

ರಕ್ಷಿತಾ ಪ್ರೇಮ್, ನಟಿ
ಇಂದು ನಟ ಪುನೀತ್ ರಾಜಕುಮಾರ್ ಜನ್ಮದಿನ. ಭೌತಿಕವಾಗಿ ನಮ್ಮೊಂದಿಗೆ ಅವರು ಇದ್ದಿದ್ದರೆ ಇಂದು 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಕನ್ನಡ ಅಭಿಮಾನಿಗಳ ಹೃದಯದಲ್ಲಿ ತಮ್ಮ ಸಿನಿಮಾ ಹಾಗೂ ಸಾಮಾಜಿಕ ಸೇವೆಗಳ ಮೂಲಕ ಅಜರಾಮರವಾಗಿದ್ದಾರೆ. 50ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ಪುನೀತ್ ನಟನೆಯ ‘ಅಪ್ಪು’ ಸಿನಿಮಾ ರಿ-ರಿಲೀಸ್ ಮಾಡಲಾಗಿದ್ದು, ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ಪುನೀತ್‌ಗೆ ರಕ್ಷಿತಾ ಜೋಡಿಯಾಗುವ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಟ ಪುನೀತ್ ರಾಜಕುಮಾರ್ ಜತೆಗಿನ ಒಡನಾಟ ಹಾಗೂ ‘ಅಪ್ಪು’ ಸಿನಿಮಾ ಕುರಿತ ಅನುಭವಗಳನ್ನು ನಟಿ ರಕ್ಷಿತಾ ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ.
‘ನಾನು ಹೋಗುತ್ತಿದ್ದ ಡಾನ್ಸ್ ಕ್ಲಾಸ್‌ಗೆ ಪುನೀತ್ ಕೂಡ ಬರುತ್ತಿದ್ದರು. ಆಗಾಗ ಅವರನ್ನು ಭೇಟಿ ಮಾಡುತ್ತಿದ್ದೆ. ಇನ್ನು ಒಮ್ಮೆ ಡಾನ್ಸ್ ಕ್ಲಾಸ್‌ಗೆ ಪುನೀತ್ ಜತೆ ಪಾರ್ವತಮ್ಮ ರಾಜಕುಮಾರ್ ಬಂದಿದ್ದರು. ಅವರು ನನ್ನನ್ನು ಕಂಡು ಗೌರಿ ಶಂಕರ್ ಮಗಳು ಅಲ್ವಾ ಎಂದು ಮಾತನಾಡಿಸಿದರು. ನಾನು ಕೂಡ ಆಗ ಸಿನಿಮಾದ ಆಸಕ್ತಿ ಬಗ್ಗೆ ಹೇಳಿಕೊಂಡೆ. ನಿಮ್ಮ ಫೋಟೋಶೂಟ್ ಕಳುಹಿಸಿಕೊಡಿ ನೋಡೋಣ ಎಂದರು. ಎರಡೂ ಮೂರು ದಿನಗಳಲ್ಲಿ ನಾನು ೆಟೋಶೂಟ್ ಕಳುಹಿಸಿದೆ. ಅದು ಅವರಿಗೆ ಮೆಚ್ಚುಗೆಯಾಯಿತು. ಇನ್ನೊಮ್ಮೆ ನನ್ನ ಹಾಗೂ ಅಪ್ಪು ಇಬ್ಬರ ಫೋಟೋಶೂಟ್ ಮಾಡಿಸಿದರು. ಈ ಕಾಂಬಿನೇಷನ್ ಚೆನ್ನಾಗಿ ಮೂಡಿಬರುತ್ತದೆ ಎಂಬ ಭರವಸೆಯಲ್ಲಿ ಅವರು ನನ್ನನೇ ಈ ಚಿತ್ರಕ್ಕೆ ನಾಯಕನಟಿಯಾಗಿ ಆಯ್ಕೆ ಮಾಡಿದರು. ಇದೊಂದು ಮರೆಯಲಾಗದ ಕ್ಷಣ. ಈ ಚಿತ್ರಕ್ಕಾಗಿ ಪುನೀತ್ ಅವರು ತುಂಬಾ ತಯಾರಿ ನಡೆಸಿ, ಈ ಸಿನಿಮಾ ಮಾಡುತ್ತಿದ್ದರು. ನಾನು ಕೆಮರಾ ಫೇಸ್ ಮಾಡುತ್ತಿರುವುದು ಅದೇ ಮೊದಲು ಆಗಿರುವುದರಿಂದ ಸ್ವಲ್ಪ ಭಯ ಇತ್ತು. ಆಗ ಅಪ್ಪು ಧೈರ್ಯ ತುಂಬುತ್ತಿದ್ದರು. ಇದರಿಂದಾಗಿ ಆ ಸಿನಿಮಾದಲ್ಲಿ ನಾನು ಚೆನ್ನಾಗಿ ನಟಿಸಲು ಸಾಧ್ಯವಾಯಿತು.
ಅಪ್ಪು-ಸುಚಿ ಕಥೆ ಮುಂದುವರಿಯಲಿ: 23 ವರ್ಷಗಳ ಬಳಿಕ ‘ಅಪ್ಪು’ ಸಿನಿಮಾ ರಿ-ರಿಲೀಸ್ ಆಗಿದೆ. ಇಂದಿಗೂ ಈ ಸಿನಿಮಾದ ಕಥೆ ಎಷ್ಟು ತಾಜಾತನದಿಂದ ಕೂಡಿದೆ ಅಲ್ವಾ ಅನಿಸುತ್ತದೆ. ರಿ-ರಿಲೀಸ್ ಆದಾಗಲೇ ನಾನು ಈ ಸಿನಿಮಾವನ್ನು ಪೂರ್ಣವಾಗಿ ನೋಡಿರುವುದು. ‘ಅಪ್ಪು’ ರಿಲೀಸ್ ಆದಾಗ ನಾನು ಸಿನಿಮಾ ನೋಡಿರಲಿಲ್ಲ. ಪಾತ್ರಕ್ಕೆ ನ್ಯಾಯ ಒದಗಿಸಿದ್ದೀನೋ ಅಥವಾ ಇಲ್ಲವೋ ಎಂಬ ಸಣ್ಣ ಭಯದಿಂದಾಗಿ ಆಗ ಚಿತ್ರ ವೀಕ್ಷಿಸಿರಲಿಲ್ಲ. ಕೇವಲ ಹಾಡುಗಳು, ಬಿಟ್ ವಿಡಿಯೋಗಳಷ್ಟೇ ನೋಡಿದ್ದೆ. ಶುಕ್ರವಾರ ಸಹೋದರನ ಜತೆ ಹೋಗಿ ಪೂರ್ತಿ ಸಿನಿಮಾ ನೋಡಿದೆ. ತುಂಬಾ ಇಷ್ಟವಾಯಿತು. ಹಾಡುಗಳು, ಸಂಗೀತ, ಸಾಹಿತ್ಯ, ಸಂಭಾಷಣೆ, ಫೈಟ್‌ಗಳು ಎಲ್ಲ ಅದ್ಭುತವಾಗಿ ಮೂಡಿಬಂದಿವೆ. ‘ಅಪ್ಪು-ಸುಚಿ’ ಲವ್ ಸ್ಟೋರಿ ಇನ್ನು ಮುಂದುವರಿದರೆ ಚೆಂದ ಅಲ್ವಾ ಅನಿಸಿತು. ಇದು ನನ್ನ ಅಭಿಲಾಷೆ ಕೂಡ.
ಆ ಕೊರಗು ಇದ್ದೇ ಇದೆ: ‘ಅಪ್ಪು’ ಸಿನಿಮಾಕ್ಕೆ ಸಿಕ್ಕ ಅಭೂತಪೂರ್ವ ಯಶಸ್ಸಿನಿಂದ ನನಗೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬಂದವು. ಬಳಿಕ ನಾನು ಹೈದರಾಬಾದ್‌ಗೆ ಶ್‌ಟಿ ಆದೆ. ‘ಆಕಾಶ’ ಅಥವಾ ‘ಅರಸು’ ಯಾವುದೋ ಒಂದು ಸಿನಿಮಾಕ್ಕೆ ನನ್ನನ್ನೇ ಹೀರೋಯಿನ್ ಆಗಿ ಆಯ್ಕೆ ಮಾಡಿದ್ದರಂತೆ. ಆದರೆ, ಅದ್ಯಾಕೋ ಅದು ಕಾಲ ಕೂಡಿಬರಲಿಲ್ಲ ಎಂದು ಕಾಣಿಸುತ್ತದೆ. ಮತ್ತೊಮ್ಮೆ ‘ವೀರ ಕನ್ನಡಿಗ’ ಚಿತ್ರಕ್ಕೆ ಅವಕಾಶ ಬಂತು. ಆದರೆ, ಅದೇ ಚಿತ್ರದ ತೆಲುಗಿನ ‘ಆಂಧ್ರವಾಲಾ’ದಲ್ಲಿ ನಾನು ನಟಿಸುತ್ತಿದ್ದೆ. ಅದರಿಂದ ಅದೂ ಸಾಧ್ಯವಾಗಲಿಲ್ಲ. ‘ಅಪ್ಪು’ ಬಳಿಕ ಪುನೀತ್ ಜತೆ ಇನ್ನೊಂದು ಸಿನಿಮಾ ಮಾಡಲಿಲ್ಲವಲ್ಲ ಎಂಬ ಕೊರಗು, ಚಿಂತೆ ನನಗೂ ಆಗಾಗ ಕಾಡುತ್ತಿರುತ್ತದೆ.
ಸಹೃದಯಿ: ಪುನೀತ್ ರಾಜಕುಮಾರ್ ತುಂಬಾ ಸಹೃದಯಿ ಹಾಗೂ ಮಾನವೀಯ ವ್ಯಕ್ತಿ. ಬೇರೆಯವರ ಏಳಿಗೆಯನ್ನು ಕಂಡು ತುಂಬಾ ಖುಷಿಪಡುತ್ತಿದ್ದರು. ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದರು. ಅವರ ಸರಳ ಬದುಕೇ ನಮಗೆಲ್ಲಾ ಆದರ್ಶ. ಇನ್ನು ನಾವು ಕೊನೆಯ ಬಾರಿಗೆ ಭೇಟಿಯಾಗಿದ್ದಾಗ, ಅರ್ಧ ತಾಸಿಗೂ ಹೆಚ್ಚು ಮಾತಾಡಿದ್ದೆವು. ನಮ್ಮ ಮಕ್ಕಳ ಶಿಕ್ಷಣ, ಭವಿಷ್ಯ ಹೀಗೆ ನಾನಾ ವಿಚಾರಗಳ ಬಗ್ಗೆ ಚರ್ಚಿಸಿದ್ದೆವು. ಅವರ ಜತೆ ಕಳೆದ ಪ್ರತಿ ಸಮಯವೂ ಅಮೂಲ್ಯವಾದುದು. ಇನ್ನು ಅವರ ಕೆಲಸಗಳಿಂದಾಗಿ ಇಂದಿಗೂ ನಮ್ಮೊಂದಿಗೆ ಜೀವಂತವಾಗಿದ್ದಾರೆ.