

ಮುಂಬೈ: ಕ್ರೂಸ್ ಶಿಪ್ನಲ್ಲಿ ಡ್ರಗ್ಸ್ ಪಾರ್ಟಿ ನಡೆಸಿದ ಆರೋಪದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ಸಿಬಿ) ಬಂಧನಕ್ಕೆ ಒಳಗಾಗಿದ್ದ ಬಾಲಿವುಡ್ ತಾರೆ ಶಾರುಖ್ ಖಾನ್ರ ಮಗ ಆರ್ಯನ್ ಖಾನ್ಗೆ ಕೊನೆಗೂ ನ್ಯಾಯಾಲಯ ಜಾಮೀನು ನೀಡಿದೆ. ಇಂದು (ಅ.28) ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ.
ಆರ್ಯನ್ ಖಾನ್ ಕಳೆದ ಮೂರು ವಾರಗಳಿಂದ ಜಾಮೀನಿಗಾಗಿ ತುಂಬಾ ಪ್ರಯತ್ನಿಸಿದ್ದರು. ಆದರೆ, ಮುಂಬೈನ ವಿಶೇಷ ಎನ್ಡಿಪಿಎಸ್ ಕೋರ್ಟ್ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇದಾದ ಬಳಿಕ ಆರ್ಯನ್ ಖಾನ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಸುದೀರ್ಘ ವಿಚಾರಣೆಯ ಬಳಿಕ ಕೊನೆಗೂ ಆರ್ಯನ್ಗೆ ಜಾಮೀನು ದೊರೆತಿದೆ. ಆರ್ಯನ್ ಸ್ನೇಹಿತರಾದ ಅರ್ಬಾಜ್ ಮರ್ಚೆಂಟ್ ಮತ್ತು ಮಾಡೆಲ್ ಮನ್ಮುಮ್ ಧಮೇಚಾಗೂ ಜಾಮೀನು ಸಿಕ್ಕಿದೆ.
23 ವರ್ಷದ ಆರ್ಯನ್ ಖಾನ್ ಅಕ್ಟೋಬರ್ 3ರಿಂದ ನ್ಯಾಯಾಂಗ ಬಂಧನದಲ್ಲಿದ್ದರು. ಅಕ್ಟೋಬರ್ 8ರಿಂದ ಮುಂಬೈನ ಅರ್ಥರ್ ರಸ್ತೆಯಲ್ಲಿರುವ ಜೈಲಿನಲ್ಲಿದ್ದರು. ಅಂದಿನಿಂದ ಎರಡು ಬಾರಿ ಆರ್ಯನ್ಗೆ ಜಾಮೀನು ತಿರಸ್ಕರಿಸಲಾಗಿದೆ. ಕೊನೆಗೂ 25 ದಿನಗಳ ಬಳಿಕ ಆರ್ಯನ್ಗೆ ಜಾಮೀನು ದೊರೆತಿದೆ.
ಪ್ರತಿ ವಿಚಾರಣೆ ವೇಳೆ ಆರ್ಯನ್ ಖಾನ್ ಪರ ವಾದಿಸಿದ ವಕೀಲರು ದಾಳಿಯ ವೇಳೆ ಆರ್ಯನ್ ಬಳಿ ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ ಎಂದು ಪದೇಪದೆ ಹೇಳುತ್ತಿದ್ದರು. ಆದರೆ, ರೇವ್ ಪಾರ್ಟಿಯಲ್ಲಿ ಆರ್ಯನ್ ಪಾತ್ರವಿದೆ. ಆತ ಅಕ್ರಮ ಡ್ರಗ್ಸ್ ವ್ಯವಹಾರದಲ್ಲಿ ಭಾಗಿಯಾಗಿದ್ದ ಎಂಬುದನ್ನು ಆತನ ವಾಟ್ಸ್ಆ್ಯಪ್ ಚಾಟ್ ಬಹಿರಂಗಪಡಿಸಿದೆ ಎಂದು ಎನ್ಸಿಬಿ ಪರ ವಕೀಲರು ವಾದಿಸುತ್ತಿದ್ದರು.
ವಾಣಿಜ್ಯ ನಗರಿ ಮುಂಬೈನ ಐಷಾರಾಮಿ ಕಾರ್ಡಿಲಿಯಾ ಕ್ರೂಸ್ ಎಂಪ್ರೆಸ್ ಹಡಗಿನ ಒಳಗೆ ನಡೆಯುತ್ತಿದ್ದ ರೇವ್ ಪಾರ್ಟಿಯ ಮೇಲೆ ಅಕ್ಟೋಬರ್ 2ರ ರಾತ್ರಿ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ತಂಡ ದಾಳಿ ನಡೆಸಿ ಕೊಕೇನ್, ಹಶೀಶ್ ಮತ್ತು ಎಂಡಿಎಂಎ ಸೇರಿದಂತೆ ಅನೇಕ ಅಕ್ರಮ ಡ್ರಗ್ಸ್ಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ವೇಳೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಒಟ್ಟು 8 ಮಂದಿಯನ್ನು ಎನ್ಸಿಬಿ ವಶಕ್ಕೆ ಪಡೆದು, ವಿಚಾರಣೆಯ ಬಳಿಕ ಬಂಧಿಸಿತ್ತು.