ಪ್ರಶಸ್ತಿ ಖುಷಿಯಲ್ಲಿ ಪುಷ್ಕರ್

Pushkar
Published on

ಬೆಂಗಳೂರು: ಸನ್ನ ಹೆಗ್ಡೆ ನಿರ್ದೇಶನದಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಒಂದು ಮಲಯಾಳಂ ಚಿತ್ರವನ್ನು ನಿರ್ವಿುಸುತ್ತಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ಕೇಳಿಬಂದಿತ್ತು. ‘ತಿಂಗಳಾಚ್ಚ ನಿಶ್ಚಯಂ’ ಎಂಬ ಈ ಚಿತ್ರಕ್ಕೆ ಕೇರಳ ರಾಜ್ಯ ಸರ್ಕಾರದ ಎರಡು ಪ್ರಶಸ್ತಿಗಳು ಸಿಕ್ಕಿವೆ.

ಇತ್ತೀಚೆಗಷ್ಟೇ, 2020ನೇ ಸಾಲಿನ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿವೆ. ಈ ಪೈಕಿ, ‘ತಿಂಗಳಾಚ್ಚ ನಿಶ್ಚಯಂ’ ಚಿತ್ರವು ಅತ್ಯುತ್ತಮ ಕಥೆ ಮತ್ತು ಅತ್ಯುತ್ತಮ ದ್ವಿತೀಯ ಚಿತ್ರ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಈ ಚಿತ್ರಕ್ಕೆ ಸನ್ನ ಹೆಗ್ಡೆ ಅವರೇ ಕಥೆ-ಚಿತ್ರಕಥೆ ಬರೆದಿದ್ದಾರೆ. ಚಿತ್ರಕ್ಕಾಗಿ ಎರಡು ಪ್ರಶಸ್ತಿಗಳನ್ನು ಗೆದ್ದ ಖುಷಿಯಲ್ಲಿ ‘ವಿಜಯವಾಣಿ’ ಜತೆಗೆ ಮಾತನಾಡಿದ ಪುಷ್ಕರ್, ‘ಬಹಳ ಖುಷಿಯಾಗುತ್ತದೆ. ಹೊರಗಡೆಯಿಂದ ಹೋಗಿ ಪ್ರಶಸ್ತಿ ಪಡೆಯುವ ಸಂತೋಷ ಅಷ್ಟಿಷ್ಟಲ್ಲ. ಸದ್ಯಕ್ಕೆ ಇಡೀ ದೇಶದಲ್ಲಿ ಅದ್ಭುತವಾದ ಕಂಟೆಂಟ್ ಬರುತ್ತಿರುವುದು ಮಲಯಾಳಂ ಚಿತ್ರರಂಗದಲ್ಲಿ. ಇಂಥದ್ದೊಂದು ಸಂದರ್ಭದಲ್ಲಿ, ಹಲವು ಸವಾಲು ಗಳ ನಡುವೆ ನಾವು ಎರಡು ಪ್ರಶಸ್ತಿಗಳನ್ನು ಗೆದ್ದಿದ್ದೇವೆ. ಕಣದಲ್ಲಿ ‘ದಿ ಗ್ರೇಟ್ ಇಂಡಿಯನ್ ಕಿಚನ್’, ‘ನಾಯಟ್ಟು’, ‘ಅಯ್ಯಪ್ಪನುಂ ಕೋಶಿಯುಂ’ ಮುಂತಾದ ಜನಮೆಚ್ಚುಗೆ ಪಡೆದ ಚಿತ್ರಗಳಿದ್ದವು. ಅ. 29ರಂದು ಚಿತ್ರವು ನೇರವಾಗಿ ಸೋನಿ ಲಿವ್ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ’ ಎಂದು ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net