ಏನಾಯ್ತು ರಾಕಿ ಭಾಯ್​ಗೆ? ಯಾಕಿಷ್ಟು ಸೈಲೆಂಟ್​ ಆಗಿದ್ದಾರೆ? ಆದಷ್ಟು ಬೇಗ ಯಶ್​ ಇದನ್ನು ಮಾಡಲೇಬೇಕಿದೆ....

Yash
Published on

ಬೆಂಗಳೂರು: ಕೆಜಿಎಫ್​ ಚಾಪ್ಟರ್​ 1 ಮತ್ತು 2ರ ಅದ್ಭುತ ಯಶಸ್ಸಿನ ಬಳಿಕ ರಾಕಿಂಗ್​ ಸ್ಟಾರ್​ ಯಶ್​ ತುಂಬಾ ಖುಷಿಯಾಗಿದ್ದಾರೆ. ಕೆಜಿಎಫ್​-2 ನೂರು ದಿನ ಪೂರೈಸಿದ್ದು, ಚಿತ್ರತಂಡ ಸಂಭ್ರಮಿಸಿದೆ. ಆದರೂ ಯಶ್​ ಅಭಿಮಾನಿಗಳು ಚಿಂತೆಯಲ್ಲಿ ಮುಳುಗಿದ್ದಾರೆ. ಅದಕ್ಕೆ ಕಾರಣ ಯಶ್​ ಅವರ ಮುಂದಿನ ಚಿತ್ರ ಯಾವುದು ಎಂಬುದರ ಬಗ್ಗೆ.

ಕೆಜಿಎಫ್​ ಚಾಪ್ಟರ್​ ಬಿಡುಗಡೆಯಾಗಿ ನೂರು ದಿನ ಕಳೆದರೂ ಈವರೆಗೂ ತಮ್ಮ ಮುಂದಿನ ಸಿನಿಮಾ ಯಾವುದು ಎಂಬುದನ್ನು ಯಶ್​ ಬಹಿರಂಗ ಪಡಿಸಿಲ್ಲ. ಹೀಗಾಗಿ ಯಶ್​ ಅವರು ಹೊಸ ಸಿನಿಮಾಗೆ ಸಹಿ ಮಾಡಿದ್ದಾರೋ? ಇಲ್ಲವೋ? ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡತೊಡಗಿದೆ.

ಸದ್ಯ ಯಶ್​ ಅವರು ತಮ್ಮ ಕುಟುಂಬದ ಮೇಲೆ ತಮ್ಮ ಗಮನವನ್ನು ಕೇಂದ್ರಿಕರಿಸಿದ್ದಾರೆ. ಪತ್ನಿ ಮತ್ತು ಮಕ್ಕಳ ಜೊತೆ ಒಳ್ಳೆಯ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಸದ್ಯ ಯಶ್​ ಅವರು ಯೂರೋಪ್​ನಲ್ಲಿ ಬೀಡು ಬಿಟ್ಟಿದ್ದಾರೆ. ಸುಂದರ ತಾಣಗಳನ್ನು ಸುತ್ತಾಡಿಕೊಂಡು ಎಂಜಾಯ್​ ಮಾಡುತ್ತಿದ್ದಾರೆ. ನಾಲ್ಕು ವರ್ಷಗಳ ದಣಿವರಿಯದ ನಿರಂತರದ ಕೆಲಸದ ಬಳಿಕ ಯಶ್​ ತಮ್ಮನ್ನು ತಾವೂ ಕೂಲ್ ಮಾಡಿಕೊಳ್ಳುತ್ತಿರುವುದಲ್ಲಿ ಅನುಮಾನವಿಲ್ಲ. ಇದು ಸರಿಯು ಹೌದು.

ಆದರೆ, ಓರ್ವ ನಾಯಕನಾಗಿ ತಮ್ಮ ಮುಂದಿನ ಸಿನಿಮಾ ಬಗ್ಗೆ ಏನು ನಡೆಯುತ್ತಿದೆ ಎಂಬ ಮಾಹಿತಿ ನೀಡದೇ ಇರುವುದು ಸರಿಯಿಲ್ಲ. ಏಕೆಂದರೆ, ಅವರನ್ನು ಆರಾಧಿಸುವ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಕೊನೆಯ ಪಕ್ಷ ತಮ್ಮ ಸಿನಿಮಾ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಹಂಚಿಕೊಂಡರೆ, ಅಭಿಮಾನಿಗಳಿಗೂ ಸಮಾಧಾನವಾಗುತ್ತದೆ. ಇಲ್ಲದೇ ಹೋದರೆ, ಅಭಿಮಾನಿಗಳಿಗೂ ಅಸಮಾಧಾನಗೊಳ್ಳುವುದರಲ್ಲೂ ಯಾವುದೇ ಅನುಮಾನವಿಲ್ಲ. ಹೀಗಾಗಿ ಯಶ್​ ಆದಷ್ಟು ಬೇಗೆ ತಮ್ಮ ಮುಂದಿನ ಸಿನಿಮಾ ಘೋಷಣೆ ಮಾಡಲಿ ಎಂಬುವುದೇ ಎಲ್ಲರ ಆಶಯವಾಗಿದೆ.

ಇನ್ನು ದಿಲ್​ ರಾಜು ಮತ್ತು ಮೈತ್ರಿ ಮೂವೀ ಮೇಕರ್ಸ್​ನಂತಹ ದೊಡ್ಡ ತೆಲುಗು ನಿರ್ಮಾಪಕರು ಕಾಲ್​ಶೀಟ್​ ಕೇಳಿದ್ದರೂ ಯಶ್​ ಮಾತ್ರ ಯಾರೊಬ್ಬರಿಗೂ ಹಸಿರು ನಿಶಾನೆಯನ್ನು ತೋರಿಲ್ಲ. ಅಚ್ಚರಿಯೆಂದರೆ, ಕೆಜಿಎಫ್​-2 ಬಳಿಕ ಯಶ್​ ತಮ್ಮ ಮುಂದಿನ ಹೊಸ ಚಿತ್ರವನ್ನು ಇನ್ನು ಘೋಷಣೆಯೇ ಮಾಡಿಲ್ಲ. ಯಾವಾಗ ಹೊಸ ಸಿನಿಮಾ ಘೋಷಣೆ ಮಾಡುತ್ತಾರೆ ಅಂತಾ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.

ಬಾಹುಬಲಿ ಬಳಿಕ ಪ್ರಭಾಸ್​ ಸಾಹೋ, ರಾಧೆಶ್ಯಾಮ್​, ಸಲಾರ್​, ಆದಿಪುರುಷ, ಪ್ರಾಜೆಕ್ಟ್​ ಕೆ ಮತ್ತು ಸ್ಪಿರಿಟ್​ನಂತಹ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ, ಯಶ್​ ಏನು ಮಾಡುತ್ತಿದ್ದಾರೆ ಎಂಬುದೇ ಈಗ ಅಚ್ಚರಿಗೆ ಕಾರಣವಾಗಿದೆ. ಎರಡು ದಿನಗಳ ಹಿಂದಷ್ಟೇ ಯಶ್​ 19 ಎಂಬ ಹ್ಯಾಷ್​ಟ್ಯಾಗ್​ ಟ್ರೆಂಡ್​ ಆಗಿತ್ತು. ಈ ಮೂಲಕ ಹೊಸ ಸಿನಿಮಾವನ್ನು ಘೋಷಣೆ ಮಾಡುವಂತೆ ಯಶ್​ ಅವರನ್ನು ಅಭಿಮಾನಿಗಳು ಒತ್ತಾಯಿಸಿದ್ದರು. ಆದರೆ, ಯಶ್​ ಮಾತ್ರ ಒಂದೇ ಒಂದು ಸುಳಿವು ನೀಡದೇ ಸುಮ್ಮನಾಗಿರುವುದು ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿದೆ.

ಮೂಲಗಳ ಪ್ರಕಾರ ಯಶ್​, ಸ್ಯಾಂಡಲ್​ವುಡ್​ನ ಇಬ್ಬರು ಹೊಸ ನಿರ್ದೇಶಕರಿಗೆ ಓಕೆ ಎಂದಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ಬಿಗ್​​ ಬಾಲಿವುಡ್​ ಪ್ರಾಜೆಕ್ಟ್​ ಒಂದರಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ತಮ್ಮ ಮುಂದಿನ ಪ್ರಾಜೆಕ್ಟ್​ ಅನ್ನು ಯಶ್​ ಘೋಷಣೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಳ್ಳೆಯ ಪ್ರಾಜೆಕ್ಟ್​ ಸಿಗಲಿ ಎಂದು ವರ್ಷಗಳ ಕಾಲ ಹುಡುಕುತ್ತಾ ಕೂತರೆ ಸಾಲದು, ಈಗ ಅನುಭವಿಸುತ್ತಿರುವ ಪ್ಯಾನ್​ ಇಂಡಿಯಾ ಕ್ರೇಜ್​ ಉಳಿಸಿಕೊಳ್ಳಬೇಕಾದರೆ, ಒಂದರ ಹಿಂದಂತೆ ಒಂದು ಸಿನಿಮಾಗಳನ್ನು ಘೋಷಣೆ ಮಾಡುವುದು ಒಳಿತು ಎಂಬುದು ಸಿನಿಮಾ ಪಂಡಿತರ ಅಭಿಪ್ರಾಯವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net