹಲವು ವರ್ಷಗಳಿಂದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ಆದರೆ, ಕೆಲವು ತಿಂಗಳ ಹಿಂದೆ ಕೋವಿಡ್​ ತಗುಲಿದ್ದರಿಂದ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿತು. ಹೀಗಾಗಿ ಪಾಂಡಿಚೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ. ಅವರ ಅಂತ್ಯಕ್ರಿಯೆ ಪಾಂಡಿಚೇರಿಯಲ್ಲಿ ನಡೆಯಲಿದೆ ಎಂದು ಸೋದರ ಪ್ರಶಾಂತ್ ಮಾಹಿತಿ ನೀಡಿದ್ದಾರೆ.

ರಾಕಿಂಗ್​ ಸ್ಟಾರ್​ ಯಶ್​ ಅವರಿಗೆ ವೃತ್ತಿ ಜೀವನದಲ್ಲಿ ಮಹತ್ವದ ತಿರುವು ಕೊಟ್ಟ ಕಿರಾತಕ ಚಿತ್ರವನ್ನು ಪ್ರದೀಪ್​ ರಾಜ್​ ನಿರ್ದೇಶನ ಮಾಡಿದ್ದಾರೆ. ಅಲ್ಲದೆ, ಗಣೇಶ್​ ಜತೆ ಮಿ. 420, ಬಹುತಾರಾಗಣದ ಬೆಂಗಳೂರು 560023, ದುನಿಯಾ ವಿಜಯ್​ ಅಭಿನಯದ ರಜನಿಕಾಂತ, ಸತೀಶ್​ ನೀನಾಸಂ ಅಭಿನಯದ ಅಂಜದ ಗಂಡು ಸೇರಿದಂತೆ ಕೆಲ ಚಿತ್ರಗಳನ್ನು ಪ್ರದೀಪ್​ ನಿರ್ದೇಶನ ಮಾಡಿದ್ದಾರೆ.

ಪ್ರದೀಪ್​ ರಾಜ್​ ನಿಧನಕ್ಕೆ ಸ್ನೇಹಿತರು, ಬಂಧು ಬಳಗದವರು ಹಾಗೂ ಇಡೀ ಚಿತ್ರರಂಗ ಕಂಬನಿ ಮಿಡಿದಿದ್ದು, ಸಂತಾಪ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net