

ಬೆಂಗಳೂರು: ಇತ್ತೀಚೆಗಷ್ಟೇ ಸಂಭವಿಸಿದ ರಸ್ತೆ ಅಪಘಾತದಲ್ಲಿ 'ನನ್ನಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋ ಖ್ಯಾತಿಯ ಸಮನ್ವಿ ಮೃತಪಟ್ಟ ಸುದ್ದಿ ಕೇಳಿ ಇಡೀ ಕರ್ನಾಟಕವೇ ಮರುಗಿದೆ. ಕೇವಲ 6 ವರ್ಷದಲ್ಲೇ ಅಕಾಲಿಕ ಮರಣ ಹೊಂದಿದ್ದನ್ನು ನೋಡಿ ಸಾಕಷ್ಟು ಜನರು ವಿಧಿಗೆ ಹಿಡಿಶಾಪ ಹಾಕಿದ್ದಾರೆ.
ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿರುವ ಸಮನ್ವಿ ತಾಯಿ ಹಾಗೂ ಖ್ಯಾತ ನಿರೂಪಕಿ ಅಮೃತಾ ನಾಯ್ಡು ಮಗಳನ್ನು ಕಳೆದುಕೊಂಡ ದುಃಖದಲ್ಲೇ ಜನತೆಯ ಬಳಿ ಮನವಿಯೊಂದನ್ನು ಮಾಡಿದ್ದಾರೆ. ಆ ಭಗವಂತನಿಗೆ ನಮ್ಮ ಮೇಲೆ ಕರುಣೆ ಇಲ್ಲ. ನೀವಾದರೂ ಭಗವಂತನ ಬಳಿ ನಮಗೋಸ್ಕರ ಕೇಳಿಕೊಳ್ಳಿ. ನಿಮ್ಮೆಲ್ಲರ ಪ್ರಾರ್ಥನೆಯಿಂದ ನಮ್ಮ ಕೋರಿಕೆ ಈಡೇರುವ ಭರವಸೆ ನಮ್ಮದು ಎಂದಿದ್ದಾರೆ.
ನಮ್ಮ ಮಗಳು ಸಮನ್ವಿ ನಮ್ಮ ಮಡಿಲಿಗೆ ವಾಪಾಸ್ ಬರಬೇಕು. ನಾನೀಗ ನಾಲ್ಕು ತಿಂಗಳ ಗರ್ಭಿಣಿ. ಮಗಳ ಬರುವಿಕೆಗಾಗಿ ಕಾಯುತ್ತಿರುವೆ. ನನ್ನ ಹೊಟ್ಟೆಯಲ್ಲಿ ನನ್ನ ಕಂದಮ್ಮ ಸಮನ್ವಿಯೇ ತಿರುಗಿ ಬರಲಿ. ಅದಕ್ಕಾಗಿ ನೀವೆಲ್ಲ ನನಗಾಗಿ ದೇವರಲ್ಲಿ ಪಾರ್ಥಿಸಿ. ನಿಮ್ಮ ಪಾರ್ಥನೆಯಿಂದ ಖಂಡಿತ ಸಾಧ್ಯವಾಗುತ್ತದೆ. ಸಮನ್ವಿ ಮತ್ತೆ ನನ್ನ ಹೊಟ್ಟೆಯಲ್ಲೇ ಹುಟ್ಟಿ ಬರಲಿ ಎಂದು ಅಮೃತಾ ಕೇಳಿಕೊಂಡಿದ್ದಾರೆ.
ನಾನು ಮತ್ತೆ ಬದುಕು ಕಟ್ಟಿಕೊಳ್ಳಲು ಸಮನ್ವಿ ಬರ್ಲೇಬೇಕು ಎಂದು ಅಮೃತಾ ಬರೆದುಕೊಂಡಿರುವ ವಾಟ್ಸಪ್ ಸ್ಟೇಟಸ್ ಸ್ಕ್ರೀನ್ ಶಾಟ್ ವೈರಲ್ ಆಗಿದ್ದು, ಅದನ್ನು ನೋಡಿದ ಅನೇಕರು ನಿಮ್ಮ ಬಯಕೆಯನ್ನು ದೇವರು ಖಂಡಿತ ಈಡೇರಿಸುತ್ತಾನೆ. ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಧೈರ್ಯ ತುಂಬಿದ್ದಾರೆ.
ಕಳೆದ ಗುರುವಾರ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಗುದ್ದಿದ ಪರಿಣಾಮ, ಅಮೃತಾ ನಾಯ್ಡು ಅವರ ಮಗಳು ಸಮನ್ವಿ ಮೃತಪಟ್ಟಿದ್ದಾರೆ. ನಗರದ ಕೋಣನಕುಂಟೆ ರಸ್ತೆಯಿಂದ ವಾಜರಹಳ್ಳಿ ಕಡೆಗೆ ತಾಯಿಯೊಂದಿಗೆ ತೆರಳ್ತಿದ್ದಾಗ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಕಿರುತೆರೆ ಕಲಾವಿದೆ, ತಾಯಿ ಅಮೃತಾ ನಾಯ್ಡು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಮನ್ವಿಯ ಅಂತ್ಯಕ್ರಿಯೆ ಬನಶಂಕರಿ ಚಿತಾಗಾರದಲ್ಲಿ ಬಣಜಿಗ ಸಂಪ್ರದಾಯದಂತೆ ಶುಕ್ರವಾರ ನೆರವೇರಿತು.