66ರ ಚಿರುಗೆ 36ರ ಶ್ರುತಿ: ವಾಲ್ಟರ್ ವೀರಯ್ಯ ಚಿತ್ರಕ್ಕೆ ನಾಯಕಿ?

Chiru
Published on

ನಂದಮೂರಿ ಬಾಲಕೃಷ್ಣ ಅಭಿನಯದ ಹೊಸ ಚಿತ್ರಕ್ಕೆ ಶ್ರುತಿ ಹಾಸನ್ ನಾಯಕಿಯಾಗಿ ಆಯ್ಕೆಯಾದಾಗ ಹಲವರಿಗೆ ಆಶ್ಚರ್ಯವಾಗಿತ್ತು. ಬಾಲಕೃಷ್ಣರಂತಹ 60 ಪ್ಲಸ್ ವಯಸ್ಸಿನ ನಾಯಕರ ಜತೆಗೆ ನಟಿಸುತ್ತಿರುವ ಬಗ್ಗೆ ಶ್ರುತಿ ಕಾಲೆಳೆಯಲಾಗಿತ್ತು. ಬಹುಶಃ ಮುಂದೆ ಆಕೆ ಹಿರಿಯರ ಜತೆಗೆ ನಟಿಸುವುದಿಲ್ಲ ಅಂದುಕೊಂಡವರಿಗೆ ಇನ್ನೊಂದು ಸುದ್ದಿ ಇದೆ.

ವಿಷಯವೇನೆಂದರೆ, ಚಿರಂಜೀವಿ ಅಭಿನಯದ ‘ವಾಲ್ಟರ್ ವೀರಯ್ಯ’ ಚಿತ್ರಕ್ಕೆ ಶ್ರುತಿ ಹಾಸನ್ ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ. ಈ ಚಿತ್ರವನ್ನು ಬಾಬ್ಬಿ ನಿರ್ದೇಶಿಸುತ್ತಿದ್ದು, ನಾಯಕಿ ಪಾತ್ರವನ್ನು ಯಾರಿಂದ ಮಾಡಿಸುವುದು ಎಂಬ ಪ್ರಶ್ನೆ ಬಂದಾಗ, ಅವರಿಗೆ ಶ್ರುತಿ ಹೆಸರು ನೆನಪಾಗಿದೆ. ಆಕೆ ಒಪು್ಪತ್ತಾರೋ ಇಲ್ಲವೋ ಎಂಬ ಗೊಂದಲದಲ್ಲೇ ಭೇಟಿಯಾದ ಬಾಬ್ಬಿಗೆ ಆಶ್ಚರ್ಯವಾಗಿದೆ.

ಶ್ರುತಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಚಿತ್ರದಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರಂತೆ. ಆದರೆ, ಸದ್ಯಕ್ಕೆ ಶ್ರುತಿ ಚಿತ್ರಕ್ಕಿನ್ನೂ ಸಂಪೂರ್ಣ ಗ್ರೀನ್ ಸಿಗ್ನಲ್ ನೀಡಿಲ್ಲವಂತೆ. ಅಂದಹಾಗೆ, ಚಿರಂಜೀವಿ ‘ಭೋಲಾ ಶಂಕರ್’ ಮತ್ತು ‘ಗಾಡ್ ಫಾದರ್’ ಎಂಬ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದು, ಆ ಎರಡೂ ಚಿತ್ರಗಳ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ, ‘ವಾಲ್ಟರ್ ವೀರಯ್ಯ’ ಪ್ರಾರಂಭವಾಗುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net