

ಬೆಂಗಳೂರು: ‘ಅವನೇ ಶ್ರೀಮನ್ನಾರಾಯಣ’ ನಂತರ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತೆ ಸುದ್ದಿಯಲ್ಲಿದ್ದಾರೆ. ಐದು ಚಿತ್ರಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಅವರು, ಜೂನ್ನಲ್ಲಿ ರಕ್ಷಿತ್ ಅಭಿನಯದ ಹೊಸ ಚಿತ್ರವೊಂದನ್ನು ಪ್ರಾರಂಭಿಸಲಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ, ಪುಷ್ಕರ್ ನಿರ್ವಣದ ಆರು ಚಿತ್ರಗಳು ಇದೊಂದೇ ವರ್ಷ ಬಿಡುಗಡೆಯಾಗಲಿವೆ.
ಹೌದು, ಈ ವರ್ಷ ಆರು ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಸ್ವತಃ ಪುಷ್ಕರ್ ಸ್ಪಷ್ಟಪಡಿಸಿದ್ದಾರೆ. ಮೊದಲ ಹಂತವಾಗಿ ಜೂನ್ನಲ್ಲಿ ‘ಭೀಮಸೇನ ನಳಮಹರಾಜ’ ಮತ್ತು ವಿನಯ್ ರಾಜಕುಮಾರ್ ಅಭಿನಯದ ‘ಟೆನ್’ ಚಿತ್ರಗಳು ಬಿಡುಗಡೆಯಾಗಲಿವೆ. ಅದಲ್ಲದೆ, ಸೆನ್ನಾ ಹೆಗ್ಡೆ ನಿರ್ದೇಶನದಲ್ಲಿ ಪುಷ್ಕರ್ ನಿರ್ವಿುಸುತ್ತಿರುವ ‘ತಿಂಗಳಾಳ್ಚ ನಿಶ್ಚಯಂ’ ಎಂಬ ಮಲಯಾಳಂ ಸಿನಿಮಾ ಸಹ ಬಿಡುಗಡೆಯಾಗಲಿದೆ. ಇನ್ನು ಜುಲೈನಲ್ಲಿ ಶರಣ್ ಅಭಿನಯದ ‘ಅವತಾರ್ ಪುರುಷ’, ಅಕ್ಟೋಬರ್ನಲ್ಲಿ ‘777 ಚಾರ್ಲಿ’ ತೆರೆ ಕಾಣಲಿವೆ. ವರ್ಷದ ಕೊನೆಗೆ ರಕ್ಷಿತ್ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ಸಹ ರಿಲೀಸ್ ಆಗಲಿದೆ. ಒಂದೇ ವರ್ಷದಲ್ಲಿ ಒಂದೇ ನಿರ್ಮಾಣ ಸಂಸ್ಥೆಯಿಂದ ಇಷ್ಟೊಂದು ಸಂಖ್ಯೆಯ ಚಿತ್ರಗಳು ನಿರ್ವಣವಾದ ಉದಾಹರಣೆ ಈ ಹಿಂದೆ ಕನ್ನಡ ಚಿತ್ರರಂಗದಲ್ಲಿ ಆಗಿಲ್ಲ ಎಂಬುದು ಗಮನಾರ್ಹ. ಈ ಪೈಕಿ ‘777 ಚಾರ್ಲಿ’ ಚಿತ್ರವು ಕನ್ನಡವಲ್ಲದೆ, ಇನ್ನೂ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಹಾಕಿದ ದುಡ್ಡಿಗೆ ಮೋಸವಿಲ್ಲ: ಇನ್ನು ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಯಾದ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಕುರಿತಾಗಿ ಕೇಳಿದರೆ, ‘ಹಾಕಿದ ದುಡ್ಡಿಗೆ ಮೋಸವಾಗಲಿಲ್ಲ’ ಎಂಬ ಉತ್ತರ ಅವರಿಂದ ಬರುತ್ತದೆ. ‘ನಾವು ಹಾಕಿದ ಇನ್ವೆಸ್ಟ್ಮೆಂಟ್ ಬಂದಿದೆ. ಆದರೆ, ತುಂಬ ದುಡ್ಡು ಖರ್ಚು ಮಾಡಿದ್ದರಿಂದ ಹೆಚ್ಚು ಲಾಭ ಆಗಲಿಲ್ಲ. ಲಾಭ-ನಷ್ಟ ಎನ್ನುವುದಕ್ಕಿಂತ ಹೆಚ್ಚಾಗಿ ಒಂದೊಳ್ಳೆಯ ಚಿತ್ರ ಮಾಡಿದ ಖುಷಿ ಇದೆ. ನಮ್ಮ ಮಟ್ಟಿಗೆ ಅದೊಂದು ದೊಡ್ಡ ಸಾಧನೆ ಮತ್ತು ಮೈಲಿಗಲ್ಲು’ ಎನ್ನುತ್ತಾರೆ ಪುಷ್ಕರ್.
ಅಮೆಜಾನ್ನಲ್ಲಿ ಹಿಟ್: ಬೇರೆ ಭಾಷೆಗಳಲ್ಲಿ ‘ಅವನೇ ಶ್ರೀಮನ್ನಾರಾಯಣ’ನ ಸಾಧನೆ ಬಗ್ಗೆ ಕೇಳಿದರೆ, ‘ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರ ಒಳ್ಳೆಯ ಪ್ರದರ್ಶನ ಕಂಡಿತು. ತಮಿಳು ಮತ್ತು ಮಲಯಾಳಂನಲ್ಲಿ ಆವರೇಜ್ ಎನ್ನುವ ರೀತಿ ಇತ್ತು. ತಾಂತ್ರಿಕ ಕಾರಣಗಳಿಂದ ಹಿಂದಿಯಲ್ಲಿ ಬಿಡುಗಡೆ ಮಾಡಲಿಲ್ಲ. ಅಷ್ಟರಲ್ಲಿ ಅಮೆಜಾನ್ನಲ್ಲಿ ಬಿಡುಗಡೆಯಾಗಿತ್ತು. ಅಮೆಜಾನ್ನಲ್ಲಿ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ಕನ್ನಡ ಚಿತ್ರಗಳಲ್ಲಿ ನಮ್ಮದೂ ಒಂದು. ಅಲ್ಲಿಂದ ತುಂಬ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಅದರಿಂದ ಕನ್ನಡ ಚಿತ್ರಗಳನ್ನು ಬೇರೆ ಭಾಷೆಯ ಜನರು ಸಹ ನೋಡುವಂತೆ ಆಯಿತು. ಅದರ ಬಗ್ಗೆ ಜನರಲ್ಲಿ ಅರಿವು ಮೂಡಿತು’ ಎನ್ನುತ್ತಾರೆ ಅವರು.