ಮೇ ತಿಂಗಳಲ್ಲಿ ಅಪ್ಪು ಮತ್ತೆ ತೆರೆಯ ಮೇಲೆ!

Published on
ಬೆಂಗಳೂರು: ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಅಭಿಮಾನಿಗಳ ಪಾಲಿನ ಅಪ್ಪು ಮತ್ತು ದೇವರು. ಅಪ್ಪು ನಿಧನರಾಗಿರುವ ಸತ್ಯವನ್ನು ಇನ್ನು ಯಾರೂ ನಂಬುತ್ತಿಲ್ಲ. ಅದರಲ್ಲಿಯೂ, ಅಪ್ಪು ಅವರ ನಟನೆಯನ್ನು ಇನ್ನು ಮುಂದೆ ನಾವು ಬೆಳ್ಳಿ ತೆರೆಯ ಮೇಲೆ ನೋಡಲು ಸಾಧ್ಯವಿಲ್ಲ ಎಂಬುದನ್ನು ನೆನಪಿಸಿಕೊಂಡರೆ ಅಭಿಮಾನಿಗಳಿಗೆ ದುಃಖ ಹೆಚ್ಚಾಗುತ್ತಲೆ ಇದೆ. ಹಾಗಾಗಿಯೇ, ಮಾರ್ಚ್ 17 ರಂದು ಅಪ್ಪು ಅವರ ಹುಟ್ಟುಹಬ್ಬದ ಅಂಗವಾಗಿ ಅವರು ಕೊನೆಯ ಬಾರಿ ಹೀರೋ ಆಗಿ ಅಭಿನಯಿಸಿದ 'ಜೇಮ್ಸ್' ಚಿತ್ರ ರಿಲೀಸ್ ಆದಾಗಿನಿಂದ ಇಂದಿಗೂ ಹಲವು ಥಿಯೇಟರ್​ಗಳಲ್ಲಿ ಹೌಸ್​ಫುಲ್ ಆಗಿ ಪ್ರದರ್ಶನ ಕಾಣುತ್ತಿದೆ.
ಅಪ್ಪು ಅವರನ್ನು ಕೊನೆಯ ಬಾರಿ ಹೀರೋ ಆಗಿ ತೆರೆ ಮೇಲೆ ಕಂಡ ಅಭಿಮಾನಿಗಳು ದಿಲ್ ಖುಷ್ ಆಗಿ ಜತೆಗೆ ಸಿಕ್ಕಾಪಟ್ಟೆ ನೋವು ಕೂಡಾ ಅನುಭವಿಸಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಹೀಗಿರುವಾಗ, ಅಪ್ಪು ಅವರ ಮತ್ತೊಂದು ಸಿನಿಮಾ ಬೆಳ್ಳಿ ತೆರೆಯ ಮೇಲೆ ಮಿಂಚಲಿದೆ ಎಂದರೇ ಅಭಿಮಾನಿಗಳಿಗೆ ಎಷ್ಟು ಖುಷಿಯಾಗಬಹುದು ಅಲ್ವಾ. ಹೌದು, 'ಜೇಮ್ಸ್' ಚಿತ್ರದ ಬಳಿಕ ಮುಂದೇನು ಅಂತ ಚಿಂತಿಸುತ್ತಿದ್ದ ಅಪ್ಪು ಅಭಿಮಾನಿಗಳಿಗೆ ಇರುವ ಉತ್ತರವೇ ಪುನೀತ್ ಅವರ ಕನಸಿನ ಕೂಸು 'ಗಂಧದ ಗುಡಿ'.
'ಗಂಧದ ಗುಡಿ', ಕರ್ನಾಟಕದ ಹಲವು ಸುಂದರ ಪರಿಸರಗಳು, ಕಾಡುಗಳು, ಗುಡ್ಡ, ಬೆಟ್ಟಗಳನ್ನು ಸುತ್ತಿ ಅಲ್ಲಿನ ಸುಂದರ ದೃಶ್ಯಗಳು ಮತ್ತು ಕರ್ನಾಟಕದ ಪ್ರಾಕೃತಿಕ ಸಂಪತ್ತನ್ನು ಸೆರೆಹಿಡಿದು ತಯಾರಿಸಿರುವ ಒಂದು ದೀರ್ಘ ಅವಧಿಯ ಚಿತ್ರವಾಗಿದೆ. ಈ ಚಿತ್ರದ ಬಗ್ಗೆ ಅಪ್ಪು ಅಭಿಮಾನಿಗಳು ಮಾತ್ರವಲ್ಲದೇ ಇಡೀ ಕರುನಾಡ ಜನತೆ ಕಾತುರರಾಗಿದ್ದು, ಈ ಸಿನಿಮಾದ ಮೂಲಕ ಕೂಡಾ ಅಪ್ಪು ಅವರನ್ನು ಮತ್ತೊಂದು ಬಾರಿ ಬೆಳ್ಳಿ ತೆರೆಯ ಮೇಲೆ ಕಣ್ತುಂಬಿಕೊಳ್ಳಲು ರೆಡಿಯಾಗಿದ್ದಾರೆ. ಅಂತಹ ಅಭಿಮಾನಿಗಳಿಗೆ ಈ ಸಿನಿಮಾದ ರಿಲೀಸ್ ಡೇಟ್ ತಿಳಿದುಕೊಳ್ಳುವ ಉತ್ಸಾಹ ಇರುವುದು ಸಹಜ.
ಅಂದಹಾಗೆ, ಹಲವು ಮೂಲಗಳ ಪ್ರಕಾರ 'ಗಂಧದ ಗುಡಿ' ಸಿನಿಮಾ ಮುಂಬರುವ ಮೇ ತಿಂಗಳ ಕೊನೆಯ ವಾರದಲ್ಲಿ ರಿಲೀಸ್ ಆಗಲಿದೆ ಎನ್ನಲಾಗಿದೆ. ಹೌದು, ಅಪ್ಪು ಅವರು ಬಹಳ ಆಸೆಯಿಂದ, ಇಷ್ಟ ಪಟ್ಟು ನಿಷ್ಠೆಯಿಂದ ಈ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಅವರ ಕನಸಿನ ಕೂಸನ್ನು ಬೆಳ್ಳಿ ಪರದೆಯ ಮೇಲೆ ನೋಡುವ ಮುನ್ನವೇ ಅವರು ಎಲ್ಲರನ್ನೂ ಬಿಟ್ಟು ಅಗಲಿದ್ದಾರೆ. ಅಪ್ಪು ಅವರ ಈ ಕನಸಿಗೆ ಸಾಥ್ ನೀಡಿದವರೇ ನಿರ್ದೇಶಕ ಅಮೋಘ ವರ್ಷ. ಇನ್ನು, ಪುನೀತ್ ನಿಧನದ ಬಳಿಕ ನಿರ್ದೇಶಕ ಅಮೋಘ ವರ್ಷ ಅವರು 'ಗಂಧದ ಗುಡಿ'ಯ ಕೆಲಸವನ್ನು ನಿಲ್ಲಿಸಲಿಲ್ಲ. ಹಾಗೂ, ಪುನೀತ್ ಅವರ ಪತ್ನಿ ಅಶ್ವಿನಿ ತಮ್ಮ ಪಿಆರ್​ಕೆ ಪ್ರೊಡಕ್ಷನ್ ಮೂಲಕ ಅಪ್ಪು ಕನಸು ಸಾಕಾರಗೊಳಿಸಲು ನಿರ್ದೇಶಕ ಅಮೋಘ ವರ್ಷ ಅವರಿಗೆ ಸಹಾಯ ಮಾಡಿದ್ದಾರೆ.
ಈ ಸಿನಿಮಾದ ಟೀಸರ್ ಈಗಾಗಲೇ ಡಿಸೆಂಬರ್ 6 ರಂದು ರಿಲೀಸ್ ಆಗಿದ್ದು ಎಲ್ಲರಿಂದ ಒಳ್ಳೆಯ ಮೆಚ್ಚುಗೆ ಗಳಿಸಿತ್ತು. ಇದೀಗ, ಸಿನಿಮಾನೇ ರಿಲೀಸ್‌ಗೆ ಸಜ್ಜಾಗುತ್ತಿದ್ದು, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ರಿಲೀಸ್ ಡೇಟ್ ಅನ್ನು ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸಲಿದ್ದಾರೆ ಎಂಬ ಮಾಹಿತಿ ಇದೆ. ಅಪ್ಪು ಅವರು ಹೀರೋ ಆಗಿ ಕಾಣಿಸಿಕೊಂಡ 'ಜೇಮ್ಸ್' ಚಿತ್ರವನ್ನು ಅಭಿಮಾನಿಗಳು ಹೇಗೆ ಸ್ವಾಗತಿಸಿದ್ದಾರೆ ಎಂದು ಎಲ್ಲರೂ ನೋಡಿದ್ದಾರೆ. ಹಾಗಾದರೆ, ಅಪ್ಪು ಅವರ ಈ ಕನಸಿನ ಕೂಸಾದ 'ಗಂಧದ ಗುಡಿ'ಯನ್ನು ಹೇಗೆಲ್ಲಾ ಸ್ವಾಗತಿಸಲಿದ್ದಾರೆ ಎಂದು ಕಾದು ನೋಡಬೇಕಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net