‘ಸೈಕೋ’ ಡೈರೆಕ್ಟರ್​ಗೆ ಅದ್ವಿತಿ ಶೆಟ್ಟಿ ‘ಎಸ್’;  ‘ಶಿಕಾರಿಯ’ ಅಭಿಮನ್ಯು ನಾಯಕ

Adviti Shetty 23 March 20
Published on

ಬೆಂಗಳೂರು: 2008ರಲ್ಲಿ ವಿ. ದೇವದತ್ತ ನಿರ್ದೇಶನದಲ್ಲಿ ‘ಸೈಕೋ’ ಸಿನಿಮಾ ತೆರೆಕಂಡಿತ್ತು. ‘ನಿನ್ನ ಪೂಜೆಗೆ ಬಂದೆ ಮಾದೇಶ್ವರ..’ ಹಾಡಿನ ಮೂಲಕ ಆ ಚಿತ್ರ ಸದ್ದು ಮಾಡಿತ್ತು. ಈಗ ಸುದೀರ್ಘ 12 ವರ್ಷಗಳ ಬಳಿಕ ಆ ಚಿತ್ರದ ನಿರ್ದೇಶಕ ದೇವದತ್ತ, ‘ಎಸ್’ ಎಂಬ ಹೊಸ ಶೀರ್ಷಿಕೆಯ ಸಿನಿಮಾ ಮೂಲಕ ಮತ್ತೆ ಆಗಮಿಸಿದ್ದಾರೆ. ಅಂದಹಾಗೆ, ಈ ಚಿತ್ರಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಆಯ್ಕೆಯಾದರೆ, ಇತ್ತೀಚೆಗಷ್ಟೇ ತೆರೆಕಂಡಿದ್ದ ‘ಒಂದು ಶಿಕಾರಿಯ ಕಥೆ’ಯಲ್ಲಿ ನಟಿಸಿದ್ದ ಅಭಿಮನ್ಯು ಪ್ರಜ್ವಲ್ ನಾಯಕನಾಗಿ ನಟಿಸಲಿದ್ದಾರೆ.

ಹಾಗಾದರೆ, ಏನಿದು ‘ಎಸ್’? ‘ಚಿತ್ರದಲ್ಲಿ ಕಥಾನಾಯಕನ ಹೆಸರು ಸತ್ಯಕಾಮ. ನಾಯಕಿಯ ತಂದೆ ಸುಧಾಮೂರ್ತಿ ಅವರ ಅಭಿಮಾನಿ ಆ ಕಾರಣಕ್ಕೆ ಮಗಳ ಹೆಸರು ಸುಧಾ. ನಾಯಕ ಮತ್ತು ನಾಯಕಿ ಇಬ್ಬರೂ ಐಟಿ ಕಂಪನಿಯಲ್ಲಿ ಕೆಲಸ ಮಾಡುವವರು. ಇಬ್ಬರ ನಡುವಿನ ಪ್ರೀತಿ, ಪ್ರೇಮದ ಜತೆಗೆ ಒಂದಷ್ಟು ಹೊಸತನವನ್ನೂ ನೋಡುಗರಿಗೆ ಈ ಸಿನಿಮಾ ಮೂಲಕ ನೀಡಲಿದ್ದೇವೆ’ ಎಂದು ಸಿನಿಮಾ ಬಗ್ಗೆ ಹೇಳಿಕೊಳ್ಳುತ್ತಾರೆ ದೇವದತ್ತ.

‘ಸೈಕೋ’ ಸಿನಿಮಾ ಬಿಡುಗಡೆ ಬಳಿಕ ಎಂಎ ಮತ್ತು ಹಲವು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದ ದೇವದತ್ತ, ಬಳಿಕ ಆದರ್ಶ ಸಿನಿಮಾ ಶಾಲೆಯಲ್ಲಿ ಪ್ರಾಚಾರ್ಯರಾಗಿಯೂ ಕೆಲಸ ಮಾಡಿದರು. ಕಳೆದ ನವೆಂಬರ್​ನಲ್ಲಿ ‘ಮತ್ತೊಂದು ಸಿನಿಮಾ ಮಾಡಿ’ ಎಂಬ ಆಪ್ತರ ಸಲಹೆಯನ್ನೇ ಗಂಭೀರವಾಗಿ ತೆಗೆದುಕೊಂಡು, ‘ಎಸ್’ ಸಿನಿಮಾ ಕಥೆ ಮಾಡಿದ್ದಾರೆ. ಸದ್ಯಕ್ಕೆ ಕರೊನಾ ಭೀತಿ ಸೃಷ್ಟಿಯಾಗಿರುವುದರಿಂದ ಏಪ್ರಿಲ್ ವೇಳೆಗೆ ಸಿನಿಮಾ ಶೂಟಿಂಗ್ ಶುರುಮಾಡುವ ಯೋಜನೆ ಹಾಕಿಕೊಂಡಿದ್ದಾರೆ ನಿರ್ದೇಶಕರು. ಚಿತ್ರದ ಶೇ. 70 ಶೂಟಿಂಗ್ ಬೆಂಗಳೂರಿನಲ್ಲಿಯೇ ನಡೆಯಲಿದ್ದು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರದಲ್ಲೂ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಎರಡು ಹಾಡುಗಳಿರಲಿದ್ದು, ಮಡಿಕೇರಿ ಹಾಗೂ ಚಿಕ್ಕಮಗಳೂರಿನಲ್ಲಿ ಹಾಡುಗಳ ಶೂಟಿಂಗ್ ನಡೆಯಲಿದೆ.

ಕಥೆ-ಚಿತ್ರಕಥೆ-ಸಂಭಾಷಣೆಯನ್ನೂ ನಿರ್ದೇಶಕರೇ ಬರೆದಿದ್ದಾರೆ. ‘ಶ್ರೀ ಮಹಾಬಲ ಕ್ರಿಯೇಷನ್ಸ್’ ಅಡಿಯಲ್ಲಿ ನಾಗರಾಜು ಕೆ.ವಿ. ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಸಭಾ ಕುಮಾರ್ ಛಾಯಾಗ್ರಹಣ, ಪ್ರದೀಪ್ ವರ್ಮ ಸಂಗೀತ ನಿರ್ದೇಶನ, ಬಿ.ಎಸ್. ಕೆಂಪರಾಜ್ ಅವರ ಸಂಕಲನ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net