

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಯಿಂದ, ನಾಯಕ ಅನಿರುದ್ಧ ಅವರನ್ನು ಕೈಬಿಟ್ಟಿರುವ ಬೆನ್ನಲ್ಲೇ ಇದೀಗ ಅವರ ಜಾಗಕ್ಕೆ ಯಾರು ಬರ್ತಾರೆ ಎಂಬ ಕುತೂಹಲ ಗರಿಗೆದರಿದೆ.
ಸದ್ಯ ಜೊತೆ ಜೊತೆಯಲಿ ಧಾರಾವಾಹಿ ತಂಡ ವಿವಾದದ ಸುಳಿಯಲ್ಲಿ ಸಿಲುಕಿದ್ದರೂ ಸಹ ಶೋ ಮಸ್ಟ್ ಗೋ ಆನ್ ಅಂದು ಎಂದು ನಿರ್ದೇಶಕ ಕಂ ನಿರ್ಮಾಪಕ ಆರೂರ ಜಗದೀಶ್ ಹೇಳಿದ್ದಾರೆ ಎನ್ನಲಾಗಿದೆ. ಇದೀಗ ಅನಿರುದ್ಧ ಜಾಗಕ್ಕೆ ಯಾವ ನಟ ಬರ್ತಾರೆ ಎಂಬ ಚರ್ಚೆಯಾಗುತ್ತಿದೆ.
ಅನಿರುದ್ಧ ಜಾಗಕ್ಕೆ ಬರುವರ ಸಂಭಾವ್ಯರ ಪಟ್ಟಿ ದಿಗ್ವಿಜಯ ನ್ಯೂಸ್ಗೆ ಲಭ್ಯವಾಗಿದೆ. ಆರ್ಯವರ್ಧನ್ ಪಾತ್ರಕ್ಕೆ ಸದ್ಯ ಮೂರು ನಟರ ಹೆಸರು ಕೇಳಿ ಬರುತ್ತಿವೆ. ಆ ಮೂವರು ನಟರು ಸಹ ಸ್ಯಾಂಡಲ್ವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಹಾಗಾದರೆ ಯಾರು ಆ ಮೂವರು ನಟರು ಅನ್ನೋ ನಿಮ್ಮ ಪ್ರಶ್ನೆಗೆ ಉತ್ತರ ಮುಂದಿದೆ.
ಆರ್ಯವರ್ಧನ್ ಆಗಿ ಚಿನ್ನಾರಿ ಮುತ್ತ ಎಂದೇ ಖ್ಯಾತಿಯಾಗಿರುವ ನಟ ವಿಜಯ ರಾಘವೇಂದ್ರ ಅವರು ಎಂಟ್ರಿ ಕೊಡ್ತಾರಾ? ಅನ್ನೋ ಪ್ರಶ್ನೆ ಮೂಡಿದೆ. ಏಕೆಂದರೆ, ಖಾಸಗಿ ವಾಹಿನಿ ಜೊತೆ ವಿಜಯ್ ರಾಘವೇಂದ್ರ ಅವರಿಗೆ ಉತ್ತಮ ಸಂಭಂದವಿದೆ. ಅನಿರುದ್ಧ ಜಾಗಕ್ಕೆ ವಿಜಯ್ ರಾಘವೇಂದ್ರ ಎಂಟ್ರಿಯಾಗುವ ಸಾಧ್ಯತೆ ಹೆಚ್ಚಿದೆ.
ವಿಜಯ್ ರಾಘವೇಂದ್ರ ಅವರನ್ನು ಬಿಟ್ಟರೆ, ಹರೀಶ್ ರಾಜ್ ಹಾಗೂ ನವೀನ್ ಕೃಷ್ಣ ಅವರು ಸಹ ಕೂಡ ರೇಸ್ನಲ್ಲಿದ್ದಾರೆ. ಆದರೆ, ಧಾರಾವಾಹಿ ತಂಡ ಯಾರಿಗೆ ಮಣೆ ಹಾಕಲಿದೆ ಎಂಬುದನ್ನು ಕಾದು ನೋಡಬೇಕಿದೆ.
ವಿವಾದದ ಹಿನ್ನೆಲೆ
ಅನಿರುದ್ಧ ಅವರಿಂದ ಸಾಕಷ್ಟು ನಷ್ಟವಾಗಿದೆ, ಅವರು ಕ್ಯಾರಾವಾನ್ಗೆ ಪಟ್ಟು ಹಿಡಿಯುತ್ತಿದ್ದರು, ಅವರಿಂದ ಚಿತ್ರೀಕರಣ ಬಹಳ ತಡವಾಗುತ್ತಿತ್ತು ಎಂದು ಆ ಧಾರಾವಾಹಿಯ ನಿರ್ಮಾಪಕ ಮತ್ತು ನಿರ್ದೇಶಕ ಆರೂರು ಜಗದೀಶ್ ಆರೋಪಿಸಿದ್ದರು. ಈ ಸಂಬಂಧ ಕನ್ನಡ ಕಿರುತೆರೆ ನಿರ್ವಪಕರ ಸಂಘಕ್ಕೆ ದೂರು ಕೊಟ್ಟಿದ್ದರು. ಸಾಕಷ್ಟು ಚರ್ಚೆಯ ನಂತರ ಅನಿರುದ್ಧ ಅವರನ್ನು ಧಾರಾವಾಹಿ ತಂಡದಿಂದ ಕೈಬಿಡಲು ತೀರ್ಮಾನಿಸಲಾಗಿದೆ.
ಈ ಕುರಿತು ಪತ್ರಿಕಾಗೋಷ್ಠಿ ಆಯೋಜಿಸಿ ವಿವರಣೆ ನೀಡಿದ ಅನಿರುದ್ಧ, ಧಾರಾವಾಹಿ ತಂಡದವರ ಜತೆಗೆ ಭಿನ್ನಾಭಿಪ್ರಾಯ ಆಗಿರುವುದು ಕಥೆಗೋಸ್ಕರವೇ ಹೊರತು ಬೇರೆ ಯಾವುದೇ ಕಾರಣಕ್ಕೂ ಅಲ್ಲ ಎಂದಿದ್ದಾರೆ. ‘ಭಿನ್ನಾಭಿಪ್ರಾಯ ಎನ್ನುವುದು ಸಾಮಾನ್ಯ. ಇಲ್ಲಿ ಭಿನ್ನಾಭಿಪ್ರಾಯ ಆಗಿದ್ದು ಕಥೆಗೋಸ್ಕರ. ಅದನ್ನು ಹೊರಗೆ ಹೇಳುವ ಅವಶ್ಯಕತೆ ಇರಲಿಲ್ಲ. ಈ ಕಥೆಯನ್ನು ಒಂದು ಎಳೆಯಾಗಿ ತಯಾರಿಸಿ ಅಂತ ಮೊದಲೇ ಹೇಳಿದ್ದೆ. ಆದರೆ, ಪದೇಪದೇ ಕಥೆ ಬದಲಾಯಿಸುತ್ತಲೇ ಇದ್ದಾರೆ. ಮುಂಚೆ ನನ್ನ ಪಾತ್ರ ನೆಗೆಟಿವ್ ಆಗಿರುವುದಿಲ್ಲ ಎಂದು ಹೇಳಿದ್ದರು. ಆದರೆ, ಕೊನೆಗೆ ಅದನ್ನು ನಕಾರಾತ್ಮಕವಾಗಿ ಬಿಂಬಿಸಿದರು. ಇದನ್ನು ನೋಡಿ ಅಭಿಮಾನಿಗಳು ಬೇಸರಗೊಂಡಿದ್ದರು. ಇನ್ನು, ಚಿತ್ರೀಕರಣದ ಹಿಂದಿನ ದಿನವೇ ಸೀನ್ಪೇಪರ್ಗಳನ್ನು ಕೊಡಿ, ತಯಾರಾಗುವುದಕ್ಕೆ ಅನುಕೂಲವಾಗುತ್ತದೆ ಎಂದು ಕೇಳಿದ್ದೆ. ಆದರೆ, ಎಷ್ಟೋ ಬಾರಿ ಶೂಟಿಂಗ್ ಸ್ಪಾಟ್ನಲ್ಲಿ ನನಗೆ ಸೀನ್ ಪೇಪರ್ ಕೊಡುತ್ತಿದ್ದರು. ಇದೆಲ್ಲವನ್ನೂ ಕೇಳಿದ್ದರಿಂದಲೇ ಸಮಸ್ಯೆ ಆಗಿದೆ. ಇದೆಲ್ಲವೂ ಸುಳ್ಳು ಎಂದಾದಲ್ಲಿ ಅವರು ತಮ್ಮ ಮಕ್ಕಳ ತಲೆಯ ಮೇಲೆ ಕೈ ಇಟ್ಟು ಪ್ರಮಾಣ ಮಾಡಲಿ’ ಎಂದು ಸವಾಲೆಸೆಯುತ್ತಾರೆ ಅನಿರುದ್ಧ.
ಇನ್ನು, ಕ್ಯಾರಾವಾನ್ ಇಲ್ಲದಿದ್ದರೆ ಅನಿರುದ್ಧ ನಟಿಸುವುದಿಲ್ಲವಂತೆ ಎಂಬ ತಂಡದವರ ಆರೋಪದ ಕುರಿತಾಗಿ ಸ್ಪಷ್ಟನೆ ನೀಡಿರುವ ಅವರು, ‘ಅಂದು ಶೂಟಿಂಗ್ ನಡೆಯುತ್ತಿದ್ದ ಅಸುಪಾಸಿನಲ್ಲಿ ಯಾವುದೇ ಮನೆ ಇರಲಿಲ್ಲ. ಮೊದಲನೇ ದಿನ ಕ್ಯಾರಾವಾನ್ ಇತ್ತು. ಎರಡನೇ ದಿನ ಇರಲಿಲ್ಲ. ಇದರಿಂದ ಶೌಚಾಲಯಕ್ಕೆ ಸಮಸ್ಯೆ ಆಗುತ್ತಿತ್ತು. ಸೆಟ್ನಲ್ಲಿ ಹೆಂಗಸರು ಇರುತ್ತಾರೆ. ಅವರಿಗೆ ಸಮಸ್ಯೆ ಆಗುತ್ತದೆ ಎಂದು ಹಠ ಮಾಡಿ ಕ್ಯಾರಾವಾನ್ ತರಿಸಿದ್ದೀನಿ. ಅಭಿಮಾನಿಗಳ ಮನೆಗೆ ಪದೇಪದೇ ಬಾತ್ರೂಂಗೆ ಹೋಗುವುದಕ್ಕೆ ಮುಜುಗರ ಆಗುತ್ತದೆ ಎಂಬ ಕಾರಣಕ್ಕೆ ಕ್ಯಾರಾವಾನ್ ಕೇಳಿದೆ’ ಎನ್ನುತ್ತಾರೆ ಅನಿರುದ್ಧ.
‘ಜೊತೆಜೊತೆಯಲಿ’ ಧಾರಾವಾಹಿಯಿಂದ ಕೈಬಿಡುವುದರ ಜತೆಗೆ ಅನಿರುದ್ಧ ಅವರನ್ನು ಎರಡು ವರ್ಷಗಳ ಕಾಲ ಕಿರುತೆರೆಯಿಂದಲೇ ಕನ್ನಡ ಧಾರಾವಾಹಿ ನಿರ್ವಪಕರ ಸಂಘ ಬ್ಯಾನ್ ಮಾಡಿದೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ. ಸಮಸ್ಯೆ ಇರುವುದು ‘ಜೊತೆಜೊತೆಯಲಿ’ ತಂಡ ಮತ್ತು ಅನಿರುದ್ಧ ನಡುವೆ. ಹೀಗಿರುವಾಗ, ಕಿರುತೆರೆಯಿಂದ ಬ್ಯಾನ್ ಮಾಡಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಮುಂದಿಟ್ಟರೆ, ಅನಿರುದ್ಧ ಅವರನ್ನು ಬ್ಯಾನ್ ಮಾಡಿದೆ ಎಂದು ಸಂಘ ಎಲ್ಲೂ ಹೇಳಿಲ್ಲ ಎನ್ನುತ್ತಾರೆ ಸಂಘದ ನಿರ್ದೇಶಕ ಭಾಸ್ಕರ್. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡದ ಅವರು, ‘ಅನಿರುದ್ಧ ಅವರನ್ನು ಬ್ಯಾನ್ ಮಾಡಲಾಗಿದೆ ಎಂದು ನಾವೆಲ್ಲೂ ಹೇಳಿಲ್ಲ. ‘ಜೊತೆಜೊತೆಯಲಿ’ ಧಾರಾವಾಹಿಯ ನಿರ್ವಪಕರಿಗೆ ಅನಿರುದ್ಧ ಅವರಿಂದ ಆದ ಕೆಟ್ಟ ಅನುಭವ ಯಾರಿಗೂ ಆಗಬಾರದು ಎಂಬ ಹಿನ್ನೆಲಯಲ್ಲಿ ಅವರ ಜತೆಗೆ ಕೆಲಸ ಮಾಡಬಾರದು ಎಂಬ ತೀರ್ವನವನ್ನು ತೆಗೆದುಕೊಳ್ಳಲಾಗಿದೆ. ಒಂದು ಪಕ್ಷ ಅನಿರುದ್ಧ ಅವರೇ ಯಾವುದಾದರೂ ಧಾರಾವಾಹಿಯ ನಿರ್ಮಾಣ ಅಥವಾ ನಿರ್ದೇಶನ ಮಾಡಬಹುದು. ಅದಕ್ಕೆ ನಮ್ಮ ತಕರಾರು ಇಲ್ಲ. ಆದರೆ, ಬೇರೆಯವರಿಗೆ ಅವರಿಂದ ಕೆಟ್ಟ ಅನುಭವ ಆಗಬಾರದು ಎಂಬುದು ನಮ್ಮ ಕಳಕಳಿ. ಇದು ಬರೀ ಅನಿರುದ್ಧ ಒಬ್ಬರಿಂದ ಆಗುತ್ತಿರುವ ಸಮಸ್ಯೆ ಅಷ್ಟೇ ಅಲ್ಲ, ಈ ತರಹ ಸಾಕಷ್ಟು ಕಲಾವಿದರಿದ್ದಾರೆ. ಅಂಥವರಿಗೆ ಇದೊಂದು ಸಣ್ಣ ಎಚ್ಚರಿಕೆ ಅಷ್ಟೇ ’ ಎನ್ನುತ್ತಾರೆ ಭಾಸ್ಕರ್.
ಹಣೆಬರಹದಲ್ಲಿ ಬರೆದಿದ್ದಾಗುತ್ತದೆ!
ಇನ್ನು, ಕಿರುತೆರೆಯಲ್ಲಿ ಎರಡು ವರ್ಷ ಕೆಲಸ ಮಾಡಬಾರದು ಎಂಬ ನಿಯಮದ ಕುರಿತು ಮಾತನಾಡುವ ಅನಿರುದ್ಧ, ತಮ್ಮ ಹಣೆಬರಹದಲ್ಲಿ ಏನು ಬರೆದಿದೆಯೋ ಅದಾಗುತ್ತದೆ ಎನ್ನುತ್ತಾರೆ. ‘ನನಗೆ ಮೂಲತಃ ಅನ್ನ ಕೊಟ್ಟಿದ್ದು ದೇವರು. ಅವರ ಮೂಲಕ ಇವರೆಲ್ಲ ಅನ್ನದಾತರಾಗಿದ್ದಾರೆ. ‘ಜೊತೆಜೊತೆಯಲಿ’ ಧಾರಾವಾಹಿಯಲ್ಲಿ ಅವಕಾಶ ಬಂದಾಗ ಮೊದಲು ನಟಿಸುವುದಿಲ್ಲ ಎಂದಿದ್ದೆ. ಆದರೆ, ನೀವೇ ಮಾಡಬೇಕು ಎಂದು ಹೇಳಿದರು. ಕೊನೆಗೆ ನಾನು ಒಪ್ಪಿದೆ. ಏಕೆಂದರೆ, ನನ್ನ ಅನ್ನ ಅಲ್ಲಿತ್ತು. ಯಾವುದು ನನ್ನ ಹಣೆಬರಹದಲ್ಲಿರುವುದಿಲ್ಲವೋ ಅದು ನನಗೆ ಸಿಗುವುದಿಲ್ಲ. ನಾನು ದೇವರನ್ನು ನಂಬಿದ್ದೇನೆ. ಶ್ರದ್ಧೆಯಿಂದ ಕೆಲಸ ಮಾಡಿದ್ದೇನೆ. ದೇವರು ನನ್ನ ಕೈ ಬಿಡುವುದಿಲ್ಲ. ಇನ್ನು, ಅವರು ಹೇಗೆ ನಿರ್ಧಾರ ತೆಗೆದುಕೊಂಡರೋ ಗೊತ್ತಿಲ್ಲ. ಬೇರೆಯವರ ಆರೋಪಗಳನ್ನೂ ಕೇಳಿದಂತೆ, ನನ್ನ ವಿಚಾರವನ್ನೂ ಕೇಳಿ. ಕೂತು ಚರ್ಚೆ ಮಾಡೋಣ. ಆದರೆ, ಆ ಕೆಲಸ ಆಗಲಿಲ್ಲ. ಈ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಯಾರೂ ಮಾಡಲಿಲ್ಲ’ ಎಂದು ಹೇಳಿದ್ದಾರೆ.