ಬರಲಿದೆ ‘ಪಪ್ಪಿ-2’ : ಸಿನಿಮಾ ಸ್ಕ್ರಿಪ್ಟ್ ಪೂರ್ಣಗೊಂಡಿದ್ದು, ಸದ್ಯದಲ್ಲೇ ಶುರುವಾಗಲಿದೆ ಶೂಟಿಂಗ್

puppy
Published on

ಬೆಂಗಳೂರು: ಒಂದು ಚಿತ್ರ ನಿರೀಕ್ಷಿತ ಯಶಸ್ಸು ಕಂಡ ಬಳಿಕ ಆ ಚಿತ್ರದ ಸೀಕ್ವೆಲ್ ಅಥವಾ ಪ್ರೀಕ್ವೆಲ್ ಮಾಡುವ ಟ್ರೆಂಡ್ ಇತ್ತೀಚೆಗೆ ಹೆಚ್ಚಾಗುತ್ತಿದೆ. ‘ಕಾಂತಾರ’ದ ಪ್ರೀಕ್ವೆಲ್ ಮತ್ತು ‘ನಾನು ಮತ್ತು ಗುಂಡ 2’ ಅದಕ್ಕೆ ಸಾಕ್ಷಿ. ಇದೀಗ ‘ಪಪ್ಪಿ’ ಚಿತ್ರತಂಡ ಕೂಡ ಇದೇ ಹಾದಿಯಲ್ಲಿ ಸಾಗಿದೆ. ಕಳೆದ ಮೇ 1ರಂದು ಬಿಡುಗಡೆಯಾಗಿದ್ದ ಆಯುಷ್ ಮಲ್ಲಿ ನಿರ್ದೇಶನದ ‘ಪಪ್ಪಿ’ಗೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿತ್ತು. ಸಿನಿಮಾ ರಿಲೀಸ್ ಆಗಿ ಶುಕ್ರವಾರಕ್ಕೆ ಯಶಸ್ವಿ 30 ದಿನಗಳನ್ನು ಪೂರೈಸಿದ್ದು, ಇದೀಗ 50ನೇ ದಿನದತ್ತ ದಾಪುಗಾಲಿಟ್ಟಿದೆ. ಇದರ ಬೆನ್ನಲ್ಲೇ ಚಿತ್ರತಂಡ ಸೀಕ್ವೆಲ್‌ಗೆ ಸಿದ್ಧತೆ ನಡೆಸಿದೆ.

ಈ ಬಗ್ಗೆ ಆಯುಷ್ ಮಲ್ಲಿ, ‘‘ಪಪ್ಪಿ’ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಿನಿಮಾ ವೀಕ್ಷಿಸಿದ ಬಹುತೇಕ ಪ್ರೇಕ್ಷಕರು ‘ಪಪ್ಪಿ 2’ ಸಿನಿಮಾ ಮಾಡಿ ಎಂದು ಆಪೇಕ್ಷೆ ವ್ಯಕ್ತಪಡಿಸಿದರು. ನಮಗೂ ಹೌದು ಅಂತನ್ನಿಸಿತು. ಹೀಗಾಗಿ ನಾವು ಕೂಡ ಸಿದ್ಧತೆ ನಡೆಸುತ್ತಿದ್ದೇವೆ. ಖಂಡಿತವಾಗಿಯೂ ‘ಪಪ್ಪಿ 2’ ಬರಲಿದೆ. ಈಗಾಗಲೇ ಸ್ಕ್ರಿಪ್ಟ್ ಹಂತ ಮುಗಿಸಿದ್ದು, ಶೂಟಿಂಗ್ ಹೋಗುವ ಯೋಚನೆ ಮಾಡುತ್ತಿದ್ದೇವೆ. ‘ಪಪ್ಪಿ 2’ ಚಿತ್ರದಲ್ಲಿ ಉತ್ತರ ಕರ್ನಾಟಕ ಜನರ ಜೀವನ, ಸಂಸ್ಕೃತಿಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತೇವೆ. ಇದೇ ಕಲಾ ಬಳಗ ಮುಂದುವರಿಯಲಿದೆ. ಜತೆಗೆ ಒಂದಿಷ್ಟು ಹೊಸ ಕಲಾವಿದರು ಸೇರ್ಪಡೆಯಾಗಲಿದ್ದಾರೆ. ಪ್ರೇಕ್ಷಕರ ಅಪೇಕ್ಷೆಯೇ ನಮ್ಮ ಸಿನಿಮಾಕ್ಕೆ ನಾಂದಿಯಾಯಿತು’ ಎಂದು ಖುಷಿ ವ್ಯಕ್ತಪಡಿಸುತ್ತಾರೆ. ಸದ್ಯ ‘ಪಪ್ಪಿ’ ಬೆಂಗಳೂರು, ಹುಬ್ಬಳ್ಳಿ, ರಾಯಚೂರು, ಸಿಂಧನೂರು, ಇಳಕಲ್, ಶಿವಮೊಗ್ಗ ಸೇರಿ ರಾಜ್ಯಾದ್ಯಂತ 20 ಪ್ರದರ್ಶನಗಳನ್ನು ಕಾಣುತ್ತಿದೆ. ಒಟಿಟಿ ಹಾಗೂ ಟಿವಿ ರೈಟ್ಸ್ ಮಾತುಕತೆಯಾಗಿದ್ದು, ಅದರ ಬಗ್ಗೆಯೂ ಸದ್ಯದಲ್ಲೇ ಮಾಹಿತಿ ನೀಡುವುದಾಗಿ ನಿರ್ದೇಶಕ ಆಯುಷ್ ಮಲ್ಲಿ ಹೇಳಿಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net