

ಬೆಂಗಳೂರು: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ತನ್ನ 8ನೇ ಆವೃತ್ತಿಯ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಇನ್ನೂ ಎರಡೇ ವಾರದಲ್ಲಿ ಶೋ ಮುಕ್ತಾಯವಾಗಲಿದ್ದು, ಈ ಬಾರಿ ಯಾರು ಟ್ರೋಫಿ ಗೆಲ್ಲಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ ಮತ್ತು ಲೆಕ್ಕಾಚಾರಗಳು ಸಹ ಶುರುವಾಗಿದೆ.
ಕರೊನಾ ಲಾಕ್ಡೌನ್ನಿಂದ 75 ದಿನಕ್ಕೆ ಮೊಟಕುಗೊಂಡಿದ್ದ ಬಿಗ್ಬಾಸ್ ಶೋ, ಮತ್ತೆ ಎರಡನೇ ಇನ್ನಿಂಗ್ಸ್ ಆರಂಭಿಸಿ ಎಲ್ಲರಿಗೂ ಸರ್ಪ್ರೈಸ್ ನೀಡಿತು. ಇದೀಗ ಅಂತಿಮ ಹಂತಕ್ಕೆ ಬಂದಿದೆ. ಗೆಲುವಿನ ಲೆಕ್ಕಾಚಾರಗಳು ನಡೆಯುತ್ತಿರುವ ನಡುವೆಯೇ ಬಿಗ್ಬಾಸ್ ಶೋ ನಿರ್ದೇಶಕ ಶ್ರೀನಿವಾಸ್ ಮಾಧ್ಯಮವೊಂದರಲ್ಲಿ ಮಾತನಾಡಿದ್ದಾರೆ. ಸ್ಪರ್ಧಿಗಳ ಬಗ್ಗೆ ಅವರು ಮಾತನಾಡಿರುವುದನ್ನು ನೋಡಿದರೆ ಈ ಬಾರಿ ಟ್ರೋಫಿ ತೆಗೆದುಕೊಂಡು ಹೋಗುವ ಸ್ಪರ್ಧಿ ಯಾರೆಂಬ ಸಣ್ಣ ಸುಳಿವು ದೊರೆತಂತಾಗಿದೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಕೂಡ ಈ ಬಗ್ಗೆ ಭಾರಿ ಚರ್ಚೆಯಾಗುತ್ತದೆ.
ಈಗಾಗಲೇ ಜನರ ಬಾಯಿಯಲ್ಲಿ ಓಡಾಡುತ್ತಿರುವಂತೆ ಕೆ.ಪಿ. ಅರವಿಂದ್, ಮಂಜು ಪಾವಗಡ, ದಿವ್ಯಾ ಉರುಡುಗ ಹಾಗೂ ವೈಷ್ಣವಿ ಫೈನಲ್ ತಲುವುದು ಖಚಿತವಾಗಿದೆ. ಆದರೆ, ಟ್ರೋಫಿ ಗೆಲುವಿನ ಅಂತಿಮ ಹಂತದಲ್ಲಿ ಅರವಿಂದ್ ಮತ್ತು ಮಂಜು ಪಾವಗಡ ನಡುವೆ ತೀವ್ರ ಪೈಪೋಟಿ ನಡೆಯಲಿದೆ ಎಂಬ ಬಿಸಿಬಿಸಿ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಬಿಗ್ಬಾಸ್ ಆರಂಭದಲ್ಲಿ ಕಾಮಿಡಿಯಿಂದಲೇ ಸಖತ್ ಸದ್ದು ಮಾಡಿದ್ದ ಮಂಜು ಪಾವಗಡ, ನಂತರದ ದಿನಗಳಲ್ಲಿ ದಿವ್ಯಾ ಸುರೇಶ್ ಜತೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದರು. ಇದು ಅವರ ಮೇಲೆ ಋಣಾತ್ಮಕ ಪ್ರಭಾವವೂ ಬೀರಿತು. ಆದರೆ, ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ.ಪಿ. ನಡುವಿನ ಸಂಬಂಧ ಜಾಲತಾಣದಲ್ಲಿ ಭಾರಿ ಚರ್ಚೆಯಾಗುವುದರೊಂದಿಗೆ ಖ್ಯಾತಿಯನ್ನು ತಂದುಕೊಟ್ಟಿತು. ಬಳಿಕ ಎರಡನೇ ಇನ್ನಿಂಗ್ಸ್ನಲ್ಲಿ ಮಂಜು ದಿವ್ಯಾ ಸುರೇಶ್ರಿಂದ ಕೊಂಚ ಅಂತರ ಕಾಯ್ದುಕೊಂಡಿದ್ದನ್ನು ನೋಡಬಹುದು. ಇದೀಗ ಆಟದ ಮೇಲೆ ಮಂಜು ಸಂಪೂರ್ಣ ಗಮನವಹಿಸಿದ್ದಾರೆ. ಅಲ್ಲದೆ, ಅವರ ಖ್ಯಾತಿ ಮತ್ತಷ್ಟು ಹೆಚ್ಚಾಗಿದೆ. ಟಾಸ್ಕ್ಗಳನ್ನು ಚೆನ್ನಾಗಿ ಮಾಡಿದ್ದಾರೆ ಮತ್ತು ಎಲ್ಲರನ್ನೂ ನಕ್ಕು ನಗಿಸಿದ್ದಾರೆ. ಹೀಗಾಗಿ ಮಂಜು ಮೇಲೆ ಜನರಿಗೆ ಪೂರ್ಣ ವಿಶ್ವಾಸ ಇದೆ ಎನ್ನಬಹುದು.
ಇದಕ್ಕೆ ಪುಷ್ಠಿ ನೀಡುವಂತೆ ಬಿಗ್ಬಾಸ್ ಶೋ ನಿರ್ದೇಶಕ ಶ್ರೀನಿವಾಸ್ ಇತ್ತೀಚೆಗೆ ಮಾಧ್ಯಮವೊಂದರಲ್ಲಿ ಮಂಜು ಕುರಿತು ಒಳ್ಳೆಯ ಮಾತುಗಳನ್ನಾಡಿದ್ದಾರೆ. ಕಾರ್ಯಕ್ರಮ ಶುರುವಾಗುವುದಕ್ಕೂ ಮುನ್ನ ಲಕ್ಸುರಿ ಹೋಟೆಲ್ನಲ್ಲಿ ಕ್ವಾರಂಟೈನ್ನಲ್ಲಿ ಇರುವಾಗ ಮಂಜು ಅವರನ್ನು ತುಂಬಾ ಹತ್ತಿರದಿಂದ ನಿರ್ದೇಶಕರು ಗಮನಿಸಿದ್ದರಂತೆ. ಅವರ ಪ್ರಕಾರ ಮಂಜು ಓರ್ವ ವಿನಮ್ರ ಹಿನ್ನೆಲೆಯುಳ್ಳು ವ್ಯಕ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಿರುತೆರೆಯಲ್ಲಿ ಒಳ್ಳೆಯ ಹೆಸರು ಗಳಿಸಲು ಮಂಜು ತುಂಬಾ ಶ್ರಮಪಟ್ಟಿದ್ದಾರೆ. ಅರವಿಂದ್ ಕೆ.ಪಿ. ಹೋಲಿಸಿದರೆ ಮಂಜು ಹಿನ್ನೆಲೆ ತುಂಬಾ ವಿಭಿನ್ನವಾಗಿದೆ. ಅರವಿಂದ್ ಅವರು ಮೋಟಾರ್ಸ್ಪೋರ್ಟ್ಸ್ನ ಉತ್ಸಾಹಿ, ಅವರು ದೊಡ್ಡ ಪ್ರಾಯೋಜಕರನ್ನು ಪಡೆದಿದ್ದಾರೆ ಮತ್ತು ವಿವಿಧ ದೇಶಗಳಿಗೆ ಭೇಟಿ ನೀಡಿದ್ದಾರೆ ಎಂದು ಹೇಳಿದ್ದಾರೆ.
ಬಿಗ್ಬಾಸ್ ನಿರ್ದೇಶಕರು ಮಾತು ಕೇಳಿಸಿಕೊಂಡಿರುವ ಅನೇಕರು ಕಾರ್ಯಕ್ರಮದ ನಿರ್ಮಾಪಕರು ಮಂಜು ಪಾವಗಡ ಅವರನ್ನು ವಿನಮ್ರ ಹಿನ್ನೆಲೆಯಿಂದ ಬಂದವರಾಗಿರುವುದರಿಂದ ಸೀಸನ್ 8ರ ವಿಜೇತರನ್ನಾಗಿ ಮಾಡಲು ಯೋಜಿಸುತ್ತಿದ್ದಾರೆ ಎಂಬ ಊಹಾಪೋಹಗಳು ಹಬ್ಬಿವೆ. ವೀಡಿಯೊವನ್ನು ನೋಡಿದ ಬಿಬಿಕೆ ವೀಕ್ಷಕರು ಹೇಳುವಂತೆ ಬಹುಶಃ ನಿರ್ದೇಶಕರು ಮಂಜು ಅವರ ಗೆಲುವಿನ ಬಗ್ಗೆ ಸುಳಿವು ನೀಡಿದ್ದಾರೆಂದು ಅಂದಾಜಿಸಿದ್ದಾರೆ. ಆದರೆ, ಅಧಿಕೃತ ಉತ್ತರಕ್ಕಾಗಿ ಇನ್ನು ಎರಡು ವಾರ ಕಾಯಲೇ ಬೇಕಿದೆ. (ಏಜೆನ್ಸೀಸ್)