

ಚಿತ್ರ: ಕೊತ್ತಲವಾಡಿ
ನಿರ್ದೇಶನ: ಶ್ರೀರಾಜ್
ನಿರ್ಮಾಣ: ಪುಷ್ಪ ಅರುಣ್ ಕುಮಾರ್
ತಾರಾಗಣ: ಪೃಥ್ವಿ ಅಂಬಾರ್, ಕಾವ್ಯ ಶೈವ, ಗೋಪಾಲಕೃಷ್ಣ ದೇಶಪಾಂಡೆ, ಮಾನಸಿ ಸುಧೀರ್, ರಾಜೇಶ್ ನಟರಂಗ, ಬಾಲರಾಜ್ ವಾಡಿ ಮತ್ತಿತರರು
| ಹರ್ಷವರ್ಧನ್ ಬ್ಯಾಡನೂರು
ಅದು ಕೊತ್ತಲವಾಡಿ. ಅಲ್ಲೊಬ್ಬ ಅನಾಥ ಮೋಹನ (ಪೃಥ್ವಿ). ಕೂಲಿಗೆ, ಅನಾಥ ಹೆಣಗಳ ಮುಂದೆ ಅಳೋಕೆ ಜನರನ್ನು ಕಳಿಸುವ ಮೇಸ್ತ್ರಿ. ಮೋಹನನಿಗೂ ಅಪ್ಪ, ಅಮ್ಮನ್ನ ಕಳೆದುಕೊಂಡು ಅಜ್ಜಿ ನೆರಳಲ್ಲಿರುವ ಮಂಜಿಗೂ (ಕಾವ್ಯ) ಪ್ರೀತಿ. ಅದೇ ಊರಿನ ಗುಜರಿ ವ್ಯಾಪಾರಿ ರಮೇಶ್ ಬಾಬು ಆಲಿಯಾಸ್ ಸ್ಕ್ರ್ಯಾಪ್ ಬಾಬು (ಗೋಪಾಲಕೃಷ್ಣ). "ತುಟಿಗೆ ಜೇನು ಸವರಿ, ತುತ್ತಿಗೆ ವಿಷ ಬೆರೆಸೋ ಕುತಂತ್ರಿ', "ರಕ್ತಬೀಜಾಸುರನ ಸಂತಾನ'. ಬಾಬಣ್ಣನ ದೇವರು ಕೊಟ್ಟ ತಮ್ಮ ಈ ಮೋಹನ. ರಾಜಕೀಯ ಮತ್ತು ಧರ್ಮ ಎರಡೂ ಜಗತ್ತಿನಲ್ಲೇ ಅತಿಹೆಚ್ಚು ಸಂಪಾದನೆ ತಂದುಕೊಡುವ ಆಟಗಳು ಅಂತ ಗೊತ್ತಾಗಿ, ಜನರನ್ನು ಮಾತಿನಿಂದ ಮರುಳು ಮಾಡಿ ಅಕ್ರಮ ಮರಳು ಸಾಗಾಣಿಕೆ ದಂಧೆ ಪ್ರಾರಂಭಿಸುತ್ತಾನೆ. ಹಿಂದೆ ಹೆಂಡತಿಯಿಲ್ಲ, ಮುಂದೆ ಮಕ್ಕಳಿಲ್ಲ ಆದರೂ ಬಾಬಣ್ಣನಿಗೆ "ಪವರ್' ಮೇಲೆ ಆಸೆ ಹೆಚ್ಚುತ್ತದೆ. ಕೊತ್ತಲವಾಡಿ ಎಂಎಲ್ಎ ತಮ್ಮಣ್ಣ ತೀರಿಕೊಂಡ ವಿಷಯ ಕೇಳಿ ತಾನೇಕೆ ಶಾಸಕನಾಗಬಾರದು ಎಂಬ ಐಡಿಯಾ ಹೊಳೆಯುತ್ತದೆ. ಅದರ ನಡುವೆಯೇ ಮತ್ತೊಂದೆಡೆ ಎಸ್ಪಿ ಪರಶುರಾಮ್ (ರಾಜೇಶ್) ಶತಾಯಗತಾಯ ಅಕ್ರಮ ಮರಳು ಮಾಫಿಯಾಗೆ ಅಂತ್ಯ ಹಾಡಲು ಮುಂದಾಗುತ್ತಾರೆ. ಹಾಗಾದರೆ ಮಣ್ಣಿಗಾಗಿ ನಡೆಯುವ ಹೋರಾಟದಲ್ಲಿ ಯಾರು ಮಣ್ಣು ಮುಕ್ಕಿಸುತ್ತಾರೆ? ಯಾರು ಮಣ್ಣಾಗುತ್ತಾರೆ? ತಿಳಿಯಲು "ಕೊತ್ತಲವಾಡಿ' ನೋಡಿ.
ಚಿತ್ರದ ಹೈಲೈಟ್ ಬಾಬಣ್ಣ ಪಾತ್ರದಲ್ಲಿ ನಟಿಸಿರುವ ಗೋಪಾಲಕೃಷ್ಣ ದೇಶಪಾಂಡೆ. ಮನೋಜ್ಞ ಅಭಿನಯದ ಮೂಲಕ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಆ್ಯಕ್ಷನ್ ಸನ್ನಿವೇಶಗಳಲ್ಲಿ ಪೃಥ್ವಿ ಮಾಸ್ ಹೀರೋ ಆಗಿ ಮಿಂಚಿದ್ದಾರೆ. ಎಮೋಷನಲ್ ಸೀನ್ಗಳಲ್ಲಿ ಕಾವ್ಯ ಗಮನ ಸೆಳೆಯುತ್ತಾರೆ. ಉಳಿದ ಪಾತ್ರಗಳು ಚಿತ್ರಕ್ಕೆ ಪೂರಕವಾಗಿವೆ.
ಚೊಚ್ಚಲ ಚಿತ್ರದಲ್ಲಿಯೇ ನಿರ್ದೇಶಕ ಶ್ರೀರಾಜ್ ಭರವಸೆ ಮೂಡಿಸುತ್ತಾರೆ. ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಆದರೆ, ಹಿನ್ನೆಲೆ ಸಂಗೀತ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ರು ನಿಡುವಳ್ಳಿ ಸಂಭಾಷಣೆಯಲ್ಲಿ ಹಳ್ಳಿಯ ಜಾನಪದ ನಾಣ್ಣುಡಿ, ಗಾದೆ, ಗ್ರಾಮೀಣ ಸೊಗಡಿದ್ದು ಚಿತ್ರವನ್ನು ಪ್ರೇಕ್ಷಕರಿಗೆ ಆಪ್ತವಾಗಿಸುತ್ತದೆ. ನಟನೆ ಕಲಿಯಲು ಇಚ್ಛಿಸುವವರು, ಗೋಪಾಲಕೃಷ್ಣ ದೇಶಪಾಂಡೆಯವರ ಇದುವರೆಗಿನ ಅತ್ಯುತ್ತಮ ಪಾರ್ಮೆನ್ಸ್ ನೋಡಲು ಬಯಸುವವರು, ಒಂದೊಳ್ಳೆ ಗ್ರಾಮೀಣ ಸೊಗಡಿನ ಕಮರ್ಷಿಯಲ್ ಕಥೆ ನೋಡಲು ಇಷ್ಟಪಡುವವರಿಗೆ "ಕೊತ್ತಲವಾಡಿ' ಉತ್ತಮ ಆಯ್ಕೆ.