

ಮುಂಬೈ: ಸುಮಾರು 4 ಗಂಟೆಗಳ ವಿಚಾರಣೆ ಬಳಿಕ ಜುಲೈ 19ರಂದು ಮುಂಬೈ ಅಪರಾಧ ವಿಭಾಗದ ಪೊಲೀಸರು ಉದ್ಯಮಿ ಹಾಗೂ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾರನ್ನು ಬಂಧಿಸಿದ್ದಾರೆ. ನೀಲಿ ಚಿತ್ರಗಳನ್ನು ಸೆರೆಹಿಡಿದು ಭಾರತದ ಹೊರಗೆ ಲಭ್ಯವಿರುವ ಅನೇಕ ಪೇಯ್ಡ್ ಆ್ಯಪ್ಗಳಲ್ಲಿ ಅಪ್‌ಲೋಡ್ ಮಾಡಿರುವುದರ ವಿರುದ್ಧ ಫೆಬ್ರವರಿ 4ರಂದು ದಾಖಲಾಗಿರುವ ದೂರಿನ ಆಧಾರದ ಮೇಲೆ ಕುಂದ್ರಾ ಬಂಧನವಾಗಿದೆ. ಸದ್ಯ ಆರೋಪಿ ಕುಂದ್ರಾರನ್ನು ಮುಂಬೈನ ಮೆಟ್ರೋಪಾಲಿಟನ್ ಕೋರ್ಟ್ ಜುಲೈ 23ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ಆರೋಪಿ ಕುಂದ್ರಾ, ಪ್ರಕರಣದ ಪ್ರಮುಖ ಸಂಚುಗಾರ ಎಂದು ಮುಂಬೈ ಪೊಲೀಸರು ಹೆಸರಿಸಿದ್ದಾರೆ. ಆತನ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಸೆಕ್ಸನ್ 420 (ವಂಚನೆ), 34 (ಸಾಮಾನ್ಯ ಉದ್ದೇಶ), 292 ಮತ್ತು 293 (ಅಶ್ಲೀಲ ಮತ್ತು ಅಸಭ್ಯ ಜಾಹೀರಾತುಗಳು ಮತ್ತು ಪ್ರದರ್ಶನಗಳಿಗೆ ಸಂಬಂಧಿಸಿದೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಐಟಿ ಕಾಯ್ದೆ ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆ ಅಡಿಯಲ್ಲಿಯೂ ಕುಂದ್ರಾ ವಿರುದ್ಧ ಪ್ರಕರಣ ದಾಖಲಾಗಿದೆ.
ಐಟಿ ಕಾಯ್ದೆ 2000, ಸೆಕ್ಸನ್ 67ರ ಪ್ರಕಾರ ಅಶ್ಲೀಲ ವಿಷಯದ ಉತ್ಪಾದನೆ, ಅದರ ವಿತರಣೆ, ಪ್ರಸಾರ ಮತ್ತು ಪ್ರಕಟಣೆಯನ್ನು ನಿಷೇಧಿಸಲಾಗಿದೆ. ಈ ಆರೋಪ ಸಾಬೀತಾದರೆ, 5 ಲಕ್ಷ ರೂಪಾಯಿ ದಂಡ ಮತ್ತು ಮೂರು ವರ್ಷ ಕಾರಗೃಹ ಶಿಕ್ಷೆ ಅನುಭವಿಸಬೇಕಾಗುತ್ತದೆ. ಅಶ್ಲೀಲ ಚಿತ್ರಗಳಲ್ಲಿ ಎರಡು ರೀತಿ ಇದೆ. ಒಂದು ಸಾಫ್ಟ್ಕೋರ್ ಚಿತ್ರ, ಇನ್ನೊಂದು ಹಾರ್ಡ್‌ಕೋರ್. ಬಹಿರಂಗ ಅಶ್ಲೀಲ ವಸ್ತುಗಳನ್ನು ಹಾರ್ಡ್‌ಕೋರ್ ಎಂದು ಪರಿಗಣಿಸಲಾಗುತ್ತದೆ. ಲೈಂಗಿಕ ಸಂದರ್ಭಗಳಲ್ಲಿನ ಬೆತ್ತಲೆ, ಅರೆಬೆತ್ತಲೆಯನ್ನು ಸಾಫ್ಟ್ಕೋರ್ ಎಂದು ಉಲ್ಲೇಖಿಸಲಾಗುತ್ತದೆ. ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿರುವ ವೆಬ್ ಸೀರಿಸ್ಗಳಲ್ಲಿ ನಗ್ನತೆ ಒಳಗೊಂಡಿರುತ್ತದೆ. ಆದರೆ, ಪೋರ್ನೋಗ್ರಫಿಕ್ (ಅಶ್ಲೀಲ) ಕಂಟೆಂಟ್ ಇರುವುದಿಲ್ಲ. ಇನ್ನು ಗೌಪ್ಯವಾಗಿ ಅಥವಾ ನಾಲ್ಕು ಗೋಡೆಗಳ ಮಧ್ಯೆ ಪೋರ್ನ್ ವಿಡಿಯೋಗಳನ್ನು ನೋಡುವುದು ಅಪರಾಧವಲ್ಲ ಎಂದು 2015ರಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆದಾಗ್ಯೂ, ಅಶ್ಲೀಲ ವಿಷಯವನ್ನು ಚಿತ್ರೀಕರಿಸುವಲ್ಲಿ ಕಾನೂನಿನಲ್ಲಿಯೂ ಅಸ್ಪಷ್ಟತೆ ಇದೆ.
ರಾಜ್ ಕುಂದ್ರಾ ಯಾರು?
45 ವರ್ಷದ ರಾಜ್ ಕುಂದ್ರಾ ಅವರು ಲಂಡನ್ನಲ್ಲಿನ ಪಂಜಾಬ್ ಕುಟುಂಬದಲ್ಲಿ ಜನಿಸಿದರು. ಲಂಡನ್ನಲ್ಲೇ ಬೆಳೆದ ರಾಜ್ ಕುಂದ್ರಾ, ಪಾಶ್ಮಿನಾ ಶಾಲುಗಳು, ಅಮೂಲ್ಯ ಲೋಹಗಳು, ನಿರ್ಮಾಣಗಳು ಮತ್ತು ನವೀಕರಿಸಬಹುದಾದ ಇಂಧನ ಯೋಜನೆಗಳ ವ್ಯವಹಾರದಿಂದ ಹೆಸರು, ಖ್ಯಾತಿ ಮತ್ತು ಹಣವನ್ನು ಗಳಿಸಿದರು. 2009ರಲ್ಲಿ ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ ಅವರನ್ನು ಮದುವೆ ಆದರು. ಅಂದಹಾಗೆ ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾರ ಎರಡನೇ ಪತ್ನಿ. 2013ರಲ್ಲಿ ಬಿಡುಗಡೆಯಾದ "ಹಣ ಹೇಗೆ ಸಂಪಾದಿಸಬಾರದು" ಎಂಬ ಬುಕ್ ಸಹ ರಾಜ್ ಕುಂದ್ರಾ ಅವರೇ ಬರೆದಿದ್ದು. ಅಲ್ಲದೆ, ಶಿಲ್ಪಾ ಶೆಟ್ಟಿ ಫೌಂಡೇಶನ್ ಹೆಸರಿನ ಎನ್ಜಿಒ ಸಹ ಕುಂದ್ರಾ ನಡೆಸುತ್ತಿದ್ದಾರೆ.
ಕುಂದ್ರಾಗೆ ಕ್ರೀಡಾ ಉದ್ಯಮದ ಮೇಲೂ ಆಸಕ್ತಿ ಇದೆ. ಪತ್ನಿ ಶಿಲ್ಪಾ ಶೆಟ್ಟಿ ಜತೆ ರಾಜಸ್ಥಾನ ರಾಯಲ್ಸ್ ಐಪಿಎಲ್ ತಂಡದ ಒಡೆತನವನ್ನು ಹೊಂದಿದ್ದಾರೆ. ಅಲ್ಲದೆ, 2012ರಲ್ಲಿ ಸೂಪರ್ ಫೈಟ್ ಲೀಗ್ ಉದ್ಘಾಟಿಸಿದ್ದಾರೆ. ಇದು ಭಾರತದ ಮೊದಲ ಮಾರ್ಷಲ್ ಆರ್ಟ್ಸ್ ಫೈಟಿಂಗ್ ಲೀಗ್ ಆಗಿದೆ. ಸಂಜಯ್ ದತ್ ಸಹಯೋಗದೊಂದಿಗೆ ಲೀಗ್ ನಡೆಸುತ್ತಿದ್ದಾರೆ. 2017ರಲ್ಲಿ ಸ್ಪೋರ್ಟ್ಸ್ ಪೊಕರ್ ಲೀಗ್ ಸಹ ಉದ್ಘಾಟಿಸಿದರು. ಕುಂದ್ರಾ ಮನರಂಜನೆ, ಗೇಮಿಂಗ್ ಮತ್ತು ಅನಿಮೇಷನ್ ಬಗ್ಗೆ ವ್ಯವಹರಿಸುವ ಕಂಪನಿಯನ್ನು ಸಹ ನಡೆಸುತ್ತಿದ್ದಾರೆ. 2016ರಲ್ಲಿ ಜ್ಲದಿ ಲೈವ್ ಹೆಸರಿನ ಸೋಶಿಯಲ್ ಮೀಡಿಯಾ ಆ್ಯಪ್ ಸಹ ಉದ್ಘಾಟನೆ ಮಾಡಿದ್ದಾರೆ. ಇದು ಭಾರತದ ಹಬ್ಬದ ಸ್ಟ್ರೀಮಿಂಗ್ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್ ಮೂಲಕ ವೃತ್ತಿಪರರು ಮತ್ತು ಹವ್ಯಾಸಿಗಳು ತಮ್ಮ ಪ್ರತಿಭೆಯನ್ನು ನೇರ ಪ್ರಸಾರ ಮಾಡಲು ಅವಕಾಶ ಇದೆ.
ಏನಿದು ದಂಧೆ?
ಮುಂಬೈ ಪೊಲೀಸರು ಎರಡು ಎಫ್ಐಆರ್ಗಳನ್ನು ದಾಖಲಿಸಿದ್ದು, ಒಂದೆರಡು ಅಶ್ಲೀಲ ಚಿತ್ರಗಳಿಗಾಗಿ ನಗ್ನ ದೃಶ್ಯಗಳನ್ನು ಚಿತ್ರೀಕರಿಸಲು ಮಹತ್ವಾಕಾಂಕ್ಷಿ ನಟಿಯರನ್ನು ಒತ್ತಾಯಿಸಿದ ಆರೋಪದ ಮೇಲೆ 9 ಮಂದಿಯನ್ನು ಬಂಧಿಸಲಾಗಿದೆ. ಮಾಡೆಲ್ ಕಂ ನಟಿ ಗೆಹ್ನಾ ವಸಿಸ್ಟ್ ದಂಧೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪ ಮೇಲೆ ಬಂಧಿಯಾಗಿದ್ದರು. ಕಳೆದ ವಾರವಷ್ಟೇ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. ಪೋರ್ನೋಗ್ರಫಿಕ್ ವಿಡಿಯೋಗಳನ್ನು ತಯಾರಿಸುತ್ತಿದ್ದ ಮಧ್ ದ್ವೀಪದಲ್ಲಿರುವ ಬಂಗಲೆಯ ಮೇಲೂ ಪೊಲೀಸರು ದಾಳಿ ಮಾಡಿದ್ದಾರೆ. ಸಿನಿಮಾದಲ್ಲಿ ಒಳ್ಳೆಯ ಅವಕಾಶ ಕೊಡಿಸಲಾಗುವುದು ಎಂದು ನಂಬಿಸಿ ಅಶ್ಲೀಲ ವಿಡಿಯೋಗಳನ್ನು ಪ್ರೊಡಕ್ಷನ್ ಕಂಪನಿ ತಯಾರಿಸುತ್ತಿತ್ತು ಎಂದು ತಿಳಿದುಬಂದಿದೆ. ಚಿತ್ರೀಕರಿಸಿದ ವಿಡಿಯೋಗಳನ್ನು ಪೋರ್ನ್ ಸೈಟ್ ಮತ್ತು ಮೊಬೈಲ್ ಆ್ಯಪ್ಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದರು ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ.
ಬಂಧಿತರನ್ನು ನಿರ್ಮಾಪಕ-ನಿರ್ದೇಶಕ ರೋವಾ ಖಾನ್ ಅಲಿಯಾಸ್ ಯಾಸ್ಮೀನ್, ಫೋಟೋಗ್ರಾಫರ್ ಮೋನು ಶರ್ಮಾ, ಕ್ರಿಯೇಟಿವ್ ಡೈರೆಕ್ಟರ್ ಪ್ರತಿಭಾ ನಾಲ್ವಾಡೆ ಮತ್ತು ನಟರಾದ ಆರಿಶ್ ಶೇಕ್ ಮತ್ತು ಭಾನು ಠಾಕೂರ್ ಎಂದು ಗುರುತಿಸಲಾಗಿದೆ. ಆರೋಪಿ ಖಾನ್, ಮೊಬೈಲ್ ಅಪ್ಲಿಕೇಶನ್ ನಡೆದುತ್ತಿದ್ದ ಎಂದು ಹೇಳಲಾಗಿದ್ದು, ಅದರಲ್ಲಿ ಅಶ್ಲೀಲ ವಿಡಿಯೋಗಳನ್ನು ಅಪ್‌ಲೋಡ್ ಮಾಡಿರುವುದು ತಿಳಿದುಬಂದಿದೆ.
ನಟಿ ಗೆಹ್ನಾ ವಸಿಸ್ಟ್ ಯುಕೆ ಮೂಲದ ಕಂಪನಿಯಲ್ಲಿ ಸಂಯೋಜಕರಾಗಿ ಕೆಲಸ ಮಾಡುತ್ತಿರುವ ಉಮೇಶ್ ಕಾಮತ್ ಎಂಬುವರಿಗೆ ಸುಮಾರು 87 ಅಶ್ಲೀಲ ವಿಡಿಯೋಗಳನ್ನು ಕಳುಹಿಸಿ ಕೊಟ್ಟಿದ್ದಾರೆನ್ನಲಾಗಿದೆ. ಆ ವಿಡಿಯೋಗಳು ಯುಕೆಯಲ್ಲಿನ Eightshots, Nuefliks, Hotshots and HotHit ಮುಂತಾದ ಆ್ಯಪ್ಗಳಲ್ಲಿ ಅಪ್‌ಲೋಡ್ ಆಗಿವೆ. 2000 ರೂ.ಗಳ ಚಂದಾದಾರಿಕೆ ಅಡಿಯಲ್ಲಿ ಆ ವಿಡಿಯೋಗಳು ಲಭ್ಯವಾಗಲಿವೆ.
ದಂಧೆಯಲ್ಲಿ ರಾಜ್ ಕುಂದ್ರಾ ಪಾತ್ರವೇನು?
ಪ್ರಕರಣದ ಬಗ್ಗೆ ಮಾತನಾಡಿರುವ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಮಿಲಿಂದ್ ಭರಾಂಬೆ, ಜುಲೈ 20ರಂದು ಪ್ರಕರಣ ಪ್ರಮುಖ ಆರೋಪಿ ಉಮೇಶ್ ಕಾಮತ್ ರಾಜ್ ಕುಂದ್ರಾ ಜತೆ ಕೆಲಸ ಮಾಡುತ್ತಿರುವುದು ಪತ್ತೆಯಾಯಿತು. ಪ್ರಶ್ನಾರ್ಹ ಮೊಬೈಲ್ ಅಪ್ಲಿಕೇಶನ್ ಹಾಟ್‌ಶಾಟ್ಸ್, ಯುಕೆ ಮೂಲದ ಕೆನ್ರಿನ್ ಕಂಪನಿಯ ಒಡೆತನದಲ್ಲಿದೆ, ಇದು ಕುಂದ್ರಾ ಅವರ ಸೋದರ ಮಾವ ಪ್ರದೀಪ್ ಬಕ್ಷಿ ಅವರ ಒಡೆತನಕ್ಕೆ ಬದಲಾಯಿತು. ಕುತೂಹಲಕಾರಿ ವಿಚಾರವೆಂದರೆ, ಇದರ ಕಾರ್ಯಾಚರಣೆಯನ್ನು ಕುಂದ್ರಾ ಒಡೆತನದ ವಯಾನ್ ಎಂಬ ಕಂಪನಿಯು ನಡೆಸುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಮುಂಬೈನಲ್ಲಿರುವ ವಿಹಾನ್ ಕಚೇರಿಯ ಮೇಲೆ ಜುಲೈ ಮೊದಲ ವಾರದಲ್ಲಿ ನಡೆದ ದಾಳಿಯಲ್ಲಿ ಅನೇಕ ಸಾಕ್ಷಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ವಿಹಾನ್ನ ಐಟಿ ಮುಖ್ಯಸ್ಥ ರಯಾನ್ ತೊರ್ಪ್ನನ್ನು ಬಂಧಿಸಲಾಯಿತು. ಹಾಟ್‌ಶಾಟ್ ಆ್ಯಪ್ ಅನ್ನು ಆರ್ಮ್ಸ್ಪ್ರೈಮ್ಸ್ ಮೀಡಿಯಾ ಕಂಪನಿಯು ಅಭಿವೃದ್ಧಿಪಡಿಸಿದೆ ಎಂಬ ಸತ್ಯ ಗೊತ್ತಾಯಿತು. ಆರ್ಮ್ಸ್ಫ್ರೈಮ್ ಕಂಪನಿಯಲ್ಲಿ ರಾಜ್ ಕುಂದ್ರಾ ಅವರು ಫೆಬ್ರವರಿ 2019 ಮತ್ತು ಡಿಸೆಂಬರ್ 2019ರ ನಡುವೆ ನಿರ್ದೇಶಕರಾಗಿದ್ದರು. ಆರ್ಮ್ಸ್ಫ್ರೈಮ್ ಕಂಪನಿಯು 2019ರ ಫೆಬ್ರವರಿಯಲ್ಲಿ ರಚಿಸಲಾಗಿತ್ತು. 2019ರ ಡಿಸೆಂಬರ್ವರೆಗೂ ಕುಂದ್ರಾ ನಿರ್ದೇಶಕರಾಗಿದ್ದರು. ಕಂಪನಿಯನ್ನು ಬಿಟ್ಟಾಗ ಹಾಟ್‌ಶಾಟ್ ಎಂಬ ಅಪ್ಲಿಕೇಶನ್ ಅನ್ನು ಉಳಿಸಿಕೊಂಡು, ತಮ್ಮ ಸೋದರ ಮಾವನಿಗೆ ಹಸ್ತಾಂತರಿಸಿದರು. ಆರೋಪಿ ರಯಾನ್ ತೊರ್ಪ್ ಅದರ ಐಟಿ ಆಪರೇಷನ್ ನೋಡಿಕೊಳ್ಳುತ್ತಿದ್ದರು ಎಂದು ಪೊಲೀಸ್ ಆಯುಕ್ತ ಮಿಲಿಂದ್ ಭರಾಂಬೆ ಹೇಳಿದ್ದಾರೆ.
ಈ ಪ್ರಕರಣವು ಹಾಟ್‌ಹಿಟ್ ಮತ್ತು ಜಿವಿ ಸ್ಟುಡಿಯೋಗಳಂತಹ ಇತರ ಅಪ್ಲಿಕೇಶನ್‌ಗಳನ್ನು ಸಹ ಒಳಗೊಂಡಿದೆ. ಜೂನ್ 2020ರಲ್ಲಿ ಆಪಲ್ ಸ್ಟೋರ್ ಹಾಟ್‌ಶಾಟ್‌ಗಳನ್ನು ತೆಗೆದುಹಾಕಿದೆ ಮತ್ತು ಗೂಗಲ್ ಪ್ಲೇ ಸ್ಟೋರ್ ಆ್ಯಪ್ ಅನ್ನು 2020ರ ನವೆಂಬರ್‌ನಲ್ಲಿ ತೆಗೆದುಹಾಕಿದೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ.
ಇದರ ನಡುವೆ ಹೇಳಿಕೆ ನೀಡಿರುವ ಆರೋಪಿ ಗೆಹ್ನಾ ವಸಿಸ್ಟ್ ಪೋರ್ನ್ ವಿಡಿಯೋಗಳನ್ನು ಎರೋಟಿಕಾ ವಿಡಿಯೋಗಳೊಂದಿಗೆ ತಳುಕು ಮಾಡಬೇಡಿ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಕೊನೆಗೂ ಪ್ರಕರಣದಲ್ಲಿ ರಾಜ್ ಕುಂದ್ರಾ ಸೇರಿದಂತೆ ಅನೇಕರು ಬಂಧಿಯಾಗಿದ್ದು, ಕುಂದ್ರಾ ಕುಟುಂಬ ಇದುವರೆಗೂ ಪ್ರಕರಣದ ಬಗ್ಗೆ ಸಾರ್ವಜನಿಕ ಹೇಳಿಕೆ ನೀಡಿಲ್ಲ.
ಮುಂಬೈನಲ್ಲಿರುವಸಂಶಯಾಸ್ಪದ ತಾಣಗಳು
ವಾಣಿಜ್ಯ ನಗರಿ ಮುಂಬೈನಲ್ಲಿ ಅನೇಕ ಪ್ರೊಡಕ್ಸನ್ ಕಂಪನಿಗಳಿವೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಕಿರುತೆರೆ ಅಥವಾ ಸಿನಿಮಾದಲ್ಲಿ ಅವಕಾಶಕ್ಕಾಗಿ ಮುಂಬೈಗೆ ಬರುವ ಯುವತಿಯರನ್ನು ಟಾರ್ಗೆಟ್ ಮಾಡಿ, ಅವಕಾಶ ಕೊಡಿಸುವುದಾಗಿ ನಂಬಿಸಿ ಅಶ್ಲೀಲ ವಿಡಿಯೋಗಳಿಗೆ ಬಳಸಿಕೊಳ್ಳುವುದೇ ಇಂತಹ ಕಂಪನಿಗಳ ಉದ್ದೇಶ ಎಂಬುದು ತಿಳಿದುಬಂದಿದೆ. ಪೋರ್ನ್ ವಿಡಿಯೋಗಳಲ್ಲಿ ಭಾಗವಹಿಸಲು ರಾಜಿ ಮಾಡಿಕೊಳ್ಳಲು ಅನೇಕ ಮಹಿಳೆಯರನ್ನು ಕೇಳಲಾಗುತ್ತದೆ. ಬಿಗ್ ಬಜೆಟ್ ಚಿತ್ರಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ವಿಡಿಯೋಗಳನ್ನು ಸೆರೆಹಿಡಿಯಲಾಗುತ್ತದೆ. ಆದಾಗ್ಯೂ, ಇದುವರೆಗೂ ಯಾವೊಬ್ಬ ಸಂತ್ರಸ್ತೆಗೂ ನೀಡಿದ ಭರವಸೆ ಈಡೇರಿಲ್ಲ.
ವೆಬ್ ಸರಣಿಯ ಚಿತ್ರಗಳಲ್ಲಿ ಪಾತ್ರವನ್ನು ಪಡೆಯುವಲ್ಲಿ ಹೆಣಗಾಡುತ್ತಿರುವ ಕಲಾವಿದರಿಗೆ ಬೋಲ್ಡ್ ದೃಶ್ಯಗಳಲ್ಲಿ ನಟಿಸಲು ಒತ್ತಾಯಿಸಲಾಗುತ್ತದೆ ಎಂದು ತನಿಖೆಯ ಸಮಯದಲ್ಲಿ ಬೆಳಕಿಗೆ ಬಂದಿದೆ ಎಂದು ಮಿಲಿಂದ್ ಭಾರಂಬೆ ಹೇಳಿದ್ದಾರೆ. ಅಲ್ಲದೆ, ಈ ಸಣ್ಣ ದೃಶ್ಯಗಳನ್ನು ವೆಬ್‌ಸೈಟ್‌ಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ ಎಂದು ಕೆಲವು ಮಹಿಳೆಯರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಅಶ್ಲೀಲ ವಿಡಿಯೋಗಳನ್ನು ರೆಕಾರ್ಡ್ ಮಾಡಲು ಮುಂಬೈನಾದ್ಯಂತ ಬಾಡಿಗೆಗೆ ಪಡೆದ ಹಲವಾರು ಬಂಗಲೆಗಳನ್ನು ಪೊಲೀಸರು ಗುರುತಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಮೇಲಿನ ದಾಳಿ ತೀವ್ರಗೊಳ್ಳಲಿದೆ ಎಂದು ಮಾಲ್ವಾನಿ ಪೊಲೀಸ್ ಠಾಣೆಯ ಸಹಾಯಕ ಇನ್ಸ್‌ಪೆಕ್ಟರ್ ಲಕ್ಷ್ಮೀಕಾಂತ್ ಸಲುಂಖೆ ತಿಳಿಸಿದ್ದಾರೆ. (ಏಜೆನ್ಸೀಸ್)