

ಬೆಂಗಳೂರು: ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಪಿಆರ್ಕೆ ಬ್ಯಾನರ್ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಿದೆ. ‘ಹಂಬಲ್ ಪೊಲಿಟಿಷಿಯನ್ ನಾಗರಾಜ್’ ಸಿನಿಮಾ ಖ್ಯಾತಿಯ ದಾನಿಶ್ ಸೇಠ್ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೆ ‘ಒನ್ ಕಟ್ ಟು ಕಟ್’ ಎಂದು ಶೀರ್ಷಿಕೆಯೂ ಅಂತಿಮವಾಗಿದೆ. ಇದೀಗ ಈ ಸಿನಿಮಾಕ್ಕೆ ನಾಯಕಿಯಾಗಿ ಸಂಯುಕ್ತಾ ಹೊರನಾಡು ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ವಂಶಿಧರ್ ಭೋಗರಾಜ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಶಾಲೆಯೊಂದರ ಕ್ರಾಫ್ಟ್ ಶಿಕ್ಷಕನಾಗಿ ದಾನಿಶ್ ಕಾಣಿಸಿಕೊಂಡರೆ, ವಿಜ್ಞಾನದ ಶಿಕ್ಷಕಿಯಾಗಿ ಸಂಯುಕ್ತಾ ಅವರ ಪಾತ್ರ ಸಾಗಲಿದೆ. ಈಗಾಗಲೇ ನಾಲ್ಕು ದಿನದ ಶೂಟಿಂಗ್ ಮುಕ್ತಾಯವಾಗಿದ್ದು, ಪಿಆರ್ಕೆ ಬ್ಯಾನರ್ನಲ್ಲಿ ಸಿನಿಮಾ ಸಿಕ್ಕಿದ್ದಕ್ಕೆ ಸಂಭ್ರಮದಲ್ಲಿದ್ದಾರೆ ಸಂಯುಕ್ತಾ. ಈ ಬಗ್ಗೆ ಮಾತನಾಡುವ ಸಂಯುಕ್ತಾ, ‘ಯುವ ನಿರ್ದೇಶಕರಿಗೆ, ಕಲಾವಿದರಿಗೆ, ತಂತ್ರಜ್ಞರಿಗೆ ತಮ್ಮ ಪಿಆರ್ಕೆ ಬ್ಯಾನರ್ನಲ್ಲಿ ಪುನೀತ್ ಅವರು ಅವಕಾಶ ನೀಡುತ್ತ ಬಂದಿದ್ದಾರೆ. ಅದಷ್ಟೇ ಅಲ್ಲ ಪ್ರಯೋಗಾತ್ಮಕ ಸಿನಿಮಾಗಳೂ ಅವರ ಪ್ರೊಡಕ್ಷನ್ನಿಂದ ಬಂದಿವೆ. ‘ಒನ್ ಕಟ್ ಟು ಕಟ್’ ಸಹ ಅದೇ ರೀತಿಯ ಒಂದು ಮಜವಾದ ಹಾಸ್ಯ ಶೈಲಿಯ ಸಿನಿಮಾ’ ಎಂದು ಹೇಳಿಕೊಳ್ಳುತ್ತಾರೆ. ಇನ್ನು ಪ್ರಕಾಶ್ ಬೆಳವಾಡಿ, ಸಂಪತ್, ರೂಪಾ ರಾಯಪ್ಪ, ವಿನೀತ್ ಸೇರಿ ಹಲವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.