

ಪುನೀತ್ ಯಾವತ್ತೂ ನಿರ್ವಪಕರ ಪರವಾಗಿದ್ದ ನಟ. ಜಾಸ್ತಿ ಖರ್ಚು ಮಾಡಿಸಿದರೆ, ಸುಮ್ಮನೆ ವೇಸ್ಟ್ ಮಾಡಿದರೆ, ಅವರನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ನಿರ್ವಪಕರಿಗೆ ಹೆಚ್ಚು ಖರ್ಚು ಮಾಡಿಸಬೇಡಿ ಎಂದು ಹೇಳುತ್ತಿದ್ದರು. ನಮ್ಮ ಹೊಸ ಚಿತ್ರಕ್ಕೆ 120 ದಿನಗಳ ಕಾಲ ಚಿತ್ರೀಕರಣ ಎಂದಾಗ, ಕಥೆಗೆ ಅಷ್ಟೆಲ್ಲಾ ಯಾಕೆ ಬೇಕು, ನಿರ್ವಪಕರಿಂದ ಹೆಚ್ಚು ಖರ್ಚು ಮಾಡಿಸಬೇಡಿ, ನೀಟ್ ಆಗಿ ಪ್ಲಾನ್ ಮಾಡಿಕೊಳ್ಳಿ ಎಂದು ನಿರ್ದೇಶಕರಿಗೆ ಹೇಳಿದ್ದರು. ಅಷ್ಟೇ ಅಲ್ಲ, ನಮ್ಮ ಚಿತ್ರಕ್ಕೆ ಅಡ್ವಾನ್ಸ್ ಸಹ ಕೇಳಲಿಲ್ಲ ಅವರು. ಅಡ್ವಾನ್ಸ್ ಕೊಡುವುದಕ್ಕೆ ಅವರ ಬಳಿ ಮೂರು ಬಾರಿ ಹೋಗಿದ್ದೆ. ಮೊದಲು ‘ಭಜರಂಗಿ 2’ ಬಿಡುಗಡೆಯಾಗಲಿ, ಆ ನಂತರ ಕೊಡಿ ಎಂದು ಹೇಳುತ್ತಿದ್ದರು. ಎಲ್ಲಿಂದಲೋ ಬಡ್ಡಿಗೆ ದುಡ್ಡು ತಂದು ಕೊಡಬಾರದು ಎಂಬುದು ಅವರ ಉದ್ದೇಶವಾಗಿತ್ತು. ಹಾಗಾಗಿ, ಅಡ್ವಾನ್ಸ್ ಪಡೆಯುತ್ತಿರಲಿಲ್ಲ. ನನ್ನ ಬಳಿಯಷ್ಟೇ ಅಲ್ಲ, ಇತ್ತೀಚಿನ ದಿನಗಳಲ್ಲಿ ಅವರು ಐದಾರು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಯಾರ ಬಳಿಯೂ ಅಡ್ವಾನ್ಸ್ ಪಡೆದಿರಲಿಲ್ಲ. ಇನ್ನು, ಅವರು ಅದೆಷ್ಟು ಜನರಿಗೆ ಸಹಾಯ ಮಾಡುತ್ತಿದ್ದರು ಎಂಬ ಲೆಕ್ಕವೇ ಇಲ್ಲ. ‘ರಣವಿಕ್ರಮ’ ಚಿತ್ರದ ಚಿತ್ರೀಕರಣಕ್ಕೆ ಹೊಸಪೇಟೆಗೆ ಹೋಗಿದ್ದಾಗ, ಜತೆಗೆ ಚೆಕ್ಬುಕ್ ತಂದಿದ್ದರು. ದೇವಸ್ಥಾನ, ಅನಾಥಾಶ್ರಮ, ವೃದ್ಧಾಶ್ರಮ ಹೀಗೆ ಯಾರು ಬಂದು ಕೇಳಿದರೂ ಮಿನಿಮಮ್ ಒಂದು ಲಕ್ಷ ಕೊಡುತ್ತಿದ್ದರು. ನಾನು ಅವರ ಜತೆಗಿದ್ದ 20 ದಿನಗಳಲ್ಲಿ 40-50 ಲಕ್ಷ ಕೊಟ್ಟಿದ್ದರು. ನಿರ್ವಪಕರನ್ನಂತೂ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಲಾಭ-ನಷ್ಟಗಳು ಏನೇ ಇರಲಿ. ಅವರಿಂದ ಯಾರಿಗೂ ತೊಂದರೆಯಾಗಿರಲಿಲ್ಲ.
| ಜಯಣ್ಣ ನಿರ್ಮಾಪಕ
ಒಮ್ಮೆ ಕಥೆ ಓಕೆ ಆದರೆ ಮುಗಿಯಿತು, ಆ ಕಥೆಗೆ ಸಂಪೂರ್ಣ ನ್ಯಾಯ ಸಲ್ಲಿಸುತ್ತಿದ್ದರು ಪುನೀತ್. ಎಷ್ಟೇ ಬಿಸಿಲಿರಲಿ, ಚಳಿಯಿರಲಿ, ಜನರಿರಲಿ, ಎಷ್ಟೇ ಕಷ್ಟವಾಗಲಿ ... ಕಥೆಗೆ ಬೇಕು ಎಂದರೆ ಪುನೀತ್ ಎಂತಹ ರಿಸ್ಕ್ ಬೇಕಾದರೂ ತೆಗೆದುಕೊಳ್ಳುತ್ತಿದ್ದರು. ‘ಜೇಮ್್ಸ’ ಚಿತ್ರದ ಚಿತ್ರೀಕರಣ ಹೊಸಪೇಟೆಯಲ್ಲಿ ನಡೆಯುವಾಗ ವಿಪರೀತ ಬಿಸಿಲು. ಶೂಟಿಂಗ್ ನೋಡುವುದಕ್ಕೆ ಐದು ಸಾವಿರ ಜನ ನೆರೆದಿದ್ದು. ಅದೆಲ್ಲದರ ನಡುವೆಯೂ ಅವರು ನಗುನಗುತ್ತಾ, ಚಿತ್ರೀಕರಣ ಮಾಡುತ್ತಿದ್ದರು. ಸ್ವಲ್ಪ ಬಿಡುವಿದ್ದರೆ ಅಭಿಮಾನಿಗಳೊಂದಿಗೆ ಬೆರೆಯುತ್ತಿದ್ದರು. ಪುನೀತ್ ಅವರ ವಿಶೇಷತೆ ಎಂದರೆ, ಅವರು ಎಲ್ಲರ ಜತೆಗೆ ಮನೆಯವರ ತರಹ ಇರುತ್ತಿದ್ದರು. ಎಲ್ಲರನ್ನೂ ಕೇರ್ ಮಾಡುತ್ತಿದ್ದರು. ಅವರಿದ್ದರೆ ನಮ್ಮ ಎನರ್ಜಿ ಮತ್ತು ಹುಮ್ಮಸ್ಸು ಸಹ ಹೆಚ್ಚಾಗುತ್ತಿತ್ತು. ಇನ್ನು, ಅವರು ಒಮ್ಮೆ ಮೇಕಪ್ ಹಾಕಿಕೊಂಡು ಕ್ಯಾರಾವಾನ್ ಇಳಿದು ಕೆಳಗೆ ಬಂದರೆ ಮತ್ತೆ ತಮ್ಮ ಶಾಟ್ ಮುಗಿಸಿ ಹೋಗುತ್ತಿರಲಿಲ್ಲ. ಶಾಟ್ ಮುಗಿದರೂ, ಅಲ್ಲೇ ಬೇರೆಯವರ ಜತೆ ಮಾತಾಡುತ್ತಾ, ಇನ್ನೊಂದು ದೃಶ್ಯಕ್ಕೆ ತಯಾರಿ ನಡೆಸುತ್ತಿದ್ದರು. ಪುನೀತ್ ಅವರು ಎಂತಹ ಡಾನ್ಸರ್ ಎಂದು ಎಲ್ಲರಿಗೂ ಗೊತ್ತಿದೆ. ಆದರೆ, ಅವರೆಂದೂ ಹಗುರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಮೂರ್ನಾಲ್ಕು ದಿನಗಳ ಕಾಲ ರಿಹರ್ಸಲ್ ಮಾಡಿ, ನಂತರ ಚಿತ್ರೀಕರಣಕ್ಕೆ ಬರುತ್ತಿದ್ದರು. ಎಂತಹ ಕಷ್ಟದ ಸ್ಟೆಪ್ಗಳಿದ್ದರೂ, ಅದನ್ನು ಚೆನ್ನಾಗಿ ನಿರ್ವಹಿಸುತ್ತಿದ್ದರು. ಒಂದೇ ಮಾತಿನಲ್ಲಿ ಹೇಳುವುದಾದರೆ, ಅವರೊಬ್ಬ ಮಿಸ್ಟರ್ ಪರ್ಫೆಕ್ಟ್ ಆಗಿದ್ದರು. ಅವರಲ್ಲಿ ಯಾವುದೇ ನೆಗೆಟಿವಿಟಿ ಇರಲಿಲ್ಲ. ಅವರು ಕೋಪ ಮಾಡಿಕೊಂಡಿಂದ್ದಾಗಲೀ, ಯಾರದ್ದೋ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾಗಲೀ ಎಂದೂ ನೋಡಿಲ್ಲ. ಹೇಗೇ ನೋಡಿದರೂ, ಅವರೊಬ್ಬ ನಿಜವಾದ ಪವರ್ ಆಗಿದ್ದರು.
| ಚೇತನ್ ನಿರ್ದೇಶಕ