

ಬೆಂಗಳೂರು: ಕನ್ನಡದ ಅತಿದೊಡ್ಡ ಹಾಗೂ ಪ್ರಖ್ಯಾತ ರಿಯಾಲಿಟಿ ಶೋ ಬಿಗ್ಬಾಸ್ ತನ್ನ 8ನೇ ಆವೃತ್ತಿಯ ಅಂತಿಮ ಘಟ್ಟಕ್ಕೆ ಬಂದಿದೆ. ಇನ್ನೂ ಒಂದು ವಾರದಲ್ಲಿ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ. ಯಾವುದೇ ಭಾಷೆಯ ಬಿಗ್ಬಾಸ್ ಶೋನಲ್ಲಿ ವೀಕ್ಷಕರು ಎದುರು ನೋಡುವಂತಹ ಪ್ರಮುಖ ಎಪಿಸೋಡ್ ಅಂದ್ರೆ ಅದು ಫ್ಯಾಮಿಲಿ ರೌಂಡ್. ಬಿಗ್ಬಾಸ್ ಮನೆಯೊಳಗೆ ಸ್ಪರ್ಧಿಗಳ ಕುಟುಂಬಸ್ಥರು ಪ್ರವೇಶ ನೀಡುವ ಎಪಿಸೋಡ್ ತುಂಬಾ ಭಾವನಾತ್ಮಕವಾಗಿರುತ್ತದೆ.
ಇದುವರೆಗೂ ನಡೆದ ಫ್ಯಾಮಿಲಿ ಸುತ್ತಿನಲ್ಲಿ ಆಯಾ ಸ್ಪರ್ಧಿಗಳ ಕುಟುಂಬಸ್ಥರು ಮನೆಯೊಳಗೆ ಎಂಟ್ರಿ ನೀಡಿದಾಗ ಆಯಾ ಸ್ಪರ್ಧಿಗಳಿಗೆ ಫ್ರೀಜ್ ಟಾಸ್ಕ್ ಕೊಡಲಾಗುತ್ತಿತ್ತು. ಅಂದ್ರೆ, ನಿಂತಿದ್ದ ಅಥವಾ ಕೂತಿದ್ದ ಸ್ಥಳದಲ್ಲಿ ನಿರ್ಜೀವ ಪ್ರತಿಮೆಯಂತೆ ಇರುವುದು. ಒಂದು ಮಾತನ್ನು ಆಡುವಂತಿರಲಿಲ್ಲ. ಬಂದ ಕುಟುಂಬಸ್ಥರು ಬೇರೆಯವರ ಜತೆ ಹೆಚ್ಚು ಮಾತನಾಡುತ್ತಿದ್ದರು. ಕೊನೆಯಲ್ಲಿ ಮನೆಯಿಂದ ಹೋಗುವ ಸಮಯದಲ್ಲಿ ಮಾತ್ರ ಸ್ಪರ್ಧಿಗಳಿಗೆ ತಮ್ಮ ಕುಟುಂಬದ ಜತೆ ಮಾತನಾಡಲು ಅವಕಾಶ ನೀಡಲಾಗುತ್ತಿತ್ತು. ಈ ಹಿಂದೆ ಫ್ಯಾಮಿಲಿ ರೌಂಡ್ಗೆ ಬಹಳ ಮೆಚ್ಚುಗೆ ವ್ಯಕ್ತವಾಗಿವೆ.
ಆದರೆ, ಈ ಬಾರಿ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. ಶೋ ನಿರ್ದೇಶಕ ಜಯದೇವ್ ಕಪ್ಪಣ್ಣ ಸಂದರ್ಶನವೊಂದರಲ್ಲಿ ಗ್ರ್ಯಾಂಡ್ ಫಿನಾಲೆ ಈವೆಂಟ್ ತಯಾರಿ ಕುರಿತು ಮಾತನಾಡುವಾಗ ಭಾವುಕತೆಯನ್ನು ಹೊರಹಾಕಿದ್ದಾರೆ. ಅಂದರೆ, ಈ ಬಾರಿ ಫ್ಯಾಮಿಲಿ ರೌಂಡ್ ನಡೆಸದೇ ಇರುವುದು ಬಹಳ ಬೇಸರವಾಗಿದೆ ಎಂದು ತಿಳಿಸಿದ್ದಾರೆ. ಕರೊನಾ ವೈರಸ್ ಶಿಷ್ಟಾಚಾರ ಪಾಲಿಸಬೇಕಾಗಿರುವುದರಿಂದ ಫ್ಯಾಮಿಲಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಸಾಮಾನ್ಯವಾಗಿ ಫೈನಲ್ ಎಪಿಸೋಡ್ ಅನ್ನು ಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದೆವು. ಅನೇಕ ಜನರು ಮನೆಯೊಳಗೆ ಹೋಗುತ್ತಿದ್ದರು. ಆದರೆ, ಈ ಬಾರಿ ಸಾಂಕ್ರಮಿಕ ನಿರ್ಬಂಧಗಳು ಇರುವುದರಿಂದ ಸ್ಪರ್ಧಿಗಳ ಕುಟುಂಬದ ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಸಾಧ್ಯವಿಲ್ಲ. ಬಿಗ್ಬಾಸ್ ರಿಯಾಲಿಟಿ ಶೋ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫ್ಯಾಮಿಲಿ ರೌಂಡ್ ನಡೆಸಲಾಗುತ್ತಿಲ್ಲ ಎಂದು ಬೇಸರದಿಂದ ಹೇಳಿದ್ದಾರೆ. (ಏಜೆನ್ಸೀಸ್)