ಕೊರಿಯನ್​ ಮಹಿಳೆಯರ ಬಗ್ಗೆ ಮಾತನಾಡಿ ವಿವಾದ ಮೈಮೇಲೆ ಎಳೆದುಕೊಂಡ ಶಿವಕಾರ್ತಿಕೇಯನ್​!

Shivakartikeyan
Published on

ಚೆನ್ನೈ: ಕೊರಿಯನ್ನರ ಬಗ್ಗೆ ಮಾತನಾಡುವ ಮೂಲಕ ಕಾಲಿವುಡ್​ ಸೂಪರ್​ ಸ್ಟಾರ್​ ಶಿವಕಾರ್ತಿಕೇಯನ್​ ಹೊಸ ವಿವಾದವೊಂದನ್ನು ಮೈ ಮೇಲೆ ಎಳೆದುಕೊಂಡಿದ್ದು, ನೆಟ್ಟಿಗರ ಟೀಕೆಗೆ ಗುರಿಯಾಗಿದ್ದಾರೆ.

ಶಾಲಾ ಮಕ್ಕಳನ್ನು ಉದ್ದೇಶಿಸಿ ಮಾತನಾಡುವಾಗ ಕೊರಿಯನ್ನರ ಬಗ್ಗೆ ಶಿವಕಾರ್ತಿಕೇಯನ್​ ಆಡಿರುವ ಮಾತುಗಳು ಜನಾಂಗೀಯ ನಿಂದನೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ನಟನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿವರಣೆಗೆ ಬರುವುದಾದರೆ, ಕಾರ್ಯಕ್ರಮವೊಂದರಲ್ಲಿ ಮಕ್ಕಳನ್ನು ಉದ್ದೇಶಿಸಿ, ಇತ್ತೀಚೆಗೆ ಬಿಡುಗಡೆಗೊಂಡ ತಮ್ಮ ಡಾನ್​ ಸಿನಿಮಾದ ಕಾಮಿಡಿ ದೃಶ್ಯದ ಕುರಿತು ಶಿವಕಾರ್ತಿಕೇಯನ್​ ಮಾತನಾಡಿದರು. ಈ ವೇಳೆ ಕೊರಿಯನ್​ ಸಿನಿಮಾಗಳನ್ನು ನೋಡಿದಾಗಲೆಲ್ಲ ಅವರಲ್ಲಿರುವ ಎಲ್ಲಾ ನಟರು ಒಂದೇ ಎಂದು ನನಗೆ ಅನಿಸುತ್ತದೆ. ಅದರಲ್ಲೂ ಕೊರಿಯನ್​ ಮಹಿಳೆಯರಂತೂ ಥೇಟ್​ ಪುರುಷರಂತೆ ಕಾಣುತ್ತಾರೆ. ಒಬ್ಬರಿಗೊಬ್ಬರು ವ್ಯತ್ಯಾಸವೇ ಇಲ್ಲ ಎಂದರು. ಅಲ್ಲದೆ, ಕೊರಿಯನ್​ ಭಾಷೆಯನ್ನು ಸಹ ಅಣುಕಿಸಿದರು.

ಇದೀಗ ಶಿವಕಾರ್ತಿಕೇಯನ್​ ಮಾತನಾಡಿರುವ ವಿಡಿಯೋ ವೈರಲ್​ ಆಗಿದ್ದು, ಜನಾಂಗೀಯ ನಿಂದನೆ ಆರೋಪ ಕೇಳಿಬಂದಿದೆ. ನಮ್ಮ ಸೆಲೆಬ್ರಿಟಿಗಳು ವಿಶೇಷ ಸಂವೇದನಾ ಕಾರ್ಯಾಗಾರಗಳಿಗೆ ತಪ್ಪದೇ ಹಾಜರಾಗಬೇಕಾಗುತ್ತದೆ ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ.

ಬಾಡಿ ಶೇಮಿಂಗ್‌ಗೆ ವಿಚಾರ ಬಂದಾಗ, ದಪ್ಪ, ಬೋಳು, ಸುಕ್ಕುಗಟ್ಟಿದ, ಕಪ್ಪು, ಸ್ನಾನ, ಮುಂತಾದ ವಿಶೇಷಣಗಳಿಗೆ ಅಂತ್ಯವೇ ಇಲ್ಲ. ಶಿವಕಾರ್ತಿಕೇಯನ್ ಅವರು ಕೊರಿಯನ್ನರ ಬಗ್ಗೆ ತಪ್ಪು, ಕೀಳರಿಮೆಯನ್ನು ಹೊಂದಿದ್ದಾರೆ. ಇನ್ನೊಬ್ಬರನ್ನು ಜಡ್ಜ್​ ಮಾಡುವುದನ್ನು ನಿಲ್ಲಿಸಿ ಎಂದು ಇನ್ನೊಬ್ಬ ನೆಟ್ಟಿಗ ಕಿಡಿಕಾರಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net