PUPPY KANNADA MOVIE REVIEW: ಜವಾರಿ ಜನರ ಬದುಕಿನ ವಿವಿಧ ನೋಟ

pauupy review
Published on

ಚಿತ್ರ: ಪಪ್ಪಿ

ನಿರ್ದೇಶನ: ಆಯುಷ್ ಮಲ್ಲಿ

ನಿರ್ಮಾಣ: ಅಂದಪ್ಪ ಸಂಕನೂರು

ತಾರಾಗಣ: ಮಾ.ಜಗದೀಶ್, ಮಾ.ಆದಿತ್ಯ. ದುರುಗಪ್ಪ ಕಂಬ್ಳಿ, ರೇಣುಕಾ ದೇಸಾಯಿ ಮತ್ತಿತರರು

ಶಿವ ಸ್ಥಾವರಮಠ

‘‘ಪಪ್ಪಿ’ ಚಿತ್ರದಲ್ಲಿ ಈ ಹಿಂದೆ ಬಂದಿದ್ದ ‘ತಿಥಿ’ ಚಿತ್ರದ ವೈಬ್ ಇದೆ’ ಎಂದು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ನಟ ಧ್ರುವ ಸರ್ಜಾ ಹೇಳಿದ್ದರು. ‘ತಿಥಿ’ ದಕ್ಷಿಣ ಕರ್ನಾಟಕ ಜನರ ಜೀವನ- ಸಂಸ್ಕೃತಿ ಮೇಲೆ ಬೆಳಕು ಚೆಲ್ಲಿತ್ತು. ಅದೇ ಹಾದಿಯಲ್ಲಿರುವ ‘ಪಪ್ಪಿ’ ಉತ್ತರ ಕರ್ನಾಟಕ ಜನರ ವಲಸೆ ಬದುಕು, ಭಾಷೆಯ ಸೊಗಡು ಹಾಗೂ ಅವರ ಜೀವನದ ಅನನ್ಯತೆಯನ್ನು ತೆರೆದಿಟ್ಟಿದೆ.

ದಡೇಸೂಗುರಿನ ದುರುಗಪ್ಪ (ದುರುಗಪ್ಪ) ಮಾಡಿದ ಸಾಲ ತೀರಿಸಲು ಕುಟುಂಬದ ಜತೆ ಬೆಂಗಳೂರಿಗೆ ವಲಸೆ ಬರುತ್ತಾರೆ. ಮಗ ಪರಶುರಾಮ (ಜಗದೀಶ್) ಓದಿನಲ್ಲಿ ಹಿಂದಿದ್ದರೂ, ಜಾಣ. ಈತ ಹಾಗೂ ಸ್ನೇಹಿತನಿಗೆ (ಆದಿ) ಕಳೆದು ಹೋದ ಸಾಕುನಾಯಿ ಪಪ್ಪಿಯನ್ನು ಹುಡುಕಿಕೊಟ್ಟರೆ 10 ಸಾವಿರ ರೂಪಾಯಿ ಬಹುಮಾನ ಕೊಡುವ ಸುದ್ದಿ ತಿಳಿಯುತ್ತದೆ. ಅದಕ್ಕಾಗಿ ಪಪ್ಪಿ ಹುಡುಕಲು ಹೋಗುತ್ತಾರೆ. ಅವರಿಗೆ ನಾಯಿ ಹಾಗೂ 10 ಸಾವಿರ ಬಹುಮಾನ ಸಿಗುತ್ತಾ? ಪಪ್ಪಿ ಹುಡುಕಲು ಇಬ್ಬರೂ ಏನೆಲ್ಲಾ ಸಾಹಸ ಮಾಡುತ್ತಾರೆ? ಅಷ್ಟಕ್ಕೂ ವಲಸೆ ಕಾರ್ಮಿಕರ ಬದುಕಿನ ಅಂತರಾಳ ಏನು ಎಂಬುದೇ ಚಿತ್ರದ ಕಥೆ.

ನಿರ್ದೇಶಕ ಆಯುಷ್ ಮಲ್ಲಿ ‘ಪಪ್ಪಿ’ ಮೂಲಕ ಮನರಂಜನೆಯ ಜತೆಗೆ ಭಾವನಾತ್ಮಕ ಕಥೆ ಹೇಳಿದ್ದಾರೆ. ಇಲ್ಲಿ ‘ಪಪ್ಪಿ’ ಎಂಬ ನಾಯಿ ಕೇವಲ ಸಾಂದರ್ಭಿಕವಷ್ಟೇ. ಆದರೆ, ಜವಾರಿ ಜನರ ಬದುಕಿನ ಆಳವನ್ನು ಶೋಧಿಸಿದ್ದಾರೆ. ವಲಸೆ ಕಾರ್ಮಿಕರು ಅನುಭವಿಸುವ ತೊಳಲಾಟಗಳು, ಅವರ ಮುಗ್ಧತೆ ಜತೆ ಜತೆಗೆ ಮನುಷ್ಯ ಹಾಗೂ ಪ್ರಾಣಿ ಸಂಬಂಧವನ್ನು ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ವಲಸೆ ಕಾರ್ಮಿಕರ ದೈನಂದಿನ ಜೀವನ ಹೇಗಿರುತ್ತದೆ ಎಂಬುದನ್ನು ಮನಸ್ಸಿಗೆ ಮುಟ್ಟುವಂತೆ ತೋರಿಸಲಾಗಿದೆ. ಅವರು ವಾಸಿಸುವ ಸ್ಥಳಗಳಲ್ಲಿಯೇ ಚಿತ್ರೀಕರಣ ಮಾಡಲಾಗಿದ್ದು, ನೈಜತೆಗೆ ಹೆಚ್ಚು ಒತ್ತು ನೀಡಲಾಗಿದೆ. ಹೀಗಾಗಿ ಎಲ್ಲಿಯೂ ಕೃತಕ ಅನಿಸುವುದಿಲ್ಲ. ಮೊದಲರ್ಧ ಉತ್ತರ ಕರ್ನಾಟಕ ಭಾಷೆ ಸೊಗಡಿನ ಡೈಲಾಗ್‌ಗಳ ಮೂಲಕ ಮನರಂಜಿಸುತ್ತದೆ. ದ್ವಿತೀಯಾರ್ಧ ಭಾವನಾತ್ಮಕವಾಗಿ ಮೂಡಿಬಂದಿದ್ದು, ಕಣ್ಣು ತೇವವಾಗಿಸುತ್ತದೆ.

ಬಾಲ ಕಲಾವಿದರಾದ ಜಗದೀಶ್ ಹಾಗೂ ಆದಿತ್ಯ ಮುಗ್ಧ ನಟನೆ ಹಾಗೂ ಜವಾರಿ ಸೊಗಡಿನ ಡೈಲಾಗ್ ಮೂಲಕ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ದುರುಗಪ್ಪ ನಟನೆ ಹಾಗೂ ಧ್ವನಿ ಇಷ್ಟವಾಗುತ್ತದೆ. ಕೆಲವೇ ಪಾತ್ರಗಳಿದ್ದರೂ ನಿರ್ದೇಶಕರು ಅವುಗಳ ಮೂಲಕವೇ ಕಥೆಯನ್ನು ಅಚ್ಚುಕಟ್ಟಾಗಿ ದಡ ಮುಟ್ಟಿಸಿದ್ದಾರೆ. ಆಯುಷ್ ಮಲ್ಲಿ ಜವಾರಿ ಸಂಭಾಷಣೆ ನಗೆಗಡಲಲ್ಲಿ ತೇಲಿಸುತ್ತದೆ. ಛಾಯಾಗ್ರಾಹಕ ಬಿ.ಸುರೇಶ್ ಬಾಬು ಇಡೀ ಚಿತ್ರವನ್ನು ನೈಜವಾಗಿ ದೃಶ್ಯೀಕರಿಸಿದ್ದಾರೆ. ಶ್ರೀಧರ್ ಕಶ್ಯಪ್ ಸಂಗೀತ ಚೆನ್ನಾಗಿದೆ. ‘ಕಾಲ ಕೆಟ್ಟೈತಂತೆಪ್ಪೋ’ ಸಾಂಗ್ ನೆನಪಿನಲ್ಲಿ ಉಳಿಯುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net