ಲೈಗರ್​ ಸಿನಿಮಾ ಸೋಲು: ನಟಿ ಅನಸೂಯ ವಿರುದ್ಧ ಮುಗಿಬಿದ್ದ ವಿಜಯ್​ ದೇವರಕೊಂಡ ಫ್ಯಾನ್ಸ್!

Anasuya
Published on

ಹೈದರಾಬಾದ್​: ಬಹುನಿರೀಕ್ಷಿತ ಲೈಗರ್​ ಸಿನಿಮಾ ಬಿಡುಗಡೆಯಾದ ದಿನವೇ ನಟ ವಿಜಯ್​ ದೇವರಕೊಂಡ ವಿರುದ್ಧ ಮಾರ್ಮಿಕವಾಗಿ ಟ್ವೀಟ್​ ಮಾಡಿದ ಟಾಲಿವುಡ್​ನ ಜನಪ್ರಿಯ ನಟಿ ಮತ್ತು ನಿರೂಪಕಿ ಅನುಸೂಯ ಭಾರದ್ವಾಜ್ ವಿರುದ್ಧ ವಿಜಯ್​ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮುಗಿಬಿದ್ದಿದ್ದಾರೆ.

ಲೈಗರ್ ಸಿನಿಮಾ​ ಮೊನ್ನೆಯಷ್ಟೇ (ಆ.25) ಬಿಡುಗಡೆಯಾಗಿದ್ದು, ಪ್ರೇಕ್ಷಕರ ವಲಯದಲ್ಲಿ ಕಳಪೆ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಿನಿಮಾ ಚೆನ್ನಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಇದರ ನಡುವೆ ವಿಜಯ್​ ವಿರುದ್ಧ ಅನುಸೂಯ ಭಾರದ್ವಾಜ್ ಟ್ವೀಟ್​ ಒಂದನ್ನು ಮಾಡಿದ್ದರು. ಅರ್ಜುನ್​ ರೆಡ್ಡಿ ಸಿನಿಮಾದಲ್ಲಿ ವಿಜಯ್,​ ಮಹಿಳೆಯನ್ನು ನಿಂದಿಸಿದ್ದರ ಕರ್ಮದ ಫಲವೇ ಲೈಗರ್​ ಸಿನಿಮಾ ಸೋಲು ಎನ್ನುವ ರೀತಿಯಲ್ಲಿ ಪರೋಕ್ಷವಾಗಿ ವಿಜಯ್​ಗೆ ಟಾಂಗ್​ ನೀಡಿದ್ದರು.

ಏನಿದು ಅರ್ಜುನ್​ ರೆಡ್ಡಿ ವಿವಾದ?

ಐದು ವರ್ಷಗಳ ಹಿಂದೆ ಬಿಡುಗಡೆಯಾದ ವಿಜಯ್​ ನಟನೆಯ ಅರ್ಜುನ್​ ರೆಡ್ಡಿ ಸಿನಿಮಾ ಸೂಪರ್​ ಹಿಟ್​​ ಆಗಿತ್ತು. ಆದರೆ, ಅದರಲ್ಲಿ ತಾಯಿಯ ಬಗೆಗಿನ ಕೆಟ್ಟ ಬೈಗುಳ ಭಾರೀ ವಿವಾದ ಹೆಬ್ಬಿಸಿತ್ತು. ಅನೇಕರು ಮಹಿಳೆಯರು ಬೈಗುಳದ ವಿರುದ್ಧ ಧ್ವನಿಯೇರಿಸಿದ್ದರು. ಅದರಲ್ಲಿ ಅನಸೂಯ ಭಾರಧ್ವಜ್​ ಕೂಡ ಒಬ್ಬರು. ಅರ್ಜುನ್​ ರೆಡ್ಡಿ ಸಿನಿಮಾ ಕಾರ್ಯಕ್ರಮದಲ್ಲಿಯೂ ವಿಜಯ್​ ಆ ಡೈಲಾಗ್​ ಅನ್ನು ಎಲ್ಲರ ಎದುರು ಹೇಳಿದಕ್ಕೆ ಅನಸೂಯ ಕೆಂಡಾಮಂಡಲವಾಗಿದ್ದರು. ನೇರವಾಗಿಯೇ ವಿಜಯ್​ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಟಿವಿ ಚರ್ಚಾ ಕಾರ್ಯಕ್ರಮಗಳಲ್ಲೂ ಅನಸೂಯಾ ಈ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದರು. ಆದರೆ, ಯಾವುದಕ್ಕೂ ವಿಜಯ್​ ಮಾತ್ರ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಐದು ವರ್ಷಗಳ ಬಳಿಕ ಅನಸೂಯ ಮತ್ತೊಮ್ಮೆ ವಿಜಯ್​ ವಿರುದ್ಧ ಟ್ವೀಟ್​ ಮಾಡಿದ್ದಾರೆ. ಲೈಗರ್​ ಸಿನಿಮಾದ ಸೋಲನ್ನು ಕರ್ಮಕ್ಕೆ ಹೋಲಿಕೆ ಮಾಡಿ ಟ್ವೀಟ್​ ಮಾಡುವ ಮೂಲಕ ವಿಜಯ್​ಗೆ ತಿರುಗೇಟು ನೀಡಿದ್ದಾರೆ.

ಕರ್ಮ ಬಂದೇ ಬರುತ್ತದೆ

ತಾಯಿಯ ನೋವು ಮಾಯವಾಗುವುದಿಲ್ಲ. ಕರ್ಮವು ಕೆಲವೊಮ್ಮೆ ಬರೋದು ಕಷ್ಟ. ಆದರೆ, ಖಂಡಿತ ಬಂದೇ ಬರುತ್ತದೆ. ಇನ್ನೊಬ್ಬರ ದುಃಖದಲ್ಲಿ ನನಗೆ ಸಂತೋಷವಾಗಿಲ್ಲ ಆದರೆ, ನಂಬಿಕೆ ಮರುಸ್ಥಾಪಿಸಲಾಗಿದೆ ಎಂದು ಅನುಸೂಯ ಟ್ವೀಟ್​ ಮಾಡಿದ್ದಾರೆ.

ವಿಜಯ್​ ಅಭಿಮಾನಿಗಳಿಂದ ಕಿರುಕುಳ

ಅನಸೂಯ ಟ್ವೀಟ್​ ಬೆನ್ನಲ್ಲೇ ವಿಜಯ್​ ಅಭಿಮಾನಿಗಳು ಅವರ ಮೇಲೆ ಮುಗಿಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಿಂದಿಸುತ್ತಿದ್ದಾರೆ. ಅನುಸೂಯ ಅವರನ್ನು ಆಂಟಿ ಎಂದು ಕರೆಯುತ್ತಿದ್ದಾರೆ. ಅನುಸೂಯ ಅವರ ಕುಟುಂಬವನ್ನು ಎಳೆತಂದು ಕೆಟ್ಟ ಭಾಷೆಗಳಲ್ಲಿ ನಿಂದನೆ ಮಾಡುತ್ತಿದ್ದಾರೆ. ವಿಜಯ್​ ಅಭಿಮಾನಿಗಳು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದು, ಫ್ಯಾನ್ಸ್​ ಮಾಡಿರುವ ನಿಂದನಾತ್ಮಕ ಟ್ವೀಟ್​ಗಳನ್ನು ತಮ್ಮ ಜಾಲತಾಣದಲ್ಲಿ ಅನುಸೂಯ ಶೇರ್​ ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net