

‘1972ರಲ್ಲಿ ನಮ್ಮ ಅಮ್ಮ ನಿರ್ಮಾಪಕಿ ಆಗಬೇಕು ಎಂದುಕೊಂಡಾಗ ಮೊದಲು ಸಪೋರ್ಟ್ ಮಾಡಿದವರು ಅಂದಿನ ಖ್ಯಾತ ನಿರ್ಮಾಪಕ ಎನ್. ವೀರಾಸ್ವಾಮಿ ಅವರು. ನಂತರ, ಇಲ್ಲಿ ಗೆಲ್ಲಬೇಕು ಎಂದರೆ ಮೊದಲು ಕೆಲಸಕ್ಕೆ ಸೋಲಬೇಕು ಎಂದು ಅಮ್ಮನಿಗೆ ಅಪ್ಪಾಜಿ ಸಲಹೆ ನೀಡಿದ್ದರು. ಎಲ್ಲರೂ ಸೋತು ಗೆದ್ದವರೇ. ಮೊದಲ ಹೆಜ್ಜೆಯಲ್ಲೇ ಎಲ್ಲರೂ ಗೆಲ್ಲುವುದಿಲ್ಲ.. ಹೋಗ್ತ ಹೋಗ್ತ ಎಲ್ಲ ತಿಳಿಯುತ್ತದೆ’ ಎನ್ನುತ್ತ ನಿರ್ಮಾಪಕಿ ಮಾನಸ ಅವರಿಗೆ ಕಿವಿಮಾತು ಹೇಳಿದ್ದು ನಟ ರಾಘವೇಂದ್ರ ರಾಜ್ಕುಮಾರ್.
‘ಪುರ್ ಸೋತ್ ರಾಮ’ ಚಿತ್ರದ ಆಡಿಯೋ ಲಾಂಚ್ ಮಾಡಿದ ಅವರು ಚಿತ್ರತಂಡಕ್ಕೆ ಶುಭ ಹಾರೈಸಿದರು. ಮಾನಸ ಅವರ ಚೊಚ್ಚಲ ನಿರ್ವಣದ ಈ ಸಿನಿಮಾಗೆ ಸರು ನಿರ್ದೇಶನ ಮಾಡಿದ್ದು, ನಾಯಕರಲ್ಲೊಬ್ಬರಾಗಿಯೂ ಕಾಣಿಸಿಕೊಂಡಿದ್ದಾರೆ.
ಚಿತ್ರಕ್ಕೆ ಶುಭ ಹಾರೈಸಲು ಅತಿಥಿಯಾಗಿ ಆಗಮಿಸಿದ್ದ ನಟ ಮನುರಂಜನ್ ರವಿಚಂದ್ರನ್, ‘ನಿರ್ವಪಕಿ ಮಾನಸ ತುಂಬ ಪ್ಯಾಷನೇಟ್ ಆಗಿ ಈ ಸಿನಿಮಾ ಮಾಡಿದ್ದಾರೆ’ ಎಂದು ಮೆಚ್ಚುಗೆ ಸೂಚಿಸಿದರು. ‘ಇದು ಮೂರು ವಿಭಿನ್ನ ವಯೋಮಾನದವರ ಕಥೆ. ಮೂವರಿಗೂ ವಿದ್ಯೆ ಇದ್ದರೂ ಜವಾಬ್ದಾರಿ ಇಲ್ಲ. ಕೆಲಸ ಇಲ್ಲದೆ ಬೇರೆಯವರ ಕಾಲೆಳೆಯುವ ಮೂರು ಪಾತ್ರಗಳನ್ನೇ ಆಧಾರವಾಗಿಟ್ಟುಕೊಂಡು ಹಾಸ್ಯಮಯ ಸಿನಿಮಾ ಮಾಡಲಾಗಿದೆ.
ಶೂಟಿಂಗ್ ಮುಗಿದಿದ್ದು, ಮುಂದಿನ ತಿಂಗಳಲ್ಲಿ ಬಿಡುಗಡೆ ಮಾಡುವ ಗುರಿ ಇರಿಸಿಕೊಳ್ಳಲಾಗಿದೆ’ ಎಂದರು ನಿರ್ದೇಶಕ ಸರು. ನಿರ್ದೇಶಕರ ಜತೆ ರವಿಶಂಕರ್ ಗೌಡ ಹಾಗೂ ಶಿವರಾಜ್ ಕೆ.ಆರ್.ಪೇಟೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
‘ನನ್ನದು ಇಲ್ಲಿ ಮನೆಗೆ ಮಾರಿ ಊರಿಗೆ ಉಪಕಾರಿ ಎಂಬಂಥ ಪಾತ್ರ. ಎಲ್ಲ ಜವಾಬ್ದಾರಿಯನ್ನು ತಂದೆಯ ಮೇಲೆ ಹಾಕಿದ ಮಗನ ಪಾತ್ರವನ್ನು ಮಾಡಿದ್ದೇನೆ. ಇಲ್ಲಿ ಹಾಸ್ಯದ ಮೂಲಕವೇ ಒಂದು ಸಂದೇಶ ಹೇಳಿದ್ದೇವೆ’ ಎಂದರು ರವಿಶಂಕರ್ ಗೌಡ. ‘ಪುರಸೊತ್ತಾಗಿರುವ ವ್ಯಕ್ತಿಗಳ ಜೀವನದಲ್ಲಿ ಏನೇನಾಗುತ್ತದೆ ಎಂಬುದೇ ಚಿತ್ರದ ಕಥಾಹಂದರ’ ಎಂದರು ಶಿವರಾಜ್ ಕೆ.ಆರ್.ಪೇಟೆ.
‘ಇದು ಮೂರು ಜನ ನಿರುದ್ಯೋಗಿಗಳ ಕಥೆ. ಮಗನನ್ನು ಸರಿದಾರಿಗೆ ತರುವ ತಂದೆಯ ಪಾತ್ರ ನನ್ನದು. ಇಲ್ಲಿ ರವಿಶಂಕರ್ ನನ್ನ ಮಗನಾಗಿ ನಟಿಸಿದ್ದಾರೆ’ ಎಂದರು ನಟ ಬ್ಯಾಂಕ್ ಜನಾರ್ದನ್. ‘ಈ ಸಿನಿಮಾ ನಿರ್ಮಾಣ ಮಾಡುವ ಮೂಲಕ ಸಾಕಷ್ಟು ವಿಷಯಗಳನ್ನು ಕಲಿತೆ. ನನ್ನ ಈ ಸಾಹಸಕ್ಕೆ ದೊಡ್ಮನೆಯವರದ್ದೇ ದೊಡ್ಡ ಸಪೋರ್ಟ್. ಇಂದು ಇಲ್ಲಿ ರಾಘಣ್ಣ ಅವರು ಬಂದು ಶುಭ ಹಾರೈಸಿದ್ದರಿಂದ ಇಡೀ ಚಿತ್ರರಂಗವೇ ಬೆನ್ನಿಗೆ ನಿಂತಂತೆ ಅನಿಸುತ್ತಿದೆ’ ಎಂದರು ನಿರ್ವಪಕಿ ಮಾನಸ. ಡಾ.ರಾಜ್ಕುಮಾರ್ ಪುತ್ರಿ ಲಕ್ಷ್ಮೀ, ಸಂಗೀತ ನಿರ್ದೇಶಕ ಶುದ್ಧೋ ರಾಯ್, ನಾಯಕಿಯರಲ್ಲಿ ಒಬ್ಬರಾದ ಅನುಷಾ ಮುಂತಾದವರು ಉಪಸ್ಥಿತರಿದ್ದರು.