ಮತ್ತೊಮ್ಮೆ ಸಹಾಯ ಹಸ್ತ ಚಾಚಿದ ಕಿಚ್ಚ: ಬಿಗ್​ಬಾಸ್​ ಸ್ಪರ್ಧಿ ಸೋನು ಪಾಟೀಲ್​ ತಾಯಿಯ ಚಿಕಿತ್ಸೆಗೆ ನೆರವು

Sonu Patil
Published on

ಬಾಗಲಕೋಟೆ: ಕಷ್ಟದಲ್ಲಿರುವ ಜನರಿಗಾಗಿ ಮಿಡಿಯುವ ನಟ ಸುದೀಪ್ ಇದೀಗ ಸಣ್ಣ ಕಲಾವಿದೆಯ ಕುಟುಂಬಕ್ಕೆ ನೆರವಾಗಿದ್ದಾರೆ. ಬಿಗ್​​ಬಾಸ್ ಸೀಜನ್ 6ರ ಸ್ಪರ್ಧಿ ನಟಿ ಸೋನು ಪಾಟೀಲ್ ಅವರ ತಾಯಿಯ ಚಿಕಿತ್ಸೆಗೆ ಸುದೀಪ್ ಸಹಾಯಾಸ್ತ ಚಾಚಿದ್ದಾರೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ಮೂಲದ ಸೋನು ಪಾಟೀಲ್​ ಅವರ ತಾಯಿ ನ್ಯೂಮೋನಿಯಾದಿಂದ ಬಳಲುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದು ಲಕ್ಷಾಂತರ ಬಿಲ್ ಆಗಿದೆ. ಸದ್ಯ ಆರ್ಥಿಕ‌ ಸಂಕಷ್ಟದಲ್ಲಿರುವ ಸೋನುಗೆ ಸುದೀಪ್​ ಬೆಳಕಾಗಿದ್ದಾರೆ.

ಸುದೀಪ್​ ಸರ್ ನೆರವಿನಿಂದ ನಮ್ಮ ತಾಯಿಯ ಜೀವ ಉಳಿದಿದೆ ಎಂದು ಸೋನು ಪಾಟೀಲ್​ ಕೃತಜ್ಞತೆ ಸಲ್ಲಿಸಿದ್ದಾರೆ. ಸೋನು ತಾಯಿಗೆ ಕೋವಿಡ್ ಲಕ್ಷಣಗಳಿದ್ದರೂ ಪಾಸಿಟಿವ್ ಬಂದಿಲ್ಲ. ಸ್ವಲ್ಪ ಉಸಿರಾಟದ ತೊಂದರೆ ಇದೆ.

ಸುದೀಪ್ ಅವರು ಎರಡು ಲಕ್ಷಕ್ಕೂ ಹೆಚ್ಚು ಹಣ ನೀಡಿದ್ದಾರೆ. ಕಿಚ್ಚ ಸುದೀಪ್​ ಚಾರಿಟೇಬಲ್ ಟ್ರಸ್ಟ್ ನಿಂದ ಸಹಾಯ ಮಾಡಿದ್ದಾರೆ. ಹೀಗಾಗಿ ಸುದೀಪ್​ ಅವರಿಗೆ ನಾನು ಚಿರಋಣಿಯಾಗಿದ್ದೇನೆ. ನಾನು ಅನೇಕರ ಬಳಿ ಸಹಾಯ ಕೇಳಿದ್ದೆ. ಯಾರೂ ಸಹಾಯ ಮಾಡಲಿಲ್ಲ ಎಂದು ಸೋನು ಭಾವುಕರಾದರು.

ಮೊದಲೇ ಕಲಾವಿದರ ಬದುಕು ಸಂಕಷ್ಟಕ್ಕೆ ಸಿಲುಕಿದೆ.‌ ಶೂಟಿಂಗ್ ನಿಂತಿದೆ. ಕೆಲಸವಿಲ್ಲದೇ ನನಗೆ ಲಕ್ಷಗಟ್ಟಲೆ ಹಣ ಹೊಂದಿಸುವುದಕ್ಕೆ ಕಷ್ಟ ಆಗಿತ್ತು. ಇಂತಹ ಸಂದಿಗ್ಧ ಸಮಯದಲ್ಲಿ ಸುದೀಪ್​ ಸರ್​ ಆಸರೆಯಾಗಿದ್ದಾರೆ. ಈಗ ನಮ್ಮ ತಾಯಿ ಹುಷಾರಾಗಿದ್ದಾರೆ ಎಂದು ಸೋನು ಖುಷಿ ವ್ಯಕ್ತಪಡಿಸಿದ್ದಾರೆ.

ಸೋನು ಪಾಟಿಲ್ ತಾಯಿ ಮಾದೇವಿ ಪಾಟೀಲ(53) ಮೇ 4 ರಂದು ಬಾಗಲಕೋಟೆ ಶಕುಂತಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋನು ಪಾಟೀಲ ಮೂಲತಃ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕಡಪಟ್ಟಿ ಗ್ರಾಮದವರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net