ಪಾರ್ಟಿ ಇಲ್ಲ ಪುಷ್ಪ! ಐಕಾನ್​ ಸ್ಟಾರ್​ ಅಲ್ಲು ಅರ್ಜುನ್​ರ ಪುಷ್ಪ ಚಿತ್ರತಂಡಕ್ಕೆ ಶಾಕ್ ಕೊಟ್ಟ​ ಆಂಧ್ರ ಸರ್ಕಾರ

Pushpa
Published on

ಹೈದರಾಬಾದ್​: ಐಕಾನ್​ ಸ್ಟಾರ್​ ಅಲ್ಲು ಅರ್ಜುನ್​ ನಟನೆಯ ಪುಷ್ಪ ಚಿತ್ರ ಬಾಕ್ಸ್​ಆಫೀಸ್​ ಹಿಟ್​ ಎಂದು ಘೋಷಿಸಲಾಗಿದೆ. ಗಲ್ಲಾಪಟ್ಟಿಗೆಯಲ್ಲಿ ಧೂಳೆಬ್ಬಿಸಿರುವ ಹಿನ್ನೆಲೆಯಲ್ಲಿ ಪುಷ್ಪ ಚಿತ್ರತಂಡ ರಾಜ್ಯದ ವಿವಿಧೆಡೆ ಸಕ್ಸಸ್​​ ಈವೆಂಟ್​ ಮಾಡಲು ಪ್ಲಾನ್​ ಮಾಡಿದೆ. ಇಂದು ಕಾಕಿನಾಡದಲ್ಲಿ ಸಕ್ಸಸ್​ ಮೀಟ್​ ಮಾಡಲು ತಯಾರಿ ನಡೆಸಿದ್ದ ತಂಡಕ್ಕೆ ಸ್ಥಳೀಯ ಅಧಿಕಾರಿಗಳು ಶಾಕ್​ ನೀಡಿದ್ದಾರೆ.

ಸಕ್ಸಸ್​ ಮೀಟ್​ ಮಾಡಲು ಅಧಿಕಾರಿಗಳು ಅನುಮತಿ ನಿರಾಕರಿಸಿರುವುದರಿಂದ ಕಾರ್ಯಕ್ರಮ ರದ್ದಾಗಿದೆ. ಈ ಬಗ್ಗೆ ಪುಷ್ಪ ಸಿನಿಮಾ ಪ್ರೊಡಕ್ಷನ್​ ಕಂಪನಿ ಮೈತ್ರಿ ಮೂವೀ ಮೇಕರ್ಸ್​ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ತಿಳಿಸಿದೆ. ಯಾವ ಆಧಾರ ಮೇಲೆ ಅನುಮತಿ ನಿರಾಕರಿಸಿದ್ದಾರೋ ಎಂಬುದು ತಿಳಿದಿಲ್ಲ ಎಂದು ಹೇಳಿದೆ.

ಆದರೆ, ದೇಶದಲ್ಲಿ ದಿನದಿಂದ ದಿನಕ್ಕೆ ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಅನುಮತಿ ನಿರಾಕರಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಮಿಕ್ರಾನ್​ ಭೀತಿ ಹಿನ್ನೆಲೆಯಲ್ಲಿ ಈಗಾಗಲೇ ಹಲವು ರಾಜ್ಯಗಳು ರಾತ್ರಿ ಕರ್ಫ್ಯೂ ಮತ್ತು ಚಿತ್ರಮಂದಿರ, ಮಾಲ್ಸ್​, ರೆಸ್ಟೋರೆಂಟ್​ ಸೇರಿದಂತೆ ಇತರೆ ಪ್ರದೇಶಗಳ ಮೇಲೆ ನಿರ್ಬಂಧ ಹೇರಿವೆ.

ಸಿನಿಮಾ ಸಕ್ಸಸ್​ ಈವೆಂಟ್​ ಅಂದರೆ ಬಹುಸಂಖ್ಯೆಯಲ್ಲಿ ಅಭಿಮಾನಿಗಳು ಒಂದೆಡೆ ಸೇರುವುದಿಂದ ಸದ್ಯದ ಪರಿಸ್ಥಿತಿಯಲ್ಲಿ ಸರಿಯಲ್ಲ ಎಂಬ ಕಾರಣದಿಂದ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡಿಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಇನ್ನೊಂದೆಡೆ ಉದ್ದೇಶಪೂರ್ವಕವಾಗಿಯೇ ಸರ್ಕಾರ ಅನುಮತಿ ನೀಡಿಲ್ಲ ಎಂಬ ಮಾತುಗಳ ಸಹ ಕೇಳಿಬರುತ್ತಿವೆ. ತೆಲುಗು ರಾಜ್ಯದಲ್ಲಿ ಸಿನಿಮಾ ಟಿಕೆಟ್​ಗಳ ದರವನ್ನು ಇಳಿಸಿರುವ ಕಾರಣ ಸರ್ಕಾರ ಮತ್ತು ಸಿನಿಮಾ ಇಂಡಸ್ಟ್ರಿಯ ನಡುವೆ ತಿಕ್ಕಾಟ ಉಂಟಾಗಿದೆ. ಅನೇಕ ನಟರುಗಳು ಸರ್ಕಾರದ ವಿರುದ್ಧ ಮಾತನಾಡಿದ್ದಾರೆ. ಹೀಗಾಗಿ ಸರ್ಕಾರ ಉದ್ದೇಶಪೂರ್ವಕವಾಗಿ ಅನುಮತಿ ನೀಡಿಲ್ಲ ಎನ್ನಲಾಗುತ್ತಿದೆ.

ಇತ್ತೀಚೆಗಷ್ಟೇ ಅಂದರೆ ಡಿಸೆಂಬರ್​ 21ರಂದು ಪುಷ್ಪ ತಂಡ ತಿರುಪತಿಯಲ್ಲಿ ಸಕ್ಸಸ್​ ಈವೆಂಟ್​ ಆಚರಿಸಿತ್ತು. ಇನ್ನಿತರ ಪ್ರದೇಶಗಳಲ್ಲಿ ಈವೆಂಟ್​ ಮಾಡುವ ಆಸೆಯನ್ನು ಹೊಂದಿದ್ದ ಚಿತ್ರತಂಡಕ್ಕೆ ಸರ್ಕಾರದ ಈ ಕ್ರಮದಿಂದ ನಿರಾಸೆಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net