

‘ಕರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಪೌರಕಾರ್ಮಿಕರೆಲ್ಲ ಹೀರೋಗಳೇ ...’
‘ಪವರ್ ಸ್ಟಾರ್’ ಪುನೀತ್ ರಾಜಕುಮಾರ್ ಈ ರೀತಿಯಾಗಿ ಕರೊನಾ ವಾರಿಯರ್ಸ್ ಬಗ್ಗೆ ಮೆಚ್ಚುಗೆ ಸೂಚಿಸುವ ಜತೆಗೆ, ಕರೊನಾ ತಡೆಯುವ ನಿಟ್ಟಿನಲ್ಲಿ ಸರ್ಕಾರ ರೂಪಿಸಿರುವ ನೀತಿ-ನಿಯಮಗಳನ್ನು ಎಲ್ಲರೂ ಪಾಲಿಸಬೇಕು ಎಂಬುದಾಗಿಯೂ ಕರೆ ನೀಡಿದ್ದಾರೆ.
ಡಾ.ರಾಜಕುಮಾರ್ ಅವರ ಹುಟ್ಟುಹಬ್ಬ (ಏ.24) ಹಿನ್ನೆಲೆಯಲ್ಲಿ ‘ವಿಜಯವಾಣಿ’ ಜತೆ ಮಾತನಾಡಿದ ಅವರು, ಇದೇ ಮೊದಲ ಸಲ ಅಭಿಮಾನಿಗಳ ಅನುಪಸ್ಥಿತಿಯಲ್ಲಿ ತೀರಾ ಖಾಸಗಿಯಾಗಿ ಜನ್ಮದಿನವನ್ನು ಆಚರಿಸಬೇಕಾಗಿರುವ ಅನಿವಾರ್ಯತೆ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
‘ಈಗಿನ ಪರಿಸ್ಥಿತಿ ತುಂಬಾ ಗಂಭೀರವಾಗಿರುವಂಥದ್ದು. ಈಗ ಎಲ್ಲರೂ ನೀತಿ-ನಿಯಮಗಳನ್ನು ಪಾಲಿಸಬೇಕಾದ್ದು ಅನಿವಾರ್ಯ. ಸಂಭ್ರಮಕ್ಕೆ ಹಲವು ಸಂದರ್ಭಗಳಿರುತ್ತವೆ. ಜನ್ಮದಿನ ಮುಂದಿನ ವರ್ಷವೂ ಬರುತ್ತದೆ. ಆದರೆ, ಈಗ ಜೀವ-ಜೀವನ ಮುಖ್ಯ. ನಮಗೆಲ್ಲರಿಗೂ ಕುಟುಂಬ ಎಂಬುದೊಂದು ಇರುತ್ತದೆ. ಅವರ ಬಗ್ಗೆಯೂ ಕಾಳಜಿ ಅಗತ್ಯ’ ಎಂಬುದಾಗಿ ಹೇಳಿಕೊಂಡ ಪುನೀತ್ ರಾಜಕುಮಾರ್, ಕರೊನಾ ಕಾಡುತ್ತಿರುವ ಈ ಸಂದರ್ಭದಲ್ಲಿ ಅಭಿಮಾನಿಗಳು ಮಾಡುತ್ತಿರುವ ಕೆಲಸಗಳ ಬಗ್ಗೆಯೂ ಮೆಚ್ಚುಗೆ ಸೂಚಿಸಿದರು.
‘ಲಾಕ್‌ಡೌನ್ ಸಂದರ್ಭದಲ್ಲಿ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂಥವರಿಗೆ ರಾಜ್ಯಾದ್ಯಂತ ಡಾ.ರಾಜಕುಮಾರ್ ಹಾಗೂ ನಮ್ಮ ಕುಟುಂಬದ ಅಭಿಮಾನಿಗಳೆಲ್ಲ ತಮ್ಮಿಂದಾದ ಸಹಾಯ ಮಾಡುತ್ತಿದ್ದಾರೆ. ತೊಂದರೆಯಲ್ಲಿ ಇರುವವರಿಗೆ ಅಭಿಮಾನಿಗಳು ನಮ್ಮ ಕುಟುಂಬದ ಹೆಸರಿನಲ್ಲಿ ಊಟ-ತಿಂಡಿ, ಫುಡ್ ಕಿಟ್, ರೇಷನ್ ಇತ್ಯಾದಿಗಳನ್ನು ಅವರದೇ ಸ್ವಂತ ಖರ್ಚಿನಲ್ಲಿ ನೀಡುತ್ತಿದ್ದಾರೆ. ಅವರೆಲ್ಲರಿಗೂ ದೇವರು ಹೆಚ್ಚಿನ ಆರೋಗ್ಯ ನೀಡಿ ಅನುಗ್ರಹಿಸಲಿ’ ಎಂದು ಪುನೀತ್ ರಾಜಕುಮಾರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
‘ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಕರೊನಾ ವೈರಸ್ ಹರಡುವಿಕೆ ತಡೆಯಲು ಪೊಲೀಸರು, ಪೌರಕಾರ್ಮಿಕರು ರಿಸ್ಕ್ ತೆಗೆದುಕೊಂಡು ಹಗಲಿರುಳೆನ್ನದೆ ಕೆಲಸ ಮಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಎಲ್ಲರೂ ನೀತಿ-ನಿಯಮಗಳನ್ನು ಪಾಲಿಸಲೇಬೇಕು. ಯಾರೇ ಆಗಲಿ ನಿಯಮಗಳನ್ನು ಮೀರಿ ವರ್ತಿಸುವ ಮೂಲಕ ಅವರನ್ನು ಹೈ-ರಿಸ್ಕ್‌ನಲ್ಲಿ ಹಾಕಬಾರದು. ಎಲ್ಲರೂ ಮನೆಯಲ್ಲೇ ಇದ್ದು ಕರೊನಾ ತಡೆಯುವಲ್ಲಿ ಸಹಕರಿಸೋಣ’ ಎಂದು ಪುನೀತ್ ಹೇಳಿದ್ದಾರೆ.