

ಬೆಂಗಳೂರು: ಹೆಚ್ಚೆಚ್ಚು ನಾಯಕಿ ಪ್ರಧಾನ ಸಿನಿಮಾಗಳಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ ನಟಿ ಪ್ರಿಯಾಂಕಾ ಉಪೇಂದ್ರ. ಸದ್ಯ ಅವರ ಸಿನಿಮಾ ಬತ್ತಳಿಕೆಯಲ್ಲಿ ಅದೇ ಮಾದರಿಯ ಹಲವು ಸಿನಿಮಾಗಳಿವೆ. ಈಗ ಮತ್ತೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದು, ಆ ಚಿತ್ರಕ್ಕೆ ‘ಮಿಸ್ ನಂದಿನಿ’ ಎಂದು ಹೆಸರಿಡಲಾಗಿದೆ.
ಕಳೆದ ನಾಲ್ಕೈದು ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡಿದ ಅನುಭವ ಇರುವ ಗುರುದತ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ‘ಸೈಕೋಪಾತ್’ ಚಿತ್ರ ನಿರ್ದೇಶಿಸಿದ ಅವರಿಗೆ, ‘ಮಿಸ್ ನಂದಿನಿ’ ಎರಡನೇ ಸಿನಿಮಾ. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಗುರುದತ್, ‘ಪ್ರಸ್ತುತ ಸರ್ಕಾರಿ ಶಾಲೆಗಳು ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಿದ್ದೇವೆ. ಇದೇ 16ರಿಂದ ಕಡೂರು, ಬಾಗಲಕೋಟೆ ಸುತ್ತಮುತ್ತ ಶೂಟಿಂಗ್ ನಡೆಯಲಿದೆ’ ಎನ್ನುತ್ತಾರೆ. ಇನ್ನು ಮೊದಲ ಬಾರಿ ಶಿಕ್ಷಕಿಯಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಖುಷಿಯಲ್ಲಿದ್ದಾರೆ ಪ್ರಿಯಾಂಕಾ, ‘ಇಲ್ಲಿಯವರೆಗೂ ಬೇರೆಬೇರೆ ಅವತಾರದಲ್ಲಿ ಕಾಣಿಸಿಕೊಂಡಿದ್ದೇನೆ. ಇದೀಗ ಶಿಕ್ಷಕಿ ಪಾತ್ರ ಸಿಕ್ಕಿದೆ. ಸರ್ಕಾರಿ ಕನ್ನಡ ಶಾಲೆಗಳ ಉಳಿವಿನ ಕಥೆ ಇದು. ನಿರ್ದೇಶಕರು ಸಂದೇಶದ ಜತೆಗೆ ಕಮರ್ಷಿಯಲ್ ಅಂಶಗಳನ್ನೂ ಕಥೆಯಲ್ಲಿ ಸೇರಿಸಿದ್ದಾರೆ’ ಎನ್ನುತ್ತಾರೆ ಪ್ರಿಯಾಂಕಾ. ಕನ್ನಡದ ಜತೆಗೆ ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಈ ಚಿತ್ರ ಸಿದ್ಧವಾಗಲಿದೆ. ವೀರೇಶ್ ಛಾಯಾಗ್ರಹಣ, ಸಾಯಿಸರ್ವೆಶ್ ಸಂಗೀತ ನೀಡಲಿದ್ದಾರೆ. ಆರ್.ಕೆ ಪ್ರೊಡಕ್ಷನ್ ಹೌಸ್ ಚಿತ್ರ ನಿರ್ವಿುಸುತ್ತಿದೆ.