ಅಪ್ಪು ಅಭಿಮಾನಿಗಳಿಂದ ರಾಘಣ್ಣ ಅಭಿನಯದ ಚಿತ್ರ'13' ಚಿತ್ರದ ಟೀಸರ್​ ಬಿಡುಗಡೆ

13
Published on

ಬೆಂಗಳೂರು: ಹಾಡು, ಟೀಸರ್​ ಮತ್ತು ಟ್ರೇಲರ್​ಗಳನ್ನು ಸೆಲೆಬ್ರಿಟಿಗಳಿಂದ ಬಿಡುಗಡೆ ಮಾಡಿಸುವುದು ವಾಡಿಕೆ. ಆದರೆ, ಕೆ.ನರೇಂದ್ರಬಾಬು ನಿರ್ದೇಶನದ, ರಾಘವೇಂದ್ರ ರಾಜಕುಮಾರ್​ ಮತ್ತು ಶ್ರುತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ '13' ಚಿತ್ರದ ಟೀಸರ್​ನ್ನು ಪುನೀತ್​ ರಾಜಕುಮಾರ್​ ಅವರ ಅಭಿಮಾನಿಗಳು ಬಿಡುಗಡೆ ಮಾಡಿದ್ದಾರೆ.

ಇತ್ತೀಚೆಗೆ, ರಾಜ್ಯದ 32 ಜಿಲ್ಲೆಗಳಲ್ಲಿ '13' ಚಿತ್ರದ ಟೀಸರ್​ ಏಕಕಾಲದಲ್ಲಿ ಬಿಡುಗಡೆಯಾಯಿತು. ಅಲ್ಲದೆ ದುಬೈ, ಸಿಂಗಪೂರ್ ಸೇರಿದಂತೆ ಅನೇಕ ದೇಶಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ. ಅಷ್ಟೇ ಅಲ್ಲ, ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಎಲ್ಲ ಜಿಲ್ಲೆಗಳಿಂದ ವಿಶೇಷವಾಗಿ ಆಗಮಿಸಿದ್ದ ಪುನೀತ್​ ಅಭಿಮಾನಿಗಳೇ ಸೇರಿ ಟೀಸರ್​ ಬಿಡುಗಡೆ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಭಾಗದಲ್ಲಿ ನಡದೆ ಒಂದು ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣವಾಗಿರುವ '13' ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್‌ ನಿವೃತ್ತ ಸೈನಿಕ ಹಾಗೂ ಗುಜರಿ ಅಂಗಡಿ ಮಾಲೀಕ ಮೋಹನ್ ಕುಮಾರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು, ಅವರ ಪತ್ನಿಯಾಗಿ ಮತ್ತು ಟೀ ಅಂಗಡಿ ನಡೆಸುವ ಸಾಯಿರಾಬಾನು ಎಂಬ ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ಶ್ರುತಿ ಅವರು ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ, ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ.

'13' ಎಂಬ ಹೆಸರಿಟ್ಟುಕೊಂಡು ಚಿತ್ರ ಮಾಡುವಾಗ ಹಲವು ಕಹಿಘಟನೆಗಳು ನಡೆದಿವೆಯಂತೆ. 'ಆದರೂ ಎಲ್ಲವನ್ನೂ ಮರೆತು ಯಶಸ್ಸು ಕಂಡಿದ್ದೇವೆ. ನನ್ನ ಒಂಭತ್ತನೆಯ ಚಿತ್ರದಲ್ಲಿ ರಾಘಣ್ಣ ಅಭಿನಯಿಸಿರುವ ಖುಷಿಯಿದೆ. ಇದೇ ಖುಷಿಯಲ್ಲಿ '13' ಚಿತ್ರದ ಹಬ್ಬವನ್ನು 6 ದಿನಗಳ ಕಾಲ ಆಚರಿಸುತ್ತಿದ್ದೇವೆ. ಮೂರು ಹಿಂದುಳಿದ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ರಿಪೇರಿ ಮಾಡಿಸುತ್ತಿದ್ದೇವೆ. ಹಾವೇರಿ ಜಿಲ್ಲೆಯ ಶಾಲೆಯೊಂದರಿಂದ ಈ ಕೆಲಸ ಪ್ರಾರಂಭವಾಗಲಿದೆ. ಬಡ ಮಕ್ಕಳಿಗೆ ಬ್ಯಾಗ್, ಪುಸ್ತಕಗಳನ್ನು ವಿತರಿಸುತ್ತಿದ್ದೇವೆ. ಈ ಎಲ್ಲ ಕಾರ್ಯಕ್ರಮಗಳ ರೂವಾರಿ ರಾಘಣ್ಣ' ಎನ್ನುತ್ತಾರೆ ನರೇಂದ್ರ ಬಾಬು.

‘13’ ಚಿತ್ರವನ್ನು ಯುವಿ ಪ್ರೊಡಕ್ಷನ್ ಅಡಿಯಲ್ಲಿ ಕೆ. ಸಂಪತ್‌ ಕುಮಾರ್‌, ಹೆಚ್.ಎಸ್. ಮಂಜುನಾಥ್‌, ಮಂಜುನಾಥಗೌಡ ಹಾಗೂ ಸಿ.ಕೇಶವಮೂರ್ತಿ ಸೇರಿ ನಿರ್ಮಿಸಿದ್ದಾರೆ. ಮಂಜುನಾಥ್‌ ನಾಯ್ಡು ಅವರ ಛಾಯಾಗ್ರಹಣ ಹಾಗೂ ಸೋಹನ್‌ ಬಾಬು ಅವರ ಸಂಗೀತ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net