

ಹೈದರಾಬಾದ್: ಅಕ್ಟೋಬರ್ 2ರಂದು ಸಮಂತಾ ಮತ್ತು ನಾಗಚೈತನ್ಯ ಅಧಿಕೃತವಾಗಿ ಡಿವೋರ್ಸ್ ಘೋಷಣೆ ಮಾಡಿದ ದಿನದಿಂದಲೂ ಅವರ ಡಿವೋರ್ಸ್ ವಿಚಾರ ಒಂದಲ್ಲ ಒಂದು ಕಾರಣಕ್ಕೆ ಇನ್ನು ಚರ್ಚೆಯಾಗುತ್ತಲೇ ಇದೆ. ಸಮಂತಾ ಅವರು ಜಾಲತಾಣದಲ್ಲಿ ಪ್ರತಿದಿನ ಏನೇ ಪೋಸ್ಟ್ ಮಾಡಿದರೂ, ಅದನ್ನು ಡಿವೋರ್ಸ್ಗೆ ಲಿಂಕ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ.
ಇತ್ತಿಚೆಗಷ್ಟೇ ನಟಿ ಸಮಂತಾ ಅವರು ಡಿವೋರ್ಸ್ ಕುರಿತು ಮುಕ್ತವಾಗಿ ಮಾತನಾಡಿದ್ದರು. 2021ನೇ ವರ್ಷ ನನ್ನ ವೈಯಕ್ತಿಕ ಜೀವನಕ್ಕೆ ಅತಿದೊಡ್ಡ ಹಿನ್ನೆಡೆಯನ್ನು ನೀಡಿದೆ. ಭವಿಷ್ಯದ ಬಗ್ಗೆ ಯಾವುದೇ ಭರವಸೆಗಳು ನನ್ನಲ್ಲಿ ಉಳಿದಿಲ್ಲ ಎಂದು ಮನದ ನೋವನ್ನು ಹೇಳಿಕೊಂಡರು. ಇದೇ ವೇಳೆ ತಮ್ಮ ವಿರುದ್ಧದ ಟ್ರೋಲ್ಗಳ ಬಗ್ಗೆ ಮಾತನಾಡಿ, ಸಾಮಾಜಿಕ ಜಾಲತಾಣ ಅಭಿಮಾನಿಗಳನ್ನು ಮತ್ತಷ್ಟು ಆಪ್ತರನ್ನಾಗಿಸಿದೆ. ನಾನು ಅನೇಕರಿಂದ ಪ್ರೀತಿಯನ್ನು ಪಡೆದಿದ್ದೇನೆ. ಇಂದು ಅಭಿಮಾನಿಗಳು ನನ್ನ ಜೀವನದ ಭಾಗವಾಗಿದ್ದಾರೆ. ಆದರೆ, ಕೆಲವು ಮಂದಿ ನನ್ನನ್ನು ತುಂಬಾ ಟ್ರೋಲ್ ಮಾಡುತ್ತಿದ್ದಾರೆ. ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ನಾನು ಎಲ್ಲರನ್ನು ಕೇಳುವುದು ಒಂದೇ, ನಾನು ಮಾಡುವ ಪ್ರತಿಯೊಂದು ಕೆಲಸ ಹಾಗೂ ಆಡುವ ಮಾತನ್ನು ಒಪ್ಪಿಕೊಳ್ಳಬೇಕೆಂದು ನಾನು ಒತ್ತಾಯಿಸುವುದಿಲ್ಲ. ಆದರೆ ನನ್ನ ಅಭಿಪ್ರಾಯಗಳು ನಿಮಗೆ ಇಷ್ಟವಾಗದಿದ್ದರೆ ಅದನ್ನು ಹೇಳಲು ಒಂದು ಮಾರ್ಗವಿದೆ. ಅದನ್ನು ಬಿಟ್ಟು ಕೆಟ್ಟದಾಗಿ ಟ್ರೋಲ್ ಮಾಡಬೇಡಿ ಎಂದು ಸಮಂತಾ ಮನವಿ ಮಾಡಿದ್ದರು.
ತಾಜಾ ಬೆಳವಣಿಗೆಯೆಂದರೆ ಸಮಂತಾ ಮಾಜಿ ಲವರ್ ನಟ ಸಿದ್ಧಾರ್ಥ್ ಮಾಡಿರುವ ಲೇಟೆಸ್ಟ್ ಟ್ವೀಟ್ ಸಮಂತಾರಿಗೆ ತಿರುಗೇಟು ಕೊಟ್ಟಂತಿದೆ. ಸಮಂತಾ ಹೆಸರೇಳದಿದ್ದರೂ, ಸಿದ್ಧಾರ್ಥ್ ಹೇಳಿರುವುದು ಸಮಂತಾರಿಗೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಅದಕ್ಕೆ ಕಾರಣ ಈ ಹಿಂದೆಯೂ ನಟ ಸಿದ್ಧಾರ್ಥ್ ಒಂದು ಟ್ವೀಟ್ ಮಾಡಿದ್ದರು. ಸಮಂತಾ ಡಿವೋರ್ಸ್ ಘೋಷಣೆ ಮಾಡಿದ ಬೆನ್ನಲ್ಲೇ ನಟ ಸಿದ್ಧಾರ್ಥ್ ಟ್ವೀಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ, ಟ್ವಿಟರ್ನಲ್ಲಿ ಟ್ರೆಂಡ್ ಕೂಡ ಆಗಿತ್ತು. "ನಾನು ಶಿಕ್ಷಕರಿಂದ ಕಲಿತ ಮೊದಲ ಪಾಠವೆಂದರೆ ಮೋಸಗಾರರು ಎಂದಿಗೂ ಏಳಿಗೆ ಆಗುವುದಿಲ್ಲ" ಎಂದು ಸಿದ್ಧಾರ್ಥ್ ಟ್ವೀಟ್ ಮಾಡಿದ್ದರು. ಸಮಂತಾರನ್ನೇ ಗುರಿಯಾಗಿರಿಸಿ ಸಿದ್ಧಾರ್ಥ್ ಟ್ವೀಟ್ ಮಾಡಿದ್ದಾರೆ ಎಂದು ಚರ್ಚೆ ಆಗಿತ್ತು. ಈ ಕಾರಣದಿಂದಲೇ ಟ್ವೀಟ್ ವೈರಲ್ ಆಗಿತ್ತು.
ಇದೀಗ ಮತ್ತೊಂದು ಟ್ವೀಟ್ ಮಾಡಿರುವ ಸಿದ್ಧಾರ್ಥ್ ನೀನೇ ಸಾಕಿದ ಗಿಣಿ ಹದ್ದಾಗಿ ಕುಕ್ಕುತ್ತದೆ ಎಂಬ ಪಾಠವನ್ನು ಹೇಳಿದಂತಿದೆ. ಕೆಲವು ಸ್ಟಾರ್ಗಳಿಂದ ಸಾಮಾಜಿಕ ಜಾಲತಾಣ ಜಗತ್ತಿನಲ್ಲಿ ವಿಷವನ್ನು ಬಿತ್ತುವ ಕೆಲಸ ನಡೆಯುತ್ತಿದೆ. ಫ್ಯಾನ್ ಗ್ರೂಪ್ ಸಂಘಟಿಸಲು ಲಕ್ಷಾಂತರ ರೂಪಾಯಿ ಹಣವನ್ನು ವ್ಯಯಿಸಿ, ತಮ್ಮ ಅಸ್ತ್ರಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಯಾವುದೂ ಕೂಡ ತನ್ನಷ್ಟಕ್ಕೆ ತಾನೇ ಆಗುವುದಿಲ್ಲ. ಕೊನೆಯಲ್ಲಿ ತಮ್ಮ ಅಭಿಮಾನಿಗಳು ತಮ್ಮನ್ನೇ ಹದ್ದಾಗಿ ಕುಕ್ಕುತ್ತಾರೆ ಎಂಬುದನ್ನು ಸ್ಟಾರ್ಗಳ ಅರ್ಥ ಮಾಡಿಕೊಳ್ಳಬೇಕು. ಪ್ರೀತಿ ಮತ್ತು ದ್ವೇಷಕ್ಕಾಗಿ ಹಣ ಪಾವತಿಸುವುದನ್ನು ನಿಲ್ಲಿಸಿ ಎಂದು ಟ್ವೀಟ್ ಮಾಡಿದ್ದಾರೆ.
ಇದೀಗ ಈ ಟ್ವೀಟ್ ಅನ್ನು ಸಮಂತಾ ಅವರು ಟ್ರೋಲಿಗರ ಬಗ್ಗೆ ಹೇಳಿದ್ದಕ್ಕೆ ಲಿಂಕ್ ಮಾಡಿ ಮತ್ತೆ ಟ್ರೋಲ್ ಮಾಡುತ್ತಿದ್ದಾರೆ. ಆದರೆ, ಅವರು ಯಾರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ ಎಂಬುದು ಸಿದ್ಧಾರ್ಥ್ ಅವರಿಗೆ ಮಾತ್ರ ತಿಳಿದಿರುತ್ತದೆ. ಸದ್ಯ ಟ್ವೀಟ್ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. (ಏಜೆನ್ಸೀಸ್)